
ದಾವಣಗೆರೆ: ಹಾಸನದಲ್ಲಿ ಸ್ವಾಬಿಮಾನಿ ಸಮಾವೇಶ ಮಾಡಲು ಮುಂದಾಗಿದ್ದ ಸಿದ್ದರಾಮಯ್ಯ ಆಪ್ತರಿಗೆ ಡಿ.ಕೆ ಶಿವಕುಮಾರ್ ಚೆಕ್ಮೇಟ್ ಕೊಟ್ಟಿದ್ದರು. ಆ ಬಳಿಕ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಆಗಿ ಬದಲಾಗಿತ್ತು. ಇದೀಗ ಕುರುಬರು ಹಾಗೂ ಅಹಿಂದ ಶೋಷಿತ ವರ್ಗಗಳ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಿದ್ದವಾಗಿದೆ. ದಾವಣಗೆರೆಯಲ್ಲಿ 537ನೇ ಕನಕ ಜಯಂತಿ ಹೆಸರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ.

ಇಂದು ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ನೆಡೆಯಲಿದ್ದು, ಸಿಎಂ ಸಿದ್ದರಾಮಯ್ಯ 537 ನೇ ಕನಕ ಜಯಂತಿ ಉದ್ಘಾಟನೆ ಮಾಡಲಿದ್ದಾರೆ. 50 ಸಾವಿರಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಸೇರುವ ನಿರೀಕ್ಷೆ ಇದೆ. ಸಿದ್ದರಾಮಯ್ಯ ಅಭಿಮಾನಿ ಬಳಗದಿಂದಲೇ ಕನಕ ಜಯಂತಿ ಆಚರಣೆ ಆಗುತ್ತಿದೆ ಎನ್ನುವುದು ವಿಶೇಷ.
ಕನಕ ಜಯಂತಿ ಹೆಸರಿನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅಹಿಂದ ಶಾಸಕರು, ಸಚಿವರು ಭಾಗಿಯಾಗುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ, H.C ಮಹದೇವಪ್ಪ, ಜಮೀರ್ ಅಹ್ಮದ್ ಖಾನ್ ಸೇರಿದಂತೆ ಅನೇಕ ಮಠಾಧಿಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಬಲ ಪಡಿಸುವ ಉದ್ದೇಶದಿಂದ ಕಾರ್ಯಕ್ರಮ ರೂಪುಗೊಂಡಿದೆ ಎನ್ನಲಾಗ್ತಿದೆ.

ಡಿ.ಕೆ ಶಿವಕುಮಾರ್ ವಿದೇಶ ಪ್ರವಾಸ ಕೈಗೊಂಡಿದ್ದು, ಇದೇ ಸಮಯದಲ್ಲಿ ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಅಭಿಮಾನಿಗಳು ಮುಂದಾಗಿದ್ದಾರೆ. ಈ ಹಿಂದೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗ್ತಿದ್ದ ಹಾಗೆ ಹೈಕಮಾಂಡ್ ಮೂಲಕ ಅಡ್ಡಗಾಲು ಹಾಕುವ ಪ್ರಯತ್ನ ನಡೆದಿತ್ತು. ಅದರಲ್ಲಿ ಡಿ.ಕೆ ಶಿವಕುಮಾರ್ ಸಕ್ಸಸ್ ಆಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳಿಗೆ ನೋವುಂಟು ಮಾಡಿತ್ತು.






