
ದೆಹಲಿಯನ್ನು ಆಪ್ ಮುಕ್ತ ಮಾಡಿದ ಬಳಿಕ ನರೇಂದ್ರ ಮೋದಿ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿ ದೆಹಲಿ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ದೆಹಲಿ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದೆ. ವಿಕಸಿತ ರಾಜಧಾನಿ ಮಾಡುವ ಅವಕಾಶ ಸಿಕ್ಕಿದೆ. ಮೋದಿ ಮೇಲೆ ಗ್ಯಾರಂಟಿ ಇಟ್ಟಿದ್ದಕ್ಕೆ ನಮನಗಳು ಎಂದಿದ್ದಾರೆ. ನಿಮ್ಮೆಲ್ಲರ ವಿಶ್ವಾಸಕ್ಕೆ ಧಕ್ಕೆ ಆಗದಂತೆ ಆಡಳಿತ ಮಾಡುತ್ತೇವೆ ಎಂದಿರುವ ಮೋದಿ, ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಅಭಿವೃದ್ಧಿ ಆಗುತ್ತದೆ ಎಂದಿದ್ದಾರೆ.
ದೆಹಲಿ ಪ್ರತಿ ಮತದಾರನೂ ಈ ಜಯದ ಲಾಭ ಸಿಗುತ್ತದೆ ಎಂದಿರುವ ಪ್ರಧಾನಿ ಅಹಂಕಾರ, ದುರಾಡಳಿತದ ಆಪ್ಗೆ ಸೋಲಾಗಿದೆ. ದೆಹಲಿಯ ಜನಾದೇಶ ಸ್ಪಷ್ಟ, ಬಿಜೆಪಿಗೆ ಜೈಕಾರ. ಸುಳ್ಳು ಹೇಳಿ ಆಡಳಿತ ಮಾಡೋ ಕಾಲ ಹೋಗಿದೆ. ದೆಹಲಿ ಜನರ ಭರವಸೆಗಳನ್ನು ನಾವು ನಿರಾಸೆ ಮಾಡಲ್ಲ. ಲೋಕಸಭೆ ಚುನಾವಣೆಗಳಲ್ಲಿ ಜನ ಬೆಂಬಲಿಸಿದ್ದಾರೆ. ದೇಶದ ಬಿಜೆಪಿ ಕಾರ್ಯಕರ್ತರಿಗೆ ಹೊಸ ಉತ್ಸಾಹ ಬಂದಿದೆ. ಲೋಕಸಭೆ ಬಳಿಕ ಹರಿಯಾಣದಲ್ಲಿ ದಾಖಲೆ ಆಯ್ತು. ಮಹಾರಾಷ್ಟ್ರದಲ್ಲಿ ಹೊಸ ದಾಖಲೆಯೇ ಆಯ್ತು. ಇದೀಗ ದೆಹಲಿಯಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿದೆ ಎಂದಿದ್ದಾರೆ.

ದೆಹಲಿ ಬರೀ ದೆಹಲಿಯಲ್ಲ.. ಮಿನಿ ಹಿಂದೂಸ್ಥಾನ ಎಂದಿರುವ ಮೋದಿ, ಏಕ್ ಭಾರತ್ ಶ್ರೇಷ್ಠ್ ಭಾರತ್ನ ಗೆಲುವು ಇದು ಎಂದಿದ್ದಾರೆ. ದೆಹಲಿಯಲ್ಲಿ ದೇಶದ ಮೂಲೆ ಮೂಲೆಯ ಜನರಿದ್ದಾರೆ. ವಿವಿಧತೆ ಇರುವ ದೆಹಲಿಯಲ್ಲಿ ಬಿಜೆಪಿಗೆ ಪ್ರಚಂಡ ಜಯ ಸಿಕ್ಕಿದೆ, ವಿವಿಧ ರಾಜ್ಯ, ವಿವಿಧ ಭಾಷೆಗಳ ಜನರು ಕಮಲ ಗೆಲ್ಲಿಸಿದ್ದಾರೆ. ಪೂರ್ವಾಂಚಲ ಜನರ ಆಶೀರ್ವಾದ, ಪ್ರೀತಿಗೆ ಆಭಾರಿ. ಪೂರ್ವಾಂಚಲದ ಸಂಸದನಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ. ಅಯೋಧ್ಯೆಯ ಮಿಲ್ಕಿಪುರದಲ್ಲೂ ಬಿಜೆಪಿಗೆ ಜಯ ಸಿಕ್ಕಿದೆ. ತುಷ್ಟೀಕರಣದ ಬದಲು ಸಂತುಷ್ಟೀಕರಣದ ರಾಜಕೀಯಕ್ಕೆ ಗೆಲುವು ಸಿಕ್ಕಿದೆ ಎಂದಿದ್ದಾರೆ.
ಆಪ್ನಿಂದಾಗಿ ದೆಹಲಿ ಜನರಿಗೆ ಬಹುದೊಡ್ಡ ನಷ್ಟವಾಗಿದೆ. ಮೆಟ್ರೋ ಕೆಲಸ ನಿಲ್ಲಿಸಿದ್ರು, ಆಯುಷ್ಮಾನ್ ನಿಲ್ಲಿಸಿದ್ರು. ದ್ರೋಹ ಮಾಡಿದ ಸರ್ಕಾರಕ್ಕೆ ಜನ ಬುದ್ಧಿ ಕಲಿಸಿದ್ದಾರೆ ಎಂದಿರುವ ಮೋದಿ, ದೆಹಲಿ ಜನರಿಗಾಗಿ ಹಗಲು-ರಾತ್ರಿ ಕೆಲಸ ಮಾಡ್ತೇವೆ. ಎನ್ಡಿಎ ಇರುವ ಕಡೆ ಅಭಿವೃದ್ಧಿ, ವಿಶ್ವಾಸ ಇದೆ. ಜನರ ಪ್ರೀತಿ, ವಿಶ್ವಾಸ ಗಳಿಸಲು ಎನ್ಡಿಎ ಸಫಲವಾಗ್ತಿದೆ. ಬಹುತೇಕ ರಾಜ್ಯಗಳಲ್ಲಿ ನಾವು 2 ಬಾರಿ ಸರ್ಕಾರ ಮಾಡಿದ್ದೇವೆ. ಮಹಾರಾಷ್ಟ್ರದಲ್ಲಿ ರೈತರಿಗೆ ಅನ್ಯಾಯ ಆಗೋದನ್ನು ನಿಲ್ಲಿಸಿದ್ದೀವಿ. ಹರಿಯಾಣದಲ್ಲಿ ಸರ್ಕಾರಿ ನೌಕರಿಗಳನ್ನು ನೀಡಿದ್ದೇವೆ. ಗುಜರಾತ್ನಲ್ಲೂ ಅಭಿವೃದ್ಧಿ ಕಾರ್ಯಗಳು ಡಬಲ್ ಆಗಿವೆ ಎಂದಿದ್ದಾರೆ.

ಬಿಹಾರ, ಆಂಧ್ರಪ್ರದೇಶಗಳು ಅಭಿವೃದ್ಧಿ ಆಗುತ್ತಿವೆ. ಬಡವರು, ಮಧ್ಯಮ ವರ್ಗದ ಜನರಿಗೆ ನೆಮ್ಮದಿ ಜೀವನ ಸಿಕ್ಕಿದೆ. ಕೇಂದ್ರ ಸರ್ಕಾರದ ಯೋಜನೆಗಳು ಕನಸು ನನಸಾಗಿಸಿವೆ. ದೇಶದಲ್ಲಿ ನಾರಿಶಕ್ತಿ ಹೆಚ್ಚಿದೆ, ದೆಹಲಿಯಲ್ಲೀ ನಾರಿಶಕ್ತಿ ಬಲ ಬಂದಿದೆ. ನಾರಿಶಕ್ತಿಗೆ ಬಲ ತುಂಬಲು ಯೋಜನೆಗಳು ಲಾಭವಾಗ್ತಿವೆ ಎಂದಿರುವ ಮೋದಿ, ಏಕ್ ಭಾರತ್, ಶ್ರೇಷ್ಠ್ ಭಾರತ್ಗೆ ನಾರಿಶಕ್ತಿ ಬಲವಿದೆ. ದೆಹಲಿ ಅಭಿವೃದ್ಧಿಗೆ ಎಲ್ಲಾ ದಾರಿಗಳು ತೆರೆದುಕೊಳ್ಳಲಿವೆ. ಯುವಕರಿಗೆ ಉದ್ಯೋಗವಕಾಶಗಳು ಸಿಗಲಿವೆ ಎಂದು ಭರವಸೆ ನೀಡಿದ್ದಾರೆ. ನಗರೀಕರಣದಿಂದ ಬಡವರು, ವಂಚಿತರಿಗೆ ಬಲ ಬರಲಿದ್ದು, ನಗರದ ಮೂಲಸೌಕರ್ಯಗಳು ದೆಹಲಿಗೆ ಸಿಗಲಿವೆ. ಗಂಗೇಚ್ಛ, ಯಮುನೇಚ್ಛ ಶ್ಲೋಕ ಪಠಿಸಿದ್ದಾರೆ ಮೋದಿ. ಗಂಗಾ ಮಾದರಿಯಲ್ಲೇ ಯಮುನೆಯ ಶುದ್ಧೀಕರಣ ಮಾಡಲಾಗುವುದು. ಕಠಿಣ ಸಂಕಲ್ಪವನ್ನು ಪೂರೈಸುವ ಕೆಲಸ ಮಾಡ್ತೇವೆ. ಯಮುನಾ ಸೇವೆಗೆ ಮುಕ್ತ ಮನಸ್ಸಿನಿಂದ ಕೆಲಸ ಆಗುತ್ತದೆ ಎಂದಿದ್ದಾರೆ.

ಅಣ್ಣಾ ಹಜಾರೆ ಮಾತುಗಳಿಂದಾದ್ರೂ ಬುದ್ಧಿ ಕಲಿಯಲಿ ಎಂದಿರುವ ಮೋದಿ, ಭ್ರಷ್ಟಾಚಾರ ವಿರೋಧಿಸಿ ಬಂದವರು ಭ್ರಷ್ಟಾಚಾರದಲ್ಲೇ ಮುಳುಗಿದ್ರು. ಬಡವರನ್ನು ಇನ್ನಷ್ಟು ಬಡವರನ್ನಾಗಿಸಿದರು. ಕೊರೊನಾ ಸಂಕಷ್ಟದಲ್ಲೂ ಶೀಶ್ ಮಹಲ್ ಮಾಡಿದ್ರು. ಭ್ರಷ್ಟರಿಂದ ದಿನದಿನವೂ ದೆಹಲಿ ನಲುಗಿ ಹೋಗಿದೆ. ಬಿಜೆಪಿ ಸರ್ಕಾರದ ಮೊದಲ ಅಧಿವೇಶನದಲ್ಲೇ ಸಿಎಜಿ ವರದಿ ಮಂಡಿಸಿ, ಆಪ್ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಕೆಲಸ ಆಗುತ್ತದೆ. ಇದು ಮೋದಿ ಸರ್ಕಾರದ ಗ್ಯಾರಂಟಿ ಎಂದಿದ್ದಾರೆ.
ಕಾಂಗ್ರೆಸ್ಗೂ ಇದು ಹ್ಯಾಟ್ರಿಕ್ ಸೋಲಿನ ದಾಖಲೆ ಎಂದಿದ್ದಾರೆ. ಕಾಂಗ್ರೆಸ್ಗೆ ಸೋಲಿನ ಚಿನ್ನದ ಪದಕ ಕೊಡಬೇಕು. ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ. ಕಾಂಗ್ರೆಸ್ನ ವೋಟ್ಬ್ಯಾಂಕ್ ರಾಜಕಾರಣ ಮುಗಿದಿದೆ. ದೆಹಲಿ ತೀರ್ಪು ಕಾಂಗ್ರೆಸ್ಗೆ ಅತಿದೊಡ್ಡ ಪಾಠ ಕಲಿಸಿದೆ ಎಂದಿದ್ದಾರೆ.