ಹುದ್ದೆ ಭರವಸೆ ಈಡೇರಿಸುವಲ್ಲಿ ನಿಯಮ ಗಾಳಿಗೆ ತೂರಿತಾ ಸಿದ್ದರಾಮಯ್ಯ ಸರ್ಕಾರ..
ಅಧ್ಯಕ್ಷರಾಗಲು ಬೇಕಿರುವುದು BE(Environmental awareness)-ನರೇಂದ್ರಸ್ವಾಮಿ ಓದಿರುವುದು BE(Civil)..
ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷತೆಯ ವಾಸ್ತುವೇ ಸರಿ ಇಲ್ಲ ಅನಿಸುತ್ತಿದೆ. ಹೊಸದಾಗಿ ಅಧ್ಯಕ್ಷರಾಗಿ ಬಂದರೂ ಅವರ ಸುತ್ತ ವಿವಾದ ಸುತ್ತಿಕೊಳ್ಳುತ್ತಲೇ ಇರುತ್ತದೆ. ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆ ಮಳವಳ್ಳಿ ಶಾಸಕ ಎಂ.ನರೇಂದ್ರಸ್ವಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದ ಬೆನ್ನಲ್ಲೇ ಎದುರಾಗಿರುವ ಗೊಂದಲದ ಪ್ರಶ್ನೆ ಕಾಡುವುದು ಸಹಜ.. ಆದರೆ ಇದು ಖುರ್ಚಿಗೆ ಸಂಬಂಧಿಸಿದ ವಾಸ್ತುದೋಷದ ಕಥೆಯೋ ಅಥವಾ ನೇಮಕಾತಿ ವಿಚಾರದಲ್ಲಿ ಸರ್ಕಾರ ಗೊತ್ತಿದ್ದೂ ಮಾಡಿಕೊಂಡಿರುವ ಯಡವಟ್ಟು ಅಷ್ಟೆ.
ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸುವ ಭರವಸೆ ನೀಡುವ ಸನ್ನಿವೇಶದಲ್ಲಿಯೇ ಅದರಷ್ಟೆ ಪವರ್ ಫುಲ್ ಆದ ಸ್ಥಾನವೊಂದನ್ನು ದಯಪಾಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭರವಸೆ ಕೊಟ್ಟಿದ್ದರಂತೆ. ಅದರ ಫಲವೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷಗಾದಿ. ಹಾಗೆ ನೋಡಿದ್ರೆ ಮತ್ತು ಎಲ್ಲಾ ಪರಿಸ್ತಿತಿಗಳು ಅಂದುಕೊಂಡಂತೆ ಕೈಗೂಡಿದ್ದರೆ ತುಂಬಾ ಮುಂಚೆನೇ ಅವರು ಪರಿಸರ ಮಾಲಿನ್ಯ ನಿಯಂತ್ರನ ಮಂಡಳಿ ಅಧ್ಯಕ್ಷರಾಗಬೇಕಿತ್ತು. ಆದರೆ ಕೆಲವೊಂದು ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ.
ತಡವಾಗಿಯಾದ್ರೂ ನಿನ್ನೆ ಅಂದರೆ 05-02-2025 ರಂದು ಸರ್ಕಾರದಿಂದ ಅಧೀಕೃತವಾಗಿ ಅವರನ್ನು ಅಧ್ಯಕ್ಷರಾಗಿ ನೇಮಿಸಿರುವ ಸುತ್ತೊಲೆ ಹೊರಬಿತ್ತು. ರಾತ್ರೋರಾತ್ರಿನೇ ನರೇಂದ್ರಸ್ವಾಮಿ ಚರ್ಚ್ ಸ್ಟ್ರೀಟ್ ನಲ್ಲಿರುವ ಮಂಡಳಿಯ ಕೇಂದ್ರ ಕಚೇರಿಗೆ ಬಂದು ಅಧಿಕಾರವನ್ನೂ ಸ್ವೀಕರಿಸಿ ಅಧಿಕಾರಿಗಳ ಸಭೆಯನ್ನು ನಡೆಸಿದ್ರು. ಇವತ್ತು ಬೆಳ್ಳಂಬೆಳಗ್ಗೆನೂ ವಿಸಿಟ್ ಮಾಡಿ ಸಮಾಲೋಚನೆ ನಡೆಸಿ ವೈಯುಕ್ತಿಕ ಕಾರಣಕ್ಕೆ ಮಳವಳ್ಳಿಗೆ ತೆರಳಿದ್ರು.ಅವರು ಹೋಗುತ್ತಿದ್ದಂತೆಯೇ ಮಂಡಳಿಯ ಆವರಣದೊಳಗೆ ಸಾಮಾಜಿಕ ಕಾರ್ಯಜಕರ್ತರಾದ ನರಸಿಂಹ ಮೂರ್ತಿ, ವಕೀಲರಾದ ಎಂ.ಉಮಾಪತಿ, ಸುಧಾ ಕಾಟ್ವಾ ಅವರ ತಂಡ ಬಂದು ದೂರನ್ನು ನೀಡಿದೆ. ಅಧ್ಯಕ್ಷರ ನೇಮಕಾತಿ ಎಲ್ಲಾ ನಿಯಮಗಳನ್ನು ಮೀರಿ ನಡೆದಿದೆ. ಯಾರಿಗೆ ನಿಜವಾಗಿ ಅಧ್ಯಕ್ಷಗಿರಿ ಸಿಗಬೇಕೋ ಅವರಿಗೆ ನೀಡದೆ ರಾಜಕೀಯ ಪ್ರಾತಿನಿಧ್ಯತೆ ನೀಡಲಾಗಿದೆ. ಕೊಟ್ಟ ಮಾತು ಉಳಿಸಿಕೊಳ್ಳಲು ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ಅವರು ನರೇಂದ್ರಸ್ವಾಮಿ ಅವರಿಗೆ ಅಧ್ಯಕ್ಷಸ್ಥಾನ ನೀಡಿದ್ದಾರೆ ಎಂದು ಆಪಾದಿಸಿ ತತ್ ಕ್ಷಣಕ್ಕೆ ನರೇಂದ್ರಸ್ವಾಮಿ ಅವರ ನೇಮಕಾತಿ ರದ್ದು ಮಾಡಿ ಅರ್ಹರನ್ನು ಅಧ್ಯಕ್ಷರಾಗಿ ನೇಮಿಸುವಂತೆ ಸದಸ್ಯ ಕಾರ್ಯದರ್ಶಿಗಳ ಕಚೇರಿಗೆ ದೂರು ಸಲ್ಲಿಸಿ ತೆರಳಿದ್ದಾರೆ.
ದೂರಿನ ಸಾರಾಂಶವೇನು..? ವಾಟರ್ ಆಕ್ಟ್ 1974ರ ಸೆಕ್ಷನ್ 4 ರಲ್ಲಿ ಉಲ್ಲೇಖವಾಗಿರುವಂತೆ ಅಧ್ಯಕ್ಷರಾಗಿ ನೇಮಕ ಆಗುವವರು ಪರಿಸರ ವಿಷಯದಲ್ಲಿ ಕಡ್ಡಾಯವಾಗಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ ಪರಿಸರ ಎಂಜಿನಿಯರಿಂಗ್ ನಲ್ಲಿಯಾದರೂ ಪದವಿ ಪಡೆದಿರಬೇಕು. ನರೇಂದ್ರಸ್ವಾಮಿ ಅವರು ಬಿ.ಇ ಯಲ್ಲಿ ಸಿವಿಲ್ ಎಂಜಿನಿಯರ್ ಪದವೀಧರರಾಗಿದ್ದಾರೆ. ಇಂತವರನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ರೆ ಅವರು ಯಾವ್ ರೀತಿಯಲ್ಲಿ ಹುದ್ದೆಗೆ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಪ್ರಶ್ನಿಸಲಾಗಿದೆ.
ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿಲ್ಲ. ಅರ್ಹತೆಗಿಂತ ರಾಜಕೀಯ ಪ್ರಭಾವದ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. ಇದು ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆಯು ಹೌದು. ಈ ನೇಮಕಾತಿಯು ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ, 1974 ರ ಸ್ಪಷ್ಟ ಉಲ್ಲಂಘನೆಯಾಗಿರುವುದಷ್ಟೇ ಅಲ್ಲ, ಸುಪ್ರೀಂ ಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ತೀರ್ಪುಗಳಿಗೆ ವಿರುದ್ಧವಾಗಿದೆ.ನರೇಂದ್ರಸ್ವಾಮಿ ಅವರು ಈ ಹುದ್ದೆಗೆ ಅಗತ್ಯವಾದ ಅರ್ಹತೆಗಳನ್ನು ಹೊಂದಿಲ್ಲ, ಉದಾಹರಣೆಗೆ ಪರಿಸರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಪರಿಸರ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ ಎಂಬುದು ಸೇರಿದೆ.
ಅರ್ಜಿ: ಪತ್ರಿಕೆಗಳಲ್ಲಿ ಬಂದ ಜಾಹಿರಾತಿನ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ಕೋರಿ ಸಲ್ಲಿಸಲಾದ ಅರ್ಜಿಗಳು ಎಷ್ಟು ಗೊತ್ತಾ.. ಒಂದು ಮೂಲಗಳ ಪ್ರಕಾರ 65ಕ್ಕೂ ಹೆಚ್ಚಂತೆ.ಇದರಲ್ಲಿ ಅಧ್ಯಕ್ಷರಾಗಲು ಬೇಕಾದ ಎಲ್ಲಾ ಅರ್ಹತೆಗಳಿದ್ದ ಸಾಕಷ್ಟು ಜನರಿದ್ದರಂತೆ. ಆದರೆ ಸರ್ಕಾರ ಯಾವುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ನರೇಂದ್ರಸ್ವಾಮಿ ಅವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ನಿಯಮ ಉಲ್ಲಂಘಿಸಿ ನೇಮಕಾತಿ ಮಾಡಿ ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.
ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾದ ಪರಿಸರವಾದಿಗಳು/ಸಾಮಾಜಿಕ ಕಾರ್ಯಕರ್ತರು:
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದಲ್ಲಿ ಸರ್ಕಾರ ಏನ್ ಮಾಡುತ್ತೆನ್ನುವುದು ಸಾಮಾಜಿಕ ಕಾರ್ಯಕರ್ತರ ಕುತೂಹಲವಾಗಿರುತ್ತೆ. ಅದೇ ಕೌತುಕ ಈ ಬಾರಿಯೂ ಇತ್ತು. ಪರಿಸರವಾದಿಗಳು ಸದಾ ಇಂಥಾ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿರುತ್ತಾರೆನ್ನುವ ವಿಷಯ ಗೊತ್ತಿದ್ದರೂ ಸರ್ಕಾರ ಯಡವಟ್ಟು ಮಾಡಿಕೊಂಡಿದೆಯಾ ಎನಿಸುತ್ತೆ.