
ಬೆಂಗಳೂರಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಹೈಕೋರ್ಟ್ ರಿಲೀಫ್ ನೀಡಿದೆ. ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿದ ಹೈಕೋರ್ಟ್, ವಿಚಾರಣೆ ಮುಂದೂಡಿಕೆ ಮಾಡಿದೆ.
ತಮ್ಮ ಮೇಲಿನ ಪ್ರಕರಣ ರದ್ದು ಹಾಗೂ ತಡೆಯಾಜ್ಞೆ ಕೋರಿ ತೆಲುಗು ನಟಿ ಕೊಲ್ಲ ಹೇಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ರಜಾಕಾಲದ ಪೀಠ, ಕೆಳ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿ ಆದೇಶ ಮಾಡಿದೆ.
ಆರೋಪಿಗಳ ಹೇಳಿಕೆ ಆಧರಿಸಿ ಹೇಮಾ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯಿದೆ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಹೇಮಾ ಅವರು ಮಾದಕ ವಸ್ತು ಸೇವಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಹೀಗಾಗಿ ಪ್ರಕರಣಕ್ಕೆ ತಡೆ ನೀಡಬೇಕು ಎಂದು ಹೇಮಾ ಪರ ವಕೀಲರು ಮನವಿ ಮಾಡಿದ್ದರು.
ನಟಿ ಹೇಮಾ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. 2024ರ ಮೇ 19 ರಂದು ನಡೆದಿದ್ದ ರೇವ್ ಪಾರ್ಟಿಯಲ್ಲಿ ಹೇಮಾ ಭಾಗಿಯಾಗಿದ್ರು. ಹೆಬ್ಬಗೋಡಿ ಠಾಣಾ ವ್ಯಾಪ್ತಿಯ ಫಾರ್ಮ್ ಹೌಸ್ನಲ್ಲಿ ಪಾರ್ಟಿ ನಡೆಯುವಾಗಲೇ ಸಿಸಿಬಿ ತಂಡ ದಾಳಿ ಮಾಡಿ ವಶಕ್ಕೆ ಪಡೆದಿತ್ತು.
ಬರ್ತ್ ಡೇ ಹೆಸರಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಪಾರ್ಟಿಯಲ್ಲಿ ಮಾದಕವಸ್ತು ಸೇವನೆ ಆರೋಪ ಕೇಳಿ ಬಂದಿತ್ತು. ಈ ವೇಳೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ನಟಿ ಹೇಮಾ ಸೇರಿ ಹಲವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. FSL ರಿಪೋರ್ಟ್ನಲ್ಲೂ ಮಾದಕವಸ್ತು ಸೇವನೆ ಪತ್ತೆ ಆಗಿತ್ತು. ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಬೆಂಗಳೂರು ಗ್ರಾಮಾಂತರ 8ನೇ ಸತ್ರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ತಡೆಯಾಜ್ಞೆ ನೀಡಿ ನೀಡಿದೆ.
