
ಎರ್ನಾಕುಲಂ :ಯೆಮೆನ್‌ನಲ್ಲಿ ಕೊಲೆ ಆರೋಪಿಯಾಗಿ ಜೈಲು ಪಾಲಾಗಿರುವ ಮಲಯಾಳಿ ನರ್ಸ್ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಯೆಮೆನ್ ಅಧ್ಯಕ್ಷ ರಶಾದ್ ಅಲ್-ಅಲಿಮಿ ಸೋಮವಾರ ಅನುಮೋದಿಸಿದ್ದಾರೆ. ಒಂದು ತಿಂಗಳೊಳಗೆ ಮರಣದಂಡನೆಯನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಪಾಲಕ್ಕಾಡ್‌ನ ಕೊಲ್ಲಂಗೋಡು ಮೂಲದ ನಿಮಿಷಾ ಪ್ರಿಯಾ ಎಂಬಾಕೆಗೆ 2017ರಲ್ಲಿ ತಲಾಲ್ ಅಬ್ದು ಮೆಹದಿ ಎಂಬ ಯೆಮೆನ್ ಪ್ರಜೆಯನ್ನು ಹತ್ಯೆಗೈದ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು.

ನಿಮಿಷಾ 2012 ರಲ್ಲಿ ನರ್ಸ್ ಆಗಿ ಯೆಮೆನ್‌ಗೆ ಬಂದರು, ನಂತರ ಅವರು ತಲಾಲ್ ಅವರೊಂದಿಗೆ 2015 ರಲ್ಲಿ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ನಿಮಿಷಾ ಅವರಿಗೆ ತಿಳಿಯದಂತೆ ಅವನು ಕ್ಲಿನಿಕ್‌ನ ಷೇರುದಾರರಾಗಿ ತಿಂಗಳ ಆದಾಯದ ಅರ್ಧವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ ಅಲ್ಲದೆ ತಾನು ನಿಮಿಷಾಳ ಗಂಡ ಎಂದು ಅನೇಕರಿಗೆ ಹೇಳಿಕೊಂಡಿದ್ದನು ಎನ್ನಲಾಗಿದೆ.ತರುವಾಯ, ಈ ವಿಷಯಕ್ಕೆ ಇಬ್ಬರ ನಡುವೆ ಜಗಳ ಆಗಿ ನಂತರ, ತಲಾಲ್ ಆಕೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಪ್ರಾರಂಭಿಸಿದನು ಅಲ್ಲದೆ ತನ್ನ ಸ್ನೇಹಿತರೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸಿದನು.
ಇದನ್ನು ತೀವ್ರವಾಗಿ ಪ್ರತಿಭಟಿಸಿದ ನಿಮಿಷಾ 2017ರ ಜುಲೈನಲ್ಲಿ ವಿಷದ ಚುಚ್ಚುಮದ್ದು ನೀಡಿ ತಲಾಲ್‌ನನ್ನು ಹತ್ಯೆಗೈದಿದ್ದಳು.ತನಗೆ ಆತನನ್ನು ಕೊಲ್ಲುವ ಉದ್ದೇಶ ಇರಲಿಲ್ಲ ಎಂಬುದು ನಿಮಿಷಾ ಅವರ ವಾದವಾಗಿದ್ದು, ತಲಾಲ್ ಬಳಿಯಿದ್ದ ಪಾಸ್ ಪೋರ್ಟ್ ಹಿಂಪಡೆಯುವುದು ಗುರಿಯಾಗಿತ್ತು. ಯೆಮೆನ್ ಪ್ರಜೆಯ ಕುಟುಂಬವನ್ನು ಭೇಟಿ ಮಾಡಲು ಮತ್ತು ನಿಮಿಷಾ ಅವರ ಬಿಡುಗಡೆಗೆ ಮನವೊಲಿಸಲು ಆಕೆಯ ತಾಯಿ ಪ್ರೇಮಕುಮಾರಿ ಯೆಮೆನ್‌ಗೆ ತೆರಳಿದ್ದರು.
ಆದಾಗ್ಯೂ, ಯೆಮೆನ್ ಸುಪ್ರೀಂ ಕೋರ್ಟ್ ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ ಮತ್ತು ಶಿಕ್ಷೆಯ ಬದಲಾವಣೆಯ ಮನವಿಯನ್ನು ವಜಾಗೊಳಿಸಿದೆ. ಕಳೆದ ಸೆಪ್ಟೆಂಬರ್‌ನಲ್ಲಿ, ಭಾರತೀಯ ರಾಯಭಾರಿ ಕಚೇರಿಯಿಂದ ನೇಮಕಗೊಂಡ ವಕೀಲ ಅಬ್ದುಲ್ಲಾ ಅಮೀರ್, ಸಂಧಾನದ ಪೂರ್ವ ಶುಲ್ಕದ ಎರಡನೇ ಕಂತಿನ ರೂ 16.60 ಲಕ್ಷವನ್ನು ಸಂಧಾನವನ್ನು ಪ್ರಾರಂಭಿಸಲು ತಕ್ಷಣವೇ ಪಾವತಿಸಬೇಕೆಂದು ಒತ್ತಾಯಿಸಿದರು. ಈ ಮೊತ್ತವನ್ನು ವರ್ಗಾಯಿಸಿದ ನಂತರವೇ ಮಾತುಕತೆಗಳು ಪ್ರಾರಂಭವಾಗುತ್ತವೆ ಎಂದು ತಿಳಿಸಿದಾಗ ಬಿಡುಗಡೆಯ ಪ್ರಯತ್ನಗಳು ಸ್ಥಗಿತಗೊಂಡವು.
ಜುಲೈ 4 ರಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಮೊದಲ ಕಂತು $ 19,871 ಅನ್ನು ವಕೀಲರಿಗೆ ಹಸ್ತಾಂತರಿಸಲಾಯಿತು. ಮಾತುಕತೆಗಳನ್ನು ಪ್ರಾರಂಭಿಸಲು ಒಟ್ಟು $ 40,000 ಅಗತ್ಯವಿದೆ ಮತ್ತು ಇದನ್ನು ಎರಡು ಕಂತುಗಳಲ್ಲಿ ಪಾವತಿಸಬೇಕೆಂದು ವಕೀಲರು ಆರಂಭದಲ್ಲಿ ತಿಳಿಸಿದ್ದರು.












