
ವೀರಶೈವ ಲಿಂಗಾಯತ ಸಮಾವೇಶ ವಿಜಯೇಂದ್ರ ಹಾಗೂ ಯಡಿಯೂರಪ್ಪ ಬೆಂಬಲಿಗರಿಂದ ನಡೆಯುತ್ತಿದ್ದು, ಹೈಕಮಾಂಡ್ಗೆ ಸಂದೇಶ ರವಾನೆ ಮಾಡುವ ಉದ್ದೇಶ ಇರುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ. ಆದರೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡುವುದು ಬೇಡ ಎಂದು ರೇಣುಕಾಚಾರ್ಯಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ನಾಯಕರ ಮಾತಿಗೆ ಸಡ್ಡು ಹೊಡೆದಿದ್ದಾರೆ ಅನ್ನೋದು ಗೊತ್ತಾಗಿದೆ.

ನಮ್ಮ ಸಮಾವೇಶ ನಡೆದೇ ನಡೆಯುತ್ತದೆ. ಬಿಜೆಪಿಗೂ ನಮ್ಮ ಸಮಾವೇಶಕ್ಕೂ ಯಾವುದೇ ಸಂಬಂಧ ಇಲ್ಲ. ಸಮಾಜ ಒಡೆಯುವ ಕೆಲಸವನ್ನು ಕೆಲವು ದುಷ್ಟ ಶಕ್ತಿಗಳು ಮಾಡುತ್ತಿವೆ. ಅದೇ ಕಾರಣಕ್ಕೆ ಒಗ್ಗೂಡಿಸಬೇಕೆಂದು ಸಮಾವೇಶ ಮಾಡ್ತಿದ್ದೇವೆ. ಜಾತಿ ಜನಗಣತಿ ಅವೈಜ್ಞಾನಿಕವಾಗಿದೆ. ಅಖಿಲ ಭಾರತ ವೀರಶೈವ ಮಾಹಸಭಾ ಕೂಡ ಇದನ್ನ ಸ್ಪಷ್ಟಪಡಿಸಿದೆ. ಹಿರಿಯ ನಾಯಕ ಶ್ಯಾಮನೂರು ಶಿವಶಂಕರಪ್ಪ ಅವರು ಇದನ್ನ ಸ್ಪಷ್ಟಪಡಿಸಿದ್ದಾರೆ. ಇದನ್ನ ನಾವು ವಿರೋಧಿಸುತ್ತೇವೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರು ನಮಗೆ ಸಭೆ ಮಾಡದಂತೆ ಸೂಚಿಸಿದ್ದಾರೆ. ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ಹೇಳಿದ್ದಾರೆ. ಆದರೂ ಸಮಾವೇಶ ಮಾಡುತ್ತೇವೆ ಎಂದಿದ್ದಾರೆ.
ಯಡಿಯೂರಪ್ಪನವರು ಮತ್ತು ವಿಜಯೇಂದ್ರ ಈ ಸಮಾವೇಶ ಮಾಡಬೇಡಿ ಎಂದು ಹೇಳಿದ್ದಾರೆ. ಬಿಜೆಪಿ ಸಂಘಟನೆಗೂ ಈ ಸಮಾವೇಶಕ್ಕೂ ಸಂಬಂಧ ಇಲ್ಲ. ಪೂರ್ವಭಾವಿ ಸಭೆ ಮಾಡಿದ್ದೇವೆ. ಸಮಾಜದ ಮುಖಂಡರು, ಮಠಾಧೀಶರು ಸೇರಿದ್ದೇವೆ. ಯತ್ನಾಳ್ ಕೂಡ ನಮ್ಮ ಸಮುದಾಯದ ಮುಖಂಡರು. ರಾಜಕೀಯವಾಗಿ ಅವರನ್ನ ಬಳಸಿಕೊಳ್ಳಲಾಗ್ತಿದೆ. ಈ ಹಿಂದೆ ನನ್ನನ್ನೂ ಹೀಗೆ ಬಳಸಿಕೊಂಡಿದ್ರು. ಈಗ ಆತ್ಮಾವಲೋಕನ ಮಾಡಿಕೊಂಡು ಜೊತೆಗಿದ್ದೇನೆ. ಯತ್ನಾಳ್ರನ್ನೂ ಕೂಡ ಬಳಸಿಕೊಳ್ಳಲಾಗ್ತಿದೆ. ಇದನ್ನ ಅವರು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಮುದಾಯದ ಸಭೆಗೆ ಯತ್ನಾಳ್ ಕೂಡ ಬರಬಹುದು, ಅವರಿಗೂ ಆಹ್ವಾನ ನೀಡಲಾಗುತ್ತದೆ ಎಂದಿದ್ದಾರೆ.

ನಾನು ಬಿಜೆಪಿ ಪಕ್ಷದಲ್ಲಿ ಯಾವುದೇ ಪದಾಧಿಕಾರಿಯೂ ಅಲ್ಲ. ನಮ್ಮ ಸಮಾವೇಶದ ಉದ್ದೇಶವೇ ಬೇರೆ ಇದೆ. ಜಾತಿ ಗಣತಿ ವಿರೋಧ, ಸಮಾಜ ಒಗ್ಗೂಡಿಸುವ ವಿಚಾರ ಎಲ್ಲವೂ ಇದೆ. ಯತ್ನಾಳ್ ಕೂಡ ಸಮಾವೇಶಕ್ಕೆ ಬರಬಹುದು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ನಾನು ಯತ್ನಾಳ್ಗೂ ಆಹ್ವಾನ ಮಾಡ್ತೇವೆ. ನಾವು ನಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ತೇನೆ. ನಾನು ಬೆಂಡಾಗಲ್ಲ ಬಗ್ಗಲ್ಲ ಜಗ್ಗಲ್ಲ, ನಮ್ಮಲ್ಲಿ ಸಂಘರ್ಷ ಬೇಡ ಒಟ್ಟಾಗಿ ಹೋಗೊಣ ಎಂದು ಬಿಜೆಪಿ ನಾಯಕರಿಗೆ ಕಿವಿ ಮಾತನ್ನೂ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಹಾಗು ವಿಜಯೇಂದ್ರ ಬೆನ್ನೆಲುಬಾಗಿ ನಿಂತು ಸಮಾವೇಶದ ಮೂಲಕ ಸಂದೇಶ ಕಳುಹಿಸುತ್ತಿದ್ದಾರೆ ಅನ್ನೋ ಮಾತುಗಳಂತೂ ರಾಜಕೀಯ ವಲಯದಲ್ಲಿ ನಡೆಯುತ್ತಿರುವ ಚರ್ಚೆ.
