ಕಳೆದ ವರ್ಷ ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿತ್ತು. ಅಂದು ಶ್ರೀರಾಮನ ಮೂರ್ತಿ ಕೆತ್ತನೆಗೆ ರಾಮಲ್ಲಲ್ಲಾ ಟ್ರಸ್ಟ್ ಚಿನ್ನದ ಉಳಿ ಹಾಗು ಬೆಳ್ಳಿಯ ಸುತ್ತಿಗೆಯನ್ನು ನೀಡಿತ್ತು. ಆ ಬಗ್ಗೆ ಸಾಕಷ್ಟು ಚರ್ಚೆ ಕೂಡ ಆಗಿತ್ತು. ಆ ಚಿನ್ನದ ಉಳಿ ಹಾಗು ಬೆಳ್ಳಿಯ ಸುತ್ತಿಗೆಯನ್ನು ನೋಡುವುದಕ್ಕೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವಕಾಶ ಕಲ್ಪಿಸಿದ್ದಾರೆ.
ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕಲಾ ಶಾಲೆಯಲ್ಲಿ ವಸ್ತು ಪ್ರದರ್ಶನ ಆಯೋಜಿಸಿದ್ದಾರೆ. ಮೈಸೂರಿನ ಸಾಹುಕಾರ್ ಚೆನ್ನಯ್ಯ ರಸ್ತೆಯಲ್ಲಿರುವ ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲೆಯಲ್ಲಿ ಪ್ರದರ್ಶನ ಆಯೋಜಿಸಲಾಗಿದೆ. ಜನವರಿ 12ರ ತನಕ ನಡೆಯುವ ವಸ್ತು ಪ್ರದರ್ಶನದಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ ಪೀಠ, ಚಿನ್ನದ ಉಳಿ, ಬೆಳ್ಳಿಯ ಸುತ್ತಿಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ, ತಾಂಡವ ಮೂರ್ತಿಯನ್ನು ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದೆ.
ವಸ್ತು ಪ್ರದರ್ಶನದ ಬಗ್ಗೆ ಮಾತನಾಡಿರುವ ಶಿಲ್ಪಿ ಅರುಣ್ ಯೋಗಿರಾಜ್, ರಾಮಲಲ್ಲಾ ಮೂರ್ತಿ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಮೂರ್ತಿ ಪ್ರತಿಷ್ಠಾಪನೆಯಾಗಿ ವರ್ಷವಾಗಿದೆ. ಸಾಕಷ್ಟು ಅವಕಾಶಗಳು ನನಗೆ ಬರ್ತಿವೆ. ದೇವರು ಎಲ್ಲವನ್ನೂ ನನಗೆ ನೀಡಿದ್ದಾರೆ. ಇಂದು ನನ್ನ ಕೆತ್ತನೆಯ ಕೆಲವು ಶಿಲ್ಪಕಲಾ ಮೂರ್ತಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೇವೆ. ಎಲ್ಲವನ್ನೂ ಜನರು ಬಂದು ನೋಡಬಹುದು ಅಂತ ಅರುಣ್ ಯೋಗಿರಾಜ್ ತಿಳಿಸಿದ್ದಾರೆ.