
ಬೀದರ್: ಕಾರಂಜಾ ಮುಳುಗಡೆ ಸಂತ್ರಸ್ತರಿಗೆ ಸಿಎಂ ಸಿದ್ದರಾಮಯ್ಯ ಅಭಯ ನೀಡಿದ ಬಳಿಕ ಅನಿರ್ದಿಷ್ಟಾವಧಿ ಹೋರಾಟ ಕೊನೆಗೊಳಿಸಲಿರುವ ಕಾರಂಜಾ ಸಂತ್ರಸ್ತರು ನಿರ್ಧಾರ ಮಾಡಿದ್ದಾರೆ. ಕಳೆದ 920 ದಿನಗಳ ನಿರಂತರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಅಂತ್ಯ ಮಾಡಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಕಾರಂಜಾ ಸಂತ್ರಸ್ತರು ಹೋರಾಟ ಕೊನೆಗೊಳಿಸಿದ್ದಾರೆ.
1971-72ರಲ್ಲಿ ಕಾರಂಜಾ ಡ್ಯಾಮ್ ನಿರ್ಮಾಣದ ಸಮಯದಲ್ಲಿ ಭೂಮಿ ಕಳೆದುಕೊಂಡಿರುವ ಸಂತ್ರಸ್ತರು, ವೈಜ್ಞಾನಿಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಕಚೇರಿ ಮುಂದೆ ನಿರಂತರ ಧರಣಿ ನಡೆಸುತ್ತಿದ್ದರು. ರಾಜ್ಯ ಸರ್ಕಾರ, ಜಿಲ್ಲಾಡಳಿತ ಸ್ಪಂದಿಸದಿದ್ದಕ್ಕೆ ಡಿಸೆಂಬರ್ 12ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಕಾರಂಜಾ ಸಂತ್ರಸ್ತರು.

ಆತ್ಮಹತ್ಯೆಗೆ ಯತ್ನ ಬಳಿಕ ಡಿಸೆಂಬರ್ 19 ರಂದು ಕಾರಂಜಾ ಸಂತ್ರಸ್ತರು, ಬೀದರ್ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದ್ದರು. ಸಭೆಯಲ್ಲಿ ಕಾರಂಜಾ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ ಮಾಡುವ ಭರವಸೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಸಿಎಂ ಸಿದ್ದರಾಮಯ್ಯ ಭರವಸೆ ಬೆನ್ನಲ್ಲೇ ಕಾರಂಜಾ ಮುಳುಗಡೆಯ 28 ಹಳ್ಳಿಗಳ ಸಂತ್ರಸ್ತರ ನಿರಂತರ ಹೋರಾಟಕ್ಕೆ ಇಂದು ಕೊನೆ ಆಗಿದೆ.