ಮೋಹನದಾಸ್ ಪೈಗೆ ಕುಟುಕಿದ ಸಚಿವ
ಬೆಂಗಳೂರು: ಉದ್ಯಮಿ ಮೋಹನದಾಸ್ ಪೈ ಅವರು ಬೆಂಗಳೂರು ನಗರದ ವ್ಯವಸ್ಥೆ ಸುಧಾರಣೆಗೆ ಸಲಹೆ ಕೊಡಲಿ, ಆದರೆ ವಿನಾ ಕಾರಣ ಟೀಕಿಸುವುದನ್ನು ಬಿಡಲಿ. ಪದೇ ಪದೇ ಹೀಗೆ ಮಾತನಾಡುತ್ತಿರುವ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಕುಟುಕಿದ್ದಾರೆ.

ಗುರುವಾರ ತಮ್ಮ ನಿವಾಸದಲ್ಲಿ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪೈ ಕೂಡ ಬೆಂಗಳೂರಿನಿಂದಲೇ ಲಾಭ ಮಾಡಿಕೊಂಡಿರುವವರು. ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡಿರುವವರು. ಈಗ ಅವರು ಇಲ್ಲಿಂದ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗಲು ತಯಾರಿಲ್ಲ’ ಎಂದು ಹರಿಹಾಯ್ದಿದ್ದಾರೆ.
ಸಂಚಾರ ದಟ್ಟಣೆ ಬರೀ ಬೆಂಗಳೂರಿನ ಸಮಸ್ಯೆಯಲ್ಲ. ಲಂಡನ್, ಸ್ಯಾನ್ ಫ್ರಾನ್ಸಿಸ್ಕೊ, ಚೆನ್ನೈ ಎಲ್ಲ ಕಡೆಗಳಲ್ಲೂ ಇದೆ. ಈ ಬಗ್ಗೆ ಪೈ ಯಾಕೆ ಮಾತನಾಡುವುದಿಲ್ಲ? ಲಂಡನ್ನಿನಲ್ಲಿ ನಾನೇ ಒಂದೂವರೆ ಮೈಲುದ್ದದ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ್ದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಹದಿನೈದಿಪ್ಪತ್ತು ಮೈಲಿ ಸಂಚಾರ ದಟ್ಟಣೆ ಸೃಷ್ಟಿಯಾಗಿದ್ದಿದೆ ಎಂದು ಅವರು ಉತ್ತರಿಸಿದ್ದಾರೆ.

ಬೆಂಗಳೂರು ‘ಗ್ರೋಯಿಂಗ್ ಸಿಟಿ’ಯ ಜತೆಗೆ ‘ಗ್ಲೋಬಲ್ ಸಿಟಿ’ ಕೂಡ ಆಗಿದೆ. ಹೀಗಾಗಿಯೇ ಕರ್ನಾಟಕದ ಸಮಗ್ರ ಅಭಿವೃದ್ಧಿ ನಮ್ಮ ಆದ್ಯತೆಯಾಗಿದೆ. ಮೋದಿ ಸರಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಯಾರೇ ಆಗಲಿ, ಸರಕಾರಕ್ಕೆ ರಚನಾತ್ಮಕ ಸಲಹೆ ಕೊಡಬಹುದು. ಪೈ ಅವರು ನನ್ನನ್ನಗಾಲಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಗಳನ್ನಾಗಲಿ ಅಥವಾ ಐಟಿ ಸಚಿವರನ್ನೇ ಆಗಲಿ ಕಾಣಬಹುದು. ಇದೇ ಪೈ ಮಳೆಗಾಲದಲ್ಲಿ ಬೆಂಗಳೂರಿನ ಒಂದು ಕಡೆ ಪ್ರವಾಹ ಉಂಟಾದಾಗ ವಾಗ್ದಾಳಿ ಮಾಡಿದ್ದರು. ಆದರೆ ಆಗ ಇಡೀ ಚೆನ್ನೈ ನಗರವೇ ಜಲಾವೃತವಾದರೂ ಜಾಣಮೌನ ವಹಿಸಿದ್ದರು. ಬಿಜೆಪಿ ನಮ್ಮ ಕಾರ್ಯಕ್ರಮಗಳನ್ನೇ ನಕಲು ಮಾಡುತ್ತಿದೆ. ಇದನ್ನು ಕಂಡರೂ ಇವರೇಕೆ ಸುಮ್ಮನಿದ್ದಾರೆ ಎಂದು ಪಾಟೀಲ ನೆನಪಿಸಿದ್ದಾರೆ.
ತೆಲಂಗಾಣಕ್ಕೆ ಕೃಷ್ಣಾ ನೀರು, ತಪ್ಪೇನಿಲ್ಲ

ಕುಡಿಯುವ ನೀರಿನ ಉದ್ದೇಶಕ್ಕಾಗಿ ಆಲಮಟ್ಟಿ ಆಣೆಕಟ್ಟೆಯಿಂದ ತೆಲಂಗಾಣಕ್ಕೆ 1.24 ಟಿಎಂಸಿ ಅಡಿ ನೀರನ್ನು ಬಿಟ್ಟಿರುವುದರಲ್ಲಿ ತಪ್ಪೇನೂ ಇಲ್ಲ. ಕೆಲವೊಂದು ವಿಚಾರಗಳನ್ನು ನಾವು ಮಾನವೀಯವಾಗಿ ನೋಡಬೇಕಾಗುತ್ತದೆ ಎಂದು ಸಚಿವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.