
ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಪೊಲೀಸರು ಮುನಿರತ್ನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಎಸ್ಐಟಿ ಸಿಐಡಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಸಮಗ್ರ ವಿಚಾರಣೆ ನಡೆಸಿದ್ದ ಸಿಐಡಿ ಎಸ್ಐಟಿ ಟೀಂ 2,481 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಆರೋಪದಡಿ ಚಾರ್ಜ್ ಶೀಟ್ ಸಲ್ಲಿಕೆ ಆಗಿದೆ. ಶಾಸಕ ಮುನಿರತ್ನ ಸೇರಿ ನಾಲ್ಕು ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಶಾಸಕ ಮುನಿರತ್ನ, ಸುಧಾಕರ್, ಶ್ರೀನಿವಾಸ್ ಹಾಗೂ ಇನ್‌ಸ್ಪೆಕ್ಟರ್ ಐಯ್ಯಣ್ಣ ರೆಡ್ಡಿ ವಿರುದ್ದ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದರು. ಸೆಪ್ಟೆಂಬರ್ 18ರಂದು 7 ಜನರ ವಿರುದ್ದ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ 2481 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ರೇಪ್ ಕೇಸ್ ಸಂಬಂಧ ಒಟ್ಟು 146 ಸಾಕ್ಷಿಗಳ ವಿಚಾರಣೆ ನಡೆಸಿರುವ ಎಸ್ಐಟಿ ಟೀಂ, ನ್ಯಾಯಾಧೀಶರ ಮುಂದೆ 8 ಸಾಕ್ಷಿಧಾರರ ಹೇಳಿಕೆ ದಾಖಲು ಮಾಡಲಾಗಿದೆ. 850 ದಾಖಲೆಗಳನ್ನು ಒಳಗೊಂಡ 2481 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, ಸಾಕ್ಷಿಗಳ ಹೇಳಿಕೆಗಳಿಂದ, ದಾಖಲಾತಿಗಳಿಂದ ಆರೋಪಿಗಳ ವಿರುದ್ದ ಆರೋಪ ಸಾಬೀತು ಎಂದು ಚಾರ್ಜ್ ಶೀಟ್‌ನಲ್ಲಿ ಹೇಳಲಾಗಿದೆ. ಪ್ರಕರಣ ಸಂಬಂಧ ಹೆಚ್ಚುವರಿ ಸಾಕ್ಷಿ ಕಲೆ ಹಾಕಲು ತನಿಖೆ ಮುಂದುವರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಐಪಿಸಿ 354ಎ, 354ಸಿ, 376(2)ಎನ್, 308, 120ಬಿ, 504, 506, 270, 119, 201, 511, ಐಟಿ ಆ್ಯಕ್ಟ್ 66ಇ ಅಡಿಯಲ್ಲಿ ಚಾರ್ಜ್ ಶೀಟ್ ಮಾಡಲಾಗಿದ್ದು, 42ನೇ ಎಸಿಜೆಎಂ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಸಿದ್ದಾರೆ.