ಬೆಂಗಳೂರು; ಹಣಕಾಸಿನ ವಿವಾದಕ್ಕೆ ಮಾಂಸದ ಅಂಗಡಿಯಲ್ಲಿಯೇ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಗರದ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಅಫ್ಸರ್ (45)ಎಂದು ಗುರುತಿಸಲಾಗಿದ್ದು, ಆರೋಪಿ ಅಕ್ಬರ್ (47) ಪರಾರಿಯಾಗಿದ್ದಾನೆ.
ಪೊಲೀಸರ ಪ್ರಕಾರ, 8 ತಿಂಗಳ ಹಿಂದೆ ಶಿವಾಜಿನಗರದ ಅಫ್ಸರ್ ಮತ್ತು ಅಕ್ಬರ್ ಅವರು ಪಾಲುದಾರಿಕೆಯಲ್ಲಿ ಕುರಿ ಮಾಂಸದ ಅಂಗಡಿ ಆರಂಭಿಸಿದ್ದರು. ಆದರೆ ವ್ಯಾಪಾರ ನಿರೀಕ್ಷಿತ ರೀತಿಯಲ್ಲಿ ನಡೆಯದ ಕಾರಣ, ಅಕ್ಬರ್ ಬೇರೆ ಸ್ಥಳದಲ್ಲಿ ಹೊಸ ಅಂಗಡಿ ತೆರೆಯಲು ನಿರ್ಧರಿಸಿದ್ದ.
ಅಂಗಡಿ ಆರಂಭಿಸುವಾಗ ತಾನು ನೀಡಿದ್ದ ಬಂಡವಾಳ 3.20 ಲಕ್ಷ ವನ್ನು ಹಿಂತಿರುಗಿಸುವಂತೆ ಅಕ್ಬರ್ ಅಫ್ಸರ್ ನನ್ನು ಒತ್ತಾಯಿಸುತಿದ್ದ.ಅದರಲ್ಲಿ ಅಫ್ಸರ್ ಮೂರು ಲಕ್ಷ ರೂಪಾಯಿಗಳನ್ನು ಹಿಂತಿರುಗಿಸಿ ಇನ್ನು 20 ಸಾವಿರ ರೂಪಾಯಿ ಹಿಂತಿರುಗಿಸದೇ ಸಬೂಬು ಹೇಳುತಿದ್ದ. ಇದರಿಂದ ಅಕ್ಬರ್ ಆಕ್ರೋಶಿತನಾಗಿದ್ದ.
ಸೋಮವಾರ ರಾತ್ರಿ ಹಣ ಹಿಂತಿರುಗಿಸುವಂತೆ ಕೇಳಲು ಅಂಗಡಿ ಬಳಿ ತೆರಳಿದ್ದ.ಆಗ ಇಬ್ಬರ ನಡುವೆ ಬಿಸಿ ಬಿಸಿ ಮಾತುಕತೆ ಆಗಿದೆ.ಆಗ ಸಿಟ್ಟುಗೊಂಡ ಅಕ್ಬರ್ ಮಾಂಸ ಕತ್ತರಿಸುವ ಮಚ್ಚನ್ನು ಎತ್ತಿಕೊಂಡು ಅಫ್ಸರ್ ಗೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾನೆ.ಅಫ್ಸರ್ ಸ್ಥಳದಲ್ಲೇ ಮೃತನಾಗಿದ್ದಾನೆ.ಆರೋಪಿ ಪರಾರಿ ಆಗಿದ್ದಾನೆ ಸ್ಥಳಕ್ಕೆ ಬೇಗೂರು ಠಾಣೆ ಪೊಲೀಸರು, ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸದ್ಯ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆರೋಪಿ ಅಕ್ಬರ್ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.