ಕೊಡಗು (Kodagu) ಜಿಲ್ಲೆಯಲ್ಲಿ ವಿವಿಧ ಸಭೆ-ಸಮಾರಂಭಗಳು, ವಿವಾಹಗಳಲ್ಲಿ ಮದ್ಯ ಪೂರೈಕೆಗೆ ಅನುಮತಿ ಕಡ್ಡಾಯಗೊಳಿಸಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ.
ಕಲ್ಯಾಣಮಂಟಪ, ಹೋಂಸ್ಟೇ, ರೆಸಾರ್ಟ್ ಸೇರಿದಂತೆ ವಿವಿಧೆಡೆ ನಡೆಯುವ ಸಭೆ ಸಮಾರಂಭ, ಮದುವೆ, ನಾಮಕರಣ ಸೇರಿದಂತೆ ಯಾವುದೇ ಕಾರ್ಯಕ್ರಮಗಳಲ್ಲಿ ಇನ್ಮುಂದೆ ಅನುಮತಿ ಇಲ್ಲದೆ ಮದ್ಯ ಪೂರೈಕೆ ಮಾಡುವಂತಿಲ್ಲ. ಸಮಾರಂಭ ಆಯೋಜಿಸುವವರು ಸಂಬಂಧಪಟ್ಟ ಇಲಾಖೆಯಿಂದ ಸಿಎಲ್-5 ಸನ್ನದು ಪಡೆದು ಮದ್ಯ ಪೂರೈಸಬಹುದು ಎಂದು ಅಬಕಾರಿ ಇಲಾಖೆ ಸ್ಪಷ್ಟಪಡಿಸಿದೆ. ದಿನವೊಂದಕ್ಕೆ 11.500 ರೂ ಪಾವತಿಸಿ ಅನುಮತಿ ಪಡೆಯಬಹುದು ಎಂದು ಇಲಾಖೆ ತಿಳಿಸಿದೆ.

ಹೊಸ ನಿಯಮವಲ್ಲ, ಹಳೇ ನಿಯಮವನ್ನೇ ಕಡ್ಡಾಯಗೊಳಿಸಲಾಗಿದೆ: ಇಲಾಖೆ ಸ್ಪಷ್ಟನೆ..
ಯಾವುದೇ ಸಭೆ ಸಮಾರಂಭಗಳಲ್ಲಿ ಮದ್ಯ ಪೂರೈಕೆ ಮಾಡಲು ಸಿಎಲ್ 5 ತಾತ್ಕಾಲಿಕ ಅನುಮತಿ ಪಡೆಯುವುದು ಹೊಸ ನಿಯಮವೇನಲ್ಲ. ಹಲವು ದಶಕಗಳಿಂದಲೇ ಈ ನಿಯಮ ಎಲ್ಲ ಕಡೆ ಜಾರಿಯಲ್ಲಿದೆ. ಆದರೆ ಕೊಡಗು ಚಿಕ್ಕಮಗಳೂರು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮದುವೆ ಸೇರಿದಂತೆ ವಿವಿಧ ಸಮಾರಂಭಗಳಲ್ಲಿ ಮದ್ಯ ಪೂರೈಸುವುದು ಒಂದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಹೀಗಾಗಿ ಈ ನಿಯಮಗಳನ್ನು ಕಡ್ಡಾಯಗೊಳಿಸಿರಲಿಲ್ಲ. ಆದರೆ, ಇದೀಗ ಈ ನಿಯಮವನ್ನು ಕಡ್ಡಾಯಗೊಳಿಸಲಾಗಿದೆ ಎಂದು ಮಡಿಕೇರಿ ಅಬಕಾರಿ ಆಯುಕ್ತ ನಾಗೇಶ್ ಕುಮಾರ್ ತಿಳಿಸಿದ್ದಾರೆ.

50 ಜನರನ್ನು ಸೇರಿಸಿ ಮಾಡುವ ಪುಟ್ಟ ನಾಮಕರಣ ಸಮಾರಂಭಕ್ಕೆ 11.500 ರೂ. ತೆತ್ತು ಅನುಮತಿ ಪಡೆಯುವುದು ಎಷ್ಟು ಸರಿ ಅಂತ ಜಿಲ್ಲೆಯ ನಾಗರಿಕರು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆಯೂ ಒಮ್ಮೆ ಇದೇ ರೀತಿ ಸನ್ನದು ಕಡ್ಡಾಯಗೊಳಿಸಿ ಆದೇಶ ಮಾಡಿದ್ದಾಗ ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆ ಸಂದರ್ಭ ಆದೇಶವನ್ನು ಹಿಂದಕ್ಕೆ ಪಡೆಯಲಾಗಿತ್ತು. ಈಗಲೂ ಈ ನಿಯಮಕ್ಕೆ ಪಕ್ಷಾತೀತ ವಿರೋಧ ವ್ಯಕ್ತವಾಗುತ್ತಿದೆ. ಅಬಕಾರಿ ಇಲಾಖೆಯ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಯಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಯಾವುದೇ ಸಮಾರಂಭಗಳಿಗೆ ಕೊಡಗಿನ ಮೂಲಕ ನಿವಾಸಿಗಳು ಸಾಮಾನ್ಯವಾಗಿ ಯಥೇಚ್ಛವಾಗಿ ಮದ್ಯ ಪೂರೈಕೆ ಮಾಡುತ್ತಾರೆ. ಬಡವರೇ ಆಗಲಿ, ಶ್ರೀಮಂತರೇ ಆಗಲಿ ಮದ್ಯ ಪೂರೈಕೆ ಮಾಡುವುದು ಇತ್ತೀಚೆಗಿನ ಕೆಲ ದಶಕಗಳಿಂದ ಸಂಪ್ರದಾಯವಾಗಿ ಬೆಳೆದುಬಂದಿದೆ. ಹೀಗಾಗಿ ಯಾರೂ ಕೂಡ ಮದ್ಯ ಪೂರೈಕೆಗೆ ಅನುಮತಿ ಪಡೆಯುತ್ತಿರಲಿಲ್ಲ. ಎಲ್ಲವೂ ಸಹಜವಾಗಿಯೇ ನಡೆದುಹೋಗುತ್ತಿತ್ತು. ಚುನಾವಣಾ ಸಮಯದಲ್ಲಿ ಮಾತ್ರ ಸಮಾರಂಭಗಳಲ್ಲಿ ಮದ್ಯ ಹಂಚಲು ಅನುಮತಿ ಕಡ್ಡಾಯಗೊಳಿಸಲಾಗುತ್ತಿತ್ತು. ಆದರೆ ಇದೀಗ ಅಬಕಾರಿ ಇಲಾಖೆ ಸಿಎಲ್-5 ಸನ್ನದು ಕಡ್ಡಾಯಗೊಳಿಸಿರುವುದು ಬಹಳಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿದೆ.