೧ಕೆಜಿ ಜಿನ್ನಕ್ಕೆ ಸಿಗುತ್ತಿದ್ದ ಕಮಿಷನ್ 4 ರಿಂದ 5 ಲಕ್ಷ, ನಟಿ ಕೇವಲ ಪಾತ್ರಧಾರಿ, ಅಸಲಿ ಕಿಂಗ್‌ಪಿನ್ ಬೇರೆ!

ಚಿನ್ನವನ್ನು ನಟಿ ಯಾರಿಗೆ ಕೊಡ್ತಿದ್ರು?
ಚಿನ್ನ ಕಳ್ಳಸಾಗಣೆಯಲ್ಲಿ ರನ್ಯಾ ರಾವ್ (Ranya Rao) ಬಂಧನಕ್ಕೆ ಮತ್ತೊಂದು ಸ್ಫೋಟಕ ತಿರುವು ಸಿಕ್ಕಿದೆ. ರನ್ಯಾರನ್ನು ಬಂಧಿಸಿರುವ ಡಿಆರ್‌ಐ(DRI) ಅಧಿಕಾರಿಗಳ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಾಗಿವೆ. ರನ್ಯಾ ಕೇವಲ ಪಾತ್ರಧಾರಿ, ಅಸಲಿ ಕಿಂಗ್ ಬೇರೆಯೇ ಎನ್ನಲಾಗಿದೆ.
17 ಕೋಟಿ ಬೆಲೆಯ ಚಿನ್ನ ಖರೀದಿ ಮಾಡುವಷ್ಟು ರನ್ಯಾ ಶ್ರೀಮಂತಳಲ್ಲ. ರನ್ಯಾ ಹಿರಿಯ ಪೊಲೀಸ್ ಅಧಿಕಾರಿಯ ಮಲಮಗಳು. ಆಕೆಯನ್ನು ಬಳಸಿಕೊಂಡರೆ ಸುಲಭವಾಗಿ ಚಿನ್ನ ಸಾಗಾಟ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿ ರನ್ಯಾಳನ್ನು ಚಿನ್ನ ಸಾಗಾಟದಲ್ಲಿ ಬಳಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಅಕ್ರಮ ಚಿನ್ನ ಸಾಗಾಟದಲ್ಲಿ ಏರ್ಪೋರ್ಟ್‌ನ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಚಿನ್ನ ಸಾಗಾಟದಲ್ಲಿ ರನ್ಯಾಗೆ ಕೆಜಿಗೆ ನಾಲ್ಕರಿಂದ ಐದು ಲಕ್ಷ ಕಮಿಷನ್ ನೀಡುತ್ತಿದ್ದ ಬಗ್ಗೆ ಮಾಹಿತಿ ಇದೆ. ರನ್ಯಾ ಬೆಂಗಳೂರಿಗೆ ತಂದ ಚಿನ್ನವನ್ನು ಯಾರಿಗೆ ಕೊಡುತ್ತಿದ್ದರು ಎನ್ನುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸಲಾಗುತ್ತಿದೆ. ಎರಡು ವರ್ಷದ ರನ್ಯಾ ಬ್ಯಾಂಕ್ ವಿವರ, ಆಕೆಯ ಮೊಬೈಲ್ ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಡಿಆರ್‌ಐ ಅಧಿಕಾರಿಗಳು ಅಸಲಿ ಕಿಂಗ್‌ಪಿನ್‌ಗಳ ಬೆನ್ನು ಬಿದ್ದಿದ್ದಾರೆ.
ರನ್ಯಾ ರಾವ್ (Ranya Rao) ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ದಾಳಿಯ ಸಂದರ್ಭದಲ್ಲಿ 2.67 ಕೋಟಿ ರೂ. ನಗದು, 2.06 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ 17.29 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಇದೊಂದು ಅತೀ ದೊಡ್ಡ ಕಾರ್ಯಾಚರಣೆ ಎಂದು ಮಾಧ್ಯಮ ಹೇಳಿಕೆ ಹೇಳಿಕೆ ಬಿಡುಗಡೆ ಮಾಡಿದೆ.

14.2 ಕೆಜಿ ಚಿನ್ನ ಕಳ್ಳಸಾಗಾಟದಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್‌ಗೆ ಜೈಲಾಧಿಕಾರಿಗಳು ವಿಚಾರಣಾಧೀನ ಖೈದಿ ಸಂಖ್ಯೆ ನೀಡಿದ್ದಾರೆ. ನಟಿ ರನ್ಯಾ ರಾವ್ (Ranya Rao) ಮನೆ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ(DRI) ದಾಳಿ ನಡೆಸಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ. ಮಂಗಳವಾರ 14 ದಿನಗಳ ಕಾಲ ಮಾರ್ಚ್ 18 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದರು. ಕಳೆದ ರಾತ್ರಿಯೇ ರನ್ಯಾ ರಾವ್ ಅವಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಿಡಲಾಗಿದೆ. ವಿಚಾರಣಾಧೀನ ಕೈದಿ ನಂಬರ್ (UTP) ನೀಡಿರುವ ಜೈಲಾಧಿಕಾರಿಗಳು ಇನ್ಮುಂದೆ ನಟಿ ರನ್ಯಾ ಜೈಲಿನಲ್ಲಿ ಇರುವವರೆಗೂ ಇದೇ 2198 /25 ಎಂದೇ ಕರೆಯಲಾಗುತ್ತದೆ.
40 ಬಾರಿ ದುಬೈಗೆ ಹೋಗಿದ್ದ ರನ್ಯಾ ಅಧಿಕಾರಿಗಳ ಬಲೆಗೆ ಬಿದ್ದಿದ್ದೆ ರೋಚಕ
ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಅರೆಸ್ಟ್ ಆಗಿರುವ ನಟಿ ರನ್ಯಾ ರಾವ್ (Ranya Rao) ಪ್ರಕರಣ ಅಗೆದಷ್ಟು ಬಯಲಾಗುತ್ತಲೇ ಇದೆ. ಈ ನಟಿಯ ಕೇವಲ ಒಂದೆರಡು ಬಾರಿ ದುಬೈಗೆ ಹೋಗಿಲ್ಲ. ಈಕೆ ಬರೋಬ್ಬರಿ 40 ಬಾರಿ ದುಬೈಗೆ ಹೋಗಿ ಬಂದಿರುವ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಬಂಧನಕ್ಕೂ 2 ವಾರಗಳ ಹಿಂದೆ ರನ್ಯಾ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನು ಡಿಜಿಪಿ ಮಗಳು ಎಂದು ತಪಾಸಣೆಗೆ ಒಳಗಾಗದೇ ಹೊರಗೆ ಬರುತ್ತಿದ್ದದ್ದಳು. ಪ್ರತಿ ಬಾರಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳದ ಬಳಿಕ ರನ್ಯಾಳ ಮೇಲೆ ಕಣ್ಣಿಟ್ಟಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯ ವಿದೇಶ ಪ್ರಯಾಣದ ಹಿನ್ನೆಲೆಯನ್ನು ಕೆದಕುತ್ತಾ ಹೋದಾಗ ಒಂದೊಂದಾಗಿಯೇ ಎಲ್ಲವೂ ಬಯಲಾಗಿದೆ.

ಕಳೆದೊಂದು ವರ್ಷದಿಂದ ನಿರಂತರವಾಗಿ ದುಬೈ ಹಾಗೂ ಮಲೇಷ್ಯಾಕ್ಕೆ ರನ್ಯಾ ಪಯಣಿಸಿದ್ದಳು. ಅದರಲ್ಲೂ ಹೆಚ್ಚಿನ ಬಾರಿ ದುಬೈಗೆ ಹೋಗುತ್ತಿದ್ದ ರನ್ಯಾಳಿಗೆ ಯಾವುದೇ ಹೂಡಿಕೆ, ರಕ್ತ ಸಂಬಂಧಿಕರು ಇಲ್ಲ ಎಂಬ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಡಿಆರ್‌ಐ ಅಧಿಕಾರಿಗಳು ಆಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ರನ್ಯಾ ಮತ್ತೆ ದುಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಜಾಗೃತರಾದ ಅಧಿಕಾರಿಗಳು ರನ್ಯಾ ಬರುವಿಕೆಗಾಗಿಯೇ ಕಾಯುತ್ತಿದ್ದರು. ಮಾ. 3 ರಂದು ರನ್ಯಾ ಪತಿ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಣಕ್ಕೆ ಬಂದಿಳಿಯುತ್ತಿದ್ದಂತೆ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ.

ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ತಿಳಿದಿದೆ. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್‌ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್‌ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿದೆ. ಆಗಲೂ ಸಹ ರನ್ಯಾಳನ್ನ ತಪಾಸಣೆ ಇಲ್ಲದೆ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ತೆರಳಿದ್ದರು. ರನ್ಯಾಳನ್ನ ಅಧಿಕಾರಿಗಳು ವಶಕ್ಕೆ ಪಡೆದಾಗ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ.