ಸಿಎಂ ಸಿದ್ದರಾಮಯ್ಯ ಅವರು ದೇಶಕ್ಕೆ ಮಾದರಿ ಬಜೆಟ್ ಮಂಡನೆ ಮಾಡಿದ್ದಾರೆ. ಬಿಜೆಪಿಯವರು ಬಜೆಟ್ ಬಗ್ಗೆ ಸುಳ್ಳು ಹೇಳದೆ ಇನ್ನೇನು ಮಾಡಲು ಸಾಧ್ಯ? ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ( DK Shivakumar ) ಅವರು ತಿರುಗೇಟು ನೀಡಿದ್ದಾರೆ

ಬೆಂಗಳೂರು, ( ಮಾ.08 ) ಸಿಎಂ ಸಿದ್ದರಾಮಯ್ಯ ನವರ ( CM Siddaramaiah ) ಬಜೆಟ್ ಮಂಡನೆಗೆ ಈ ಬಜೆಟ್ ಹಲಾಲ್ ಬಜೆಟ್ ಎಂದು ಟೀಕೆ ಮಾಡಿರುವ ಬಿಜೆಪಿ ನಾಯಕರ( BJP Leders ) ವಿರುದ್ಧ ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಾಪ ಅವರು ಏನು ಮಾಡುತ್ತಾರೆ. ಈ ರೀತಿ ಹೇಳಿಕೆಗಳನ್ನ ಕೊಡುವುದು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ?. ನಮ್ಮ ಬಜೆಟ್ ಮಂಡನೆಯನ್ನು ಅವರು ಕಣ್ಣಾರೆ ಓದಿದ್ದು, ಕಿವಿಯಾರೆ ಕೇಳಿದ್ದು, ಈ ರೀತಿಯ ಸುಳ್ಳು ಪ್ರಚಾರ ಮಾಡ್ತಿದ್ದಾರೆ.. ಕಣ್ಣು ಕಿವಿಯಲ್ಲಿ ಸುಳ್ಳು ಹೇಳಲು ಆಗುವುದಿಲ್ಲ. ಬಾಯಲ್ಲಿ ಮಾತ್ರ ಸುಳ್ಳು ಹೇಳಲು ಸಾಧ್ಯ. ಹೀಗಾಗಿ ಈ ರೀತಿ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಅವರು ಐತಿಹಾಸಿಕ ಹಾಗೂ ದೇಶಕ್ಕೆ ಮಾದರಿ ಬಜೆಟ್ ಕೊಟ್ಟಿದ್ದಾರೆ. ಮುಂದೆ ಬೇರೆ ಬೇರೆ ರಾಜ್ಯಗಳು ನಮ್ಮ ಬಜೆಟ್ ಪಾಲನೆ ಮಾಡಲಿವೆ. ಈ ಬಜೆಟ್ ಸಮಾಜದ ಎಲ್ಲಾ ವರ್ಗದವರಿಗಾಗಿ ಮಾಡಿರುವ ಬಜೆಟ್ ಎಂದರು.
ಬ್ರ್ಯಾಂಡ್ ಬೆಂಗಳೂರು ಜಾರಿ
ಇನ್ನು ಇದೇ ವೇಳೆ ಬ್ರ್ಯಾಂಡ್ ಬೆಂಗಳೂರಿನ ( Brand Bangalore ) ಮಹತ್ವದ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ರಾಜಧಾನಿಯಲ್ಲಿರುವ 1.40 ಕೋಟಿ ಜನರಿಗೆ ಅನುಕೂಲವಾಗಲಿದೆ ಅಂತಾ ಹೇಳಿದ್ದರು. ಟನಲ್ ರಸ್ತೆ ಆಗುತ್ತೆ. ಮುಂದೆ ಎಲ್ಲಾ ಮೆಟ್ರೋ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆ ಮಾಡಲಾಗುತ್ತೆ. ಪಾಲಿಕೆ ಹಾಗೂ ಬಿಎಂಆರ್‌ಸಿಎಲ್ ಇದರ ವೆಚ್ಚವನ್ನು 50:50 ಅನುಪಾತದಲ್ಲಿ ಭರಿಸಲಿವೆ.

ಇನ್ನು ರಾಜಕಾಲುವೆ ಅಕ್ಕಪಕ್ಕದಲ್ಲಿ 50 ಅಡಿ ಬಫರ್ ವಲಯದಲ್ಲಿ 300 ಕಿ.ಮೀ ಉದ್ದದಷ್ಟು ರಸ್ತೆ ನಿರ್ಮಾಣ ಮಾಡಲಾಗುತ್ತೆ. ಈ ಯೋಜನೆಗೆ 3 ಸಾವಿರ ಕೋಟಿ ಮೀಸಲಿಡಲಾಗಿದೆ. ಬಫರ್ ರಸ್ತೆ, ಮೇಲ್ಸೇತುವೆ, ಟನಲ್ ರಸ್ತೆಗಳ ಮೂಲಕ ಬೆಂಗಳೂರುನಲ್ಲಿ 700-800 ಕಿ.ಮೀ ಉದ್ದದಷ್ಟು ಹೊಸ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. ಜನರ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಸಾಲ ಮಾಡಿಯಾದರೂ ಈ ಯೋಜನೆ ಮಾಡುತ್ತೇವೆ. ಇಡೀ ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದ್ದು, ಈ ನಗರಕ್ಕೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ತಿಳಿಸಿದರು.
ಸಿಂಗ್ ಅವರಿಗೆ ಇನ್ನಷ್ಟು ಮಾನ್ಯತೆ ನೀಡಬೇಕು
ಬೆಂಗಳೂರು ವಿವಿಗೆ ಡಾ. ಮನಮೋಹನ್ ಸಿಂಗ್ ( Man mohan singh ) ಹೆಸರು ಇಟ್ಟಿರುವ ಬಗ್ಗೆ ವಿವಾದ ಕೇಳಿ ಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ದೀನದಯಾಳ್ ಅವರು ಹೆಸರು ಇಡುವಾಗ ನಾವು ಮನಮೋಹನ್ ಸಿಂಗ್ ಹೆಸರು ಇಡಬಾರದೆ?. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮೇಲ್ಸೇತುವೆ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ, ನೆಲಮಂಗಲ ಮೇಲ್ಸೇತುವೆ, ಜೆ.ಎನ್ ನರ್ಮ್ ಯೋಜನೆ, ನರೇಗಾ, ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಶಾ ಕಾರ್ಯಕರ್ತ ಯೋಜನೆ ಜಾರಿಗೆ ತಂದವರು ಇವರು. ಬಿಜೆಪಿಯವರು ಇಂತಹ ಯಾವುದಾದರೂ ಒಂದು ಯೋಜನೆ ಮಾಡಿದ್ದಾರಾ?. ದೇಶ ಹಾಗೂ ಕರ್ನಾಟಕ ರಾಜ್ಯದ ಕೊಡುಗೆಗೆ ಮನಮೋಹನ್ ಸಿಂಗ್ ಅವರು ಕೊಟ್ಟಿರುವ ಕೊಡುಗೆಗೆ ಅವರಿಗೆ ಇನ್ನಷ್ಟು ಮಾನ್ಯತೆ ನೀಡಬೇಕು” ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕಕ್ಕೆ ಲಾಟರಿ
ಕಲ್ಯಾಣ ಕರ್ನಾಟಕ ಪ್ರವಾಸದ ಬಗ್ಗೆ ಮಾತನಾಡಿದ ಅವರು, ಖರ್ಗೆ ಅವರು ಆರ್ಟಿಕಲ್ 371ಜೆ ಜಾರಿಗೆ ತಂದರು. ಇನ್ನು ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ಪ್ರತಿ ವರ್ಷ 5 ಸಾವಿರ ಕೋಟಿ ನೀಡುತ್ತಿದ್ದೇವೆ. ಇಂದು ಕೂಡ ಸಚಿವ ಪ್ರಿಯಾಂಕ್ ಖರ್ಗೆ, ಸಂಸದರಾದ ರಾಧಾಕೃಷ್ಣ ಅವರ ಜತೆ ಜೇವರ್ಗಿಗೆ ತೆರಳಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು ಎಂದರು.
ನೀರಾವರಿ ಇಲಾಖೆಗೆ ಅನುದಾನ ಕಡಿಮೆ
ನೀರಾವರಿ ಇಲಾಖೆಗೆ ಕಳೆದ ಬಾರಿಗಿಂತ ರೂ. 2 ಸಾವಿರ ಕೋಟಿ ಹೆಚ್ಚಿಗೆ ನೀಡಲಾಗಿದೆ. ನೀರಾವರಿಗೆ ನಾವು ಬೇರೆ ಯೋಜನೆ ರೂಪಿಸಿದ್ದೇವೆ. ಮಧ್ಯದಲ್ಲಿ ಬೇರೆ ಘೋಷಣೆ ಆಗಲಿದೆ, ಮಂಡಳಿಗಳಲ್ಲಿ ಕೆಲವು ತೀರ್ಮಾನ ಮಾಡಿದ್ದೇವೆ ಎಂದು ಡಿಸಿಎಂ ಹೇಳಿದರು.