ಉತ್ತರಪರದೇಶ ಪ್ರಯಾಗರಾಜ್ (Prayagaraj) ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ (Kumbh mela) ಜನವರಿ 29ರ ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತದಲ್ಲಿ 30 ಮಂದಿ ಮೃತಪಟ್ಟು ಹಾಗೂ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ಯುಪಿ ಸರ್ಕಾರ ತನಿಖೆಗೆ ಆದೇಶಿಸಿತ್ತು.
ಹೀಗಾಗಿ ಯೋಗಿ ಸರ್ಕಾರ (Yogi adityanath) ಪ್ರಕರಣದ ತನಿಖೆಗೆ ಮೂವರು ಸದಸ್ಯರ ತನಿಖಾ ಸಮತಿ ರಚನೆ ಮಾಡಿದೆ. ಸದ್ಯ ದುರಂತ ಸ್ಥಳಕ್ಕೆ ತೆರಳಿ ಸಮಿತಿ ಪರಿಶೀಲನೆ ನಡೆಸಿದೆ. ಬ್ಯಾರಿಕೇಡ್‌ಗಳನ್ನು ದಾಟಿ ಜನ ಒಂದೇ ಬಾರಿಗೆ ನುಗ್ಗಿದ್ದರಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.
ಸದ್ಯ ಈ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ದುರಂತ ನಡೆದ ದಿನ ತ್ರಿವೇಣಿ ಸಂಗಮ ಪ್ರದೇಶದಲ್ಲಿ ಬರೋಬ್ಬರಿ 16 ಸಾವಿರ ಮೊಬೈಲ್ ನಂಬರ್‌ಗಳು ಸಕ್ರಿಯವಾಗಿದ್ದನ್ನ ತನಿಖೆಯಿಂದ ಪತ್ತೆ ಹಚ್ಚಿದ್ದಾರೆ.
ಸದ್ಯ 16 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ದತ್ತಾಂಶಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆ ಸಂಖ್ಯೆಗಳಲ್ಲಿ ಹಲವು ಪ್ರಸ್ತುತ ಸ್ವಿಚ್ ಆಫ್ ಆಗಿವೆ ಎನ್ನಲಾಗಿದೆ. ಸಿಸಿಟಿವಿ ದೃಶ್ಯಗಳನ್ನ ಸಂಗ್ರಹಿಸಿದ್ದು, ಶಂಕಿತರ ಗುರುತು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.