“ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು 16 ನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ ಎಂದು ಬಿಜೆಪಿಯವರು ಹೊಟ್ಟೆ ಉರಿದುಕೊಂಡು ಸಾಯುತ್ತಿದ್ದಾರೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM DK shivakumar)ಅವರು ಪ್ರತಿಪಕ್ಷಗಳ ಟೀಕೆಗಳಿಗೆ ಖಡಕ್ ಉತ್ತರ ನೀಡಿದರು.

ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳಿಗೆ ಶುಕ್ರವಾರ ಪ್ರತಿಕ್ರಿಯೆ ನೀಡಿದರು.
ಬಜೆಟ್ ಬಗ್ಗೆ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ, ಉತ್ತಮವಾದ ಬಜೆಟ್ ನೀಡುತ್ತಿದ್ದಾರಲ್ಲ ಎನ್ನುವ ಹೊಟ್ಟೆಯುರಿ. ನೆನ್ನೆ ವಿರೋಧ ಪಕ್ಷಗಳ ಶಾಸಕರು ಕೇವಲ ಫೋಟೋಗಾಗಿ ಮಾತ್ರ ಬಂದಿದ್ದರು. ಏನನ್ನೂ ಕೇಳಲು ಬಂದಿರಲಿಲ್ಲ. ಮುಖ್ಯಮಂತ್ರಿಗಳು ಇಲಾಖೆಗೆ ಏನು ಕೊಡಬೇಕು ಎಂದು ಸಚಿವರ ಬಳಿ ಚರ್ಚೆ ಮಾಡುತ್ತಾರೆ” ಎಂದು ತಿರುಗೇಟು ನೀಡಿದರು.

ಕಳೆದ ಎರಡು ದಿನಗಳಿಂದ ನೀಲಿ ಶಾಲು ಹಾಕಿಕೊಂಡು ಪ್ರತಿಪಕ್ಷಗಳು ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಕೇಳಿದಾಗ, “ಏನು ಬೇಕಾದರೂ ಮಾಡಲಿ. ಪ್ರತಿದಿನ ಬೇಕಾದರೂ ಪ್ರತಿಭಟನೆ ಮಾಡಲಿ, ಕೂಗಲಿ, ಕಿರುಚಲಿ. ನಾವು ರಾಜ್ಯದ ಜನತೆಗೆ ಏನು ಒಳ್ಳೆಯದು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದರು.
ಕರ್ನಾಟಕ ಉಳಿಸಿ ಎಂದು ಹೇಳುವುದಕ್ಕೆ ನೈತಿಕತೆಯಿಲ್ಲ

“ಬಿಜೆಪಿಗೆ ನಾಚಿಕೆಯಾಗಬೇಕು. ನಾವು ಕೊಟ್ಟ ಮಾತುಗಳನ್ನು ಉಳಿಸಿಕೊಂಡಿದ್ದೇವೆ. ಅವರ ಕಾಲದ ಬಜೆಟ್ ರೀತಿ ನಮ್ಮದು ಇರುವುದಿಲ್ಲ. ಕೇಂದ್ರ ಬಜೆಟ್ ಅಲ್ಲಿ ಕರ್ನಾಟಕಕ್ಕೆ ಏನೂ ಕೊಡುಗೆ ನೀಡಿಲ್ಲ. ಕರ್ನಾಟಕ ಉಳಿಸಿ ಎಂದು ಹೇಳುವುದಕ್ಕೆ ಅವರಿಗೆ ನೈತಿಕತೆಯಿಲ್ಲ. ನಾವು ನಮ್ಮ ಜನರನ್ನು ಕಾಪಾಡುತ್ತೇವೆ, ಕಾಪಾಡಿದ್ದೇವೆ” ಎಂದು ಹೇಳಿದರು.