
ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು: ಕಾರ್ಮಿಕ ಸಚಿವ ಸಂತೋಷ್ ಲಾಡ್(Santhosh Lad)
ಧಾರವಾಡ, ಫೆಬ್ರುವರಿ̈19: ಕಲಬುರಗಿಯ ಖಾಸಗಿ ಕಂಪೆನಿಯಲ್ಲಿ ಮೃತ ಕಾರ್ಮಿಕನ ದೇಹವನ್ನು ಅಮಾನುಷವಾಗಿ ಇತರೆ ಕಾರ್ಮಿಕರು ಎಳೆದೊಯ್ದಿರುವ ಘಟನೆ ತೀವ್ರ ದಿಗ್ಭ್ರಮೆ ಮೂಡಿಸಿದೆ. ಕೃತ್ಯ ಎಸಗಿದವರನ್ನು ಬಂಧಿಸಲಾಗಿದೆ. ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಹೇಳಿದ್ದಾರೆ.

ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು, ಜೊತೆಯಲ್ಲೇ ಕೆಲಸ ಮಾಡುವ ಕಾರ್ಮಿಕ ಮೃತಪಟ್ಟಾಗ ಸಹ ಕಾರ್ಮಿಕರು ಈ ರೀತಿ ಅಮಾನುಷವಾಗಿ ಮೃತದೇಹದೊಂದಿಗೆ ನಡೆದುಕೊಂಡಿದ್ದಾರೆ ಎಂಬುದೇ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ಕಾರ್ಮಿಕರೇ ಮೃತದೇಹವನ್ನು ಎಳೆದೊಯ್ದಿದ್ದನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಇಂತಹುದು ನಡೆಯಬಾರದಿತ್ತು. ಮತ್ತೆ ಇದು ನಮ್ಮ ಮನಸ್ಥಿತಿಯನ್ನು ತೋರಿಸುತ್ತದೆ. ಘಟನೆ ಬಗ್ಗೆ ವಿಷಾದವಿದೆ. ಮನುಷ್ಯರಲ್ಲಿ ಮಾನವೀಯತೆಯೇ ಮುಖ್ಯವಾಗಬೇಕು. ಮೃತದೇಹಕ್ಕೆ ಹೇಗೆ ಗೌರವ ಕೊಡಬೇಕು ಎಂಬ ಬಗ್ಗೆ ನಾವು ತಿಳಿದಿರಬೇಕು ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ಈಗಾಗಲೇ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಡನೆ ಮಾತನಾಡಿ ಮಾಹಿತಿ ತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
