
ಸಿ.ಟಿ.ರವಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಸದನ ಸಮರ ಇನ್ನೂ ಮುಗಿಯುವ ಲಕ್ಷಣಗಳು ಕಾಣ್ತಿಲ್ಲ. ಇಬ್ಬರ ನಡುವಿನ ಸಂಘರ್ಷದ ಬಗ್ಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ಸದನದಲ್ಲಿ ಆದ ಘಟನೆ ಬಗ್ಗೆ ಚರ್ಚೆ ಮಾಡಿ ಕಾನೂನು ನೋಡಿ ತೀರ್ಮಾನ ಕೊಟ್ಟು ಬಂದಿದ್ದೇನೆ. ಆ ನಂತರ ಸಿ.ಟಿ ರವಿ ಅರೆಸ್ಟ್ ಮಾಡಿರೋದು. ಅದು ನನಗೆ ಸಂಬಂಧಪಡದ ವಿಚಾರ. ಸರ್ಕಾರ ಮತ್ತು ಪೊಲೀಸ್ ಕೆಲಸದಲ್ಲಿ ಹಸ್ತಕ್ಷೇಪ ಮಾಡಲ್ಲ. ಹಕ್ಕುಚ್ಯುತಿ ಬಗ್ಗೆ ನನಗೆ ಯಾರು ದೂರು ಕೊಟ್ಟಿಲ್ಲ. ಹಕ್ಕುಚ್ಯುತಿ ಬಗ್ಗೆ ದೂರು ಕೊಟ್ಟರೆ ಪರಿಶೀಲನೆ ಮಾಡ್ತೇನೆ ಎಂದಿದ್ದಾರೆ.
ಪೊಲೀಸರು ಬಂಧನ ಮಾಡಿದ ವಿಚಾರದ ಬಗ್ಗೆ ಸಿ.ಟಿ.ರವಿ ಹಕ್ಕುಚ್ಯುತಿ ಮಂಡಿಸಲಿ. ಆಮೇಲೆ ಪರಿಶೀಲನೆ ಮಾಡ್ತೀನಿ. ಪೊಲೀಸರು ತನಿಖೆ ನಡೆಸಲು ನನ್ನ ಅನುಮತಿ ಬೇಕಾಗಿಲ್ಲ. ಬಂಧನದ ಕುರಿತು ನನಗೆ ಮಾಹಿತಿ ನೀಡಿದ್ರು. ಆದರೆ ಬಂಧನದ ಬಳಿಕ ಮಾಹಿತಿ ನೀಡಿದ್ದಾರೆ. ಶಾಸಕರ ಭದ್ರತೆ ಕುರಿತು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದೇನೆ. ಸರ್ಕಾರದ ಬಳಿ ಇರುವ ಆಡಿಯೊ ವಿಡಿಯೋ FSLನಲ್ಲಿ ದೃಢವಾಗಬೇಕು ಅಂತ ಹೇಳಿದ್ರು.

ಸಿ.ಟಿ ರವಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದ್ದಾರೆ. ನನ್ನ ವಿರುದ್ಧ ಸಿ.ಟಿ.ರವಿ ಅಶ್ಲೀಲ ಪದ ಬಳಕೆ ಮಾಡಿದ್ದಾರೆ. ಈ ಬಗ್ಗೆ ಸಭಾಪತಿಗೆ ಮತ್ತೊಮ್ಮೆ ದೂರು ಕೊಡ್ತೀನಿ. ನಾನು ಹೋರಾಟ ನಿಲ್ಲಿಸಲ್ಲ. ಘಟನೆ ಬಗ್ಗೆ ದಾಖಲೆ ಕೊಡ್ತೀವಿ. FSL ವರದಿಯೂ ಶೀಘ್ರವೇ ಬಹಿರಂಗ ಆಗಬೇಕು ಅಂತ ಹೆಬ್ಬಾಳ್ಕರ್ ಹೇಳಿದ್ದಾರೆ. ಸಿ.ಟಿ.ರವಿ ಹೇಳಿಕೆ ಸಮರ್ಥಿಸಿಕೊಳ್ತಿರೋ ಬಿಜೆಪಿ ನಾಯಕರ ವಿರುದ್ಧವೂ ಹೆಬ್ಬಾಳ್ಕರ್ ಕಿಡಿ ಕಾರಿದ್ದಾರೆ. ಬಿಜೆಪಿಯವರು ಸಿ.ಟಿ ರವಿ ಅವರ ಬೆನ್ನಿಗೆ ನಿಂತಿದ್ದಾರೆ. ಹಾರ ತುರಾಯಿ ಹಾಕಿಸಿಕೊಂಡು ವೈಭವೀಕರಿಸುತ್ತಿದ್ದಾರೆ. ಬಿಜೆಪಿಯವ್ರು ಎನ್‌ಕೌಂಟರ್ ಅಂತಾರೆ.. ನಾಚಿಕೆ ಆಗಲ್ವಾ? ದಾರಿ ತಪ್ಪಿಸುವ ಕೆಲಸ ಬಿಜೆಪಿಯವರು ಮಾಡುತ್ತಿದ್ದಾರೆ. ಪ್ರಧಾನಿ ಹಾಗು ರಾಷ್ಟ್ರಪತಿ ಅವರಿಗೆ ನಾನು ಪತ್ರ ಬರೆಯುತ್ತೇನೆ ಎಂದಿದ್ದಾರೆ.

ಇನ್ನು ಹೆಬ್ಬಾಳ್ಕರ್ ಹೇಳಿಗೆಗೆ ಚಿಕ್ಕಮಗಳೂರಲ್ಲಿ MLC ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಹೆಬ್ಬಾಳ್ಕರ್ ಸೂಚನೆ ಮೇರೆಗೆ ನನ್ನ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಡಿಕೆಶಿ, ಚನ್ನರಾಜ್ ಹಟ್ಟಿಹೊಳಿ ಕೂಡ ನನಗೆ ಧಮ್ಕಿ ಹಾಕಿದ್ದಾರೆ. ಸುವರ್ಣಸೌಧದಲ್ಲೇ ನನ್ನ ಮೇಲೆ ದಾಳಿಗೆ ಯತ್ನ ನಡೆದಿದೆ. ನಾನು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದೇನೆ. ಆಳುವವರಿಗೊಂದು, ವಿರೋಧ ಪಕ್ಷಕ್ಕೆ ಒಂದು ಕಾನೂನು ಇಲ್ಲ. ಕಾನೂನು ಎಲ್ಲರಿಗೂ ಒಂದೆ ಎಂದಿದ್ದಾರೆ.
ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್ ಮಾತನಾಡಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಡುಗಡೆ ಮಾಡಿದ ವೀಡಿಯೋಗೆ ಬೆಲೆ ಇಲ್ಲ ಎಂದಿದ್ದಾರೆ. ಸಭಾಪತಿ ಹೊರಟ್ಟಿಯವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಆ ರೀತಿ ಮಾತನಾಡಿರೋ ಆಡಿಯೋ, ವೀಡಿಯೋ ದಾಖಲೆ ಇಲ್ಲ ಅಂತ ಹೇಳಿದ್ದಾರೆ. ಇವರ ಬಳಿ ಇರೋ ವೀಡಿಯೋ ದಾಖಲೆಗೆ ಯಾವುದೇ ಬೆಲೆ ಇಲ್ಲ ಅಂತಾ ತಿಳಿಸಿದ್ದಾರೆ.