
ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಜ್ಣಾನೇಶ್ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಆದದೆ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಜ್ಞಾನೇಶ್ಕುಮಾರ್ ಆಯ್ಕೆ ವಿರೋಧಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.

ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ನೇಮಕವಾಗಿದ್ದಾರೆ. ಆಯ್ಕೆ ಸಮಿತಿ ಸಭೆಯಲ್ಲಿ ಜ್ಞಾನೇಶ್ ಕುಮಾರ್ ನೇಮಕಕ್ಕೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ವಿರೋಧ ವ್ಯಕ್ತಪಡಿದ್ದರು. ಆದರೂ ಪಟ್ಟು ಬಿಡದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿ, ಜ್ಞಾನೇಶ್ ಕುಮಾರ್ ಅವರನ್ನ CEC ಆಗಿ ನೇಮಿಸಿದೆ. ಇದು ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿಗೆ ಕಾರಣವಾಗಿದೆ.
ಜ್ಞಾನೇಶ್ ಕುಮಾರ್ ಅವರ ನೇಮಕ ನಿರ್ಧಾರವನ್ನು ವಿರುದ್ಧ ರಾಹುಲ್ ಗಾಂಧಿ ಸಿಟ್ಟಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಸಭೆಯಲ್ಲಿ ಭಿನ್ನಾಭಿಪ್ರಾಯ ಎದುರಾಗಿತ್ತು. ಈ ಬಗ್ಗೆ ಎಕ್ಸ್ನಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಅಲ್ಲದೇ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುವವರೆಗೂ ಹೊಸ ಆಯುಕ್ತರ ನೇಮಕ ನಿರ್ಧಾರವನ್ನ ಮುಂದೂಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾರ್ಯಾಂಗದ ಹಸ್ತಕ್ಷೇಪದಿಂದ ಮುಕ್ತವಾದ ಸ್ವತಂತ್ರ ಚುನಾವಣಾ ಆಯೋಗದ ಅತ್ಯಂತ ಮೂಲಭೂತ ಅಂಶವೆಂದರೆ, ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆ. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸಮಿತಿಯಿಂದ ತೆಗೆದುಹಾಕುವ ಮೂಲಕ, ಕೇಂದ್ರ ಸರ್ಕಾರವು ನಮ್ಮ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯ ಬಗ್ಗೆ ಲಕ್ಷಾಂತರ ಮತದಾರರ ಕಳವಳವನ್ನು ಹೆಚ್ಚಿಸಿದೆ ಎಂದಿದ್ದಾರೆ.

ವಿರೋಧ ಪಕ್ಷದ ನಾಯಕನಾಗಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ನಮ್ಮ ರಾಷ್ಟ್ರ ನಿರ್ಮಾಣಕಾರರ ಆದರ್ಶಗಳನ್ನು ಎತ್ತಿಹಿಡಿಯುವುದು ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುವುದು ನನ್ನ ಕರ್ತವ್ಯ. ಸಮಿತಿಯ ಸಂಯೋಜನೆ ಮತ್ತು ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನಿಸಲಾಗುತ್ತಿದೆ. 48 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿಚಾರಣೆಗೆ ಬರಲಿರುವಾಗ, ಹೊಸ ಸಿಇಸಿಯನ್ನು ಆಯ್ಕೆ ಮಾಡಲು ಪ್ರಧಾನಿ ಮತ್ತು ಗೃಹ ಸಚಿವರು ಮಧ್ಯರಾತ್ರಿ ನಿರ್ಧಾರ ತೆಗೆದುಕೊಂಡಿರುವುದು ಅಗೌರವ ಮತ್ತು ಅಸಭ್ಯ ಎಂದಿದ್ದಾರೆ.