
ಬೆಂಗಳೂರು :ರಾಜ್ಯದ ಜನತೆಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೆಮ್ಮದಿಯ ಸುದ್ದಿಯೊಂದನ್ನು ನೀಡಿದ್ದು, ಸಾರಿಗೆ ಬಸ್ ಪ್ರಯಾಣ ದರವನ್ನು ತಕ್ಷಣ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗಿನ ಸಭೆಯ ಫಲಶ್ರುತಿಯಾಗಿ ಸಾರಿಗೆ ಸಚಿವರ ಲಿಖೀತ ಮನವಿ ಮೇರೆಗೆ ಡಿ. 31ರಿಂದ ಕರೆ ನೀಡ ಲಾಗಿದ್ದ ಅನಿರ್ಧಿಷ್ಟಾವಧಿ ಮುಷ್ಕರವನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಘೋಷಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೆಎಸ್‌ಆರ್‌ಟಿಸಿ ಮತ್ತು ಇತರ ಸಾರಿಗೆ ನಿಗಮಗಳ ಪ್ರಯಾಣ ದರ ಏರಿಕೆ ಪ್ರತಿಕ್ರಿಯೆ ನೀಡಿದ ಅವರು, ಸಾರಿಗೆ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡುವ ಯಾವುದೇ ಯೋಜನೆಗಳು ಸದ್ಯಕ್ಕೆ ಪರಿಗಣನೆಯಲ್ಲಿಲ್ಲ.
ಈ ಹಿಂದೆ ಸಾರಿಗೆ ನಿಗಮಗಳು ಪ್ರಯಾಣ ದರ ಪರಿಷ್ಕರಣೆಗೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ, ಇತ್ತೀಚೆಗೆ ಪ್ರಯಾಣ ದರ ಹೆಚ್ಚಳಕ್ಕೆ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ ಎಂದು ಸಚಿವರು ಖಚಿತಪಡಿಸಿದ್ದಾರೆ.
ಸಾರಿಗೆ ನೌಕರರ ಸಂಘಟನೆಯ ಮುಖಂಡರ ಜತೆ ಮಾತುಕತೆ ನಡೆಸಲಾಗಿದೆ. ಮುಷ್ಕರ ಕೈಬಿಡುವ ನಿರ್ಧಾರಕ್ಕೆ ಬಂದಿದ್ದಾರೆ. ಸಂಕ್ರಾಂತಿಯ ಅನಂತರ ಸಾರಿಗೆ ನೌಕರರ ಸಂಘಟನೆ ಮುಖಂಡರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ.





