1990 ರಲ್ಲಿ “ಕಳ್ಳ ಬಂದ ಕಳ್ಳ” ಸಿನಿಮಾ ಮೂಲಕ ಸಿನಿಜರ್ನಿ ಆರಂಭಿಸಿದ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಈವರೆಗೂ “ಅನಿಶ್ಚಿತ”, ” ಜ್ಯೋತಿ ಅಲಿಯಾಸ್ ಕೋತಿರಾಜ್”, “ಮಾನ”, ” ಧ್ವನಿ” “ಬೇಲಿ ಹೂ” ಹಾಗೂ ಪ್ರಸ್ತುತ ತನಿಷಾ ಕುಪ್ಪಂಡ ಹಾಗೂ ಮಾಲಾಶ್ರೀ ಅವರು ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಪೆನ್ ಡ್ರೈವ್” ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಸೆಬಾಸ್ಟಿಯನ್ ಡೇವಿಡ್ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.

ವೆಂಕಟೇಶ್ ಎಸ್ ನಿರ್ಮಿಸಿ, ಸೆಬಾಸ್ಟಿಯನ್ ಡೇವಿಡ್ ಅವರು ನಿರ್ದೇಶಿಸಿರುವ ಹಾಗೂ ಸಂಪತ್ ಮೈತ್ರೇಯ, ಶ್ವೇತ ಶ್ರೀವಾಸ್ತವ್, ಲಯನ್ ವೆಂಕಟೇಶ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಬೇಲಿ ಹೂ” ಚಿತ್ರ 16 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯಾ ಸಿನಿಮಾ ಹಾಗೂ ಕನ್ನಡ ಸಿನಿಮಾ ಎರಡು ವಿಭಾಗಗಳಿಗೆ ಆಯ್ಕೆಯಾಗಿದೆ.

ಅದರಲ್ಲೂ ಇಂಡಿಯಾ ಸಿನಿಮಾ ವಿಭಾಗದಲ್ಲಿ ಆಯ್ಕೆಯಾಗಿರುವ ಏಕೈಕ ಕನ್ನಡ ಸಿನಿಮಾ “ಬೇಲಿ ಹೂ”. ಇದು ನಿಜಕ್ಕೂ ನಮ್ಮೆಲ್ಲರಿಗೂ ಹೆಮ್ಮೆಯ ಹಾಗೂ ಸಂತೋಷದ ಸಂಗತಿ. ಇದೊಂದು ನೈಜ ಫಟನೆ ಆಧಾರಿತ ಚಿತ್ರವಾಗಿದೆ.

ಆಶಾ ಎಂಬ ಗ್ರಾಮೀಣ ಭಾಗದ ಹೆಣ್ಣುಮಗಳು ಮದ್ಯ ವ್ಯಸನಿ ಗಂಡನಿಂದ ನೊಂದು ಎರಡು ಮಕ್ಕಳ ಜೀವನಕ್ಕಾಗಿ ಹೆಣ ಹೂಳುವ ಕೆಲಸದಿಂದ ಆರಂಭಿಸಿ, ಅಂಬ್ಯುಲೆನ್ಸ್ ಚಾಲಕಿಯಾಗುತ್ತಾಳೆ. ಇಂತಹ ಆದರ್ಶ ಮಹಿಳೆ ಕುರಿತಾದ ಈ ಚಿತ್ರದಲ್ಲಿ ನಟಿಸುವ ಎಲ್ಲಾ ಕಲಾವಿದರ ಅಭಿನಯ ತುಂಬಾ ಅಮೋಘವಾಗಿ ಮೂಡಿಬಂದಿದೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದನ್ನು ಶಿಂಗ್ ಸೌಂಡ್ ನಲ್ಲಿ ಚಿತ್ರಿಸಲಾಗಿದೆ. ಡಬ್ಬಿಂಗ್ ಮಾಡಿಲ್ಲ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಚಿತ್ರ ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎರಡು ವಿಭಾಗಗಳಲ್ಲಿ ಆಯ್ಕೆಯಾಗಿರುವುದಕ್ಕೆ ನಿರ್ದೇಶಕ ಸೆಬಾಸ್ಟಿಯನ್ ಡೇವಿಡ್ ಸೇರಿದಂತೆ ಚಿತ್ರತಂಡದ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ.