ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ‘ಗೇಮ್ ಚೇಂಜರ್’ ಪ್ರೀ-ರಿಲೀಸ್ ಈವೆಂಟ್ ಅಮೆರಿಕಾದ ಡಲ್ಲಾಸ್ ನಲ್ಲಿ ಅದ್ಧೂರಿಯಾಗಿ ನಡೆದಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದುವರೆಗೆ ಯುಎಸ್‌ನಲ್ಲಿ ತೆಲುಗು ಚಿತ್ರವೊಂದರ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿರಲಿಲ್ಲ. ಆದರೆ ಈ ಸಿನಿಮಾ ಆ ದಾಖಲೆ ಮಾಡಿದೆ. ಡಿಸೆಂಬರ್ 21ರಂದು ಅಮೆರಿಕದಲ್ಲಿ ‘ಗೇಮ್ ಚೇಂಜರ್’ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿದೆ. ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ರಾಮ್ ಚರಣ್, ನಿರ್ದೇಶಕ ಶಂಕರ್, ನಿರ್ಮಾಪಕರಾದ ದಿಲ್ ರಾಜು ಮತ್ತು ಸಿರೀಶ್, ಸಂಗೀತ ನಿರ್ದೇಶಕ ಥಮನ್ ಮತ್ತು ನಟಿ ಅಂಜಲಿ ಸೇರಿದಂತೆ ಚಿತ್ರದ ಇಡೀ ಚಿತ್ರತಂಡ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ರಾಮ್ ಚರಣ್ ಅವರೊಂದಿಗೆ ಮುಂದಿನ ಚಿತ್ರಗಳನ್ನು ನಿರ್ದೇಶಿಸಲಿರುವ ಸುಕುಮಾರ್ ಮತ್ತು ಬುಚ್ಚಿ ಬಾಬು ಸನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗ್ಲೋಬಲ್ ಸ್ಟಾರ್ ರಾಮ್ ಚರಣ್, ನಾನು ಶಂಕರ್ ಸರ್ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ನಂಬಲು ಆಗುತ್ತಿಲ್ಲ. ನಾನು ಅವರಿಗೆ ತೆಲುಗು ಚಿತ್ರ ನಿರ್ದೇಶಿಸಲು ಕೇಳುತ್ತಿದ್ದೆ. ಆದರೀಗ ಅವರ ಜೊತೆಯಲ್ಲಿಯೇ ಕೆಲಸ ಮಾಡಿದ್ದೇನೆ. 3 ವರ್ಷದ ಈ ಸುಂದರ ಪಯಣದಲ್ಲಿ ಅವರೊಂದಿಗೆ ಸಾಕಷ್ಟು ಕಲಿತ್ತಿದ್ದೇನೆ. ಕ್ರಿಕೆಟ್ ರಂಗಕ್ಕೆ ಸಚಿನ್ ಅವರು ಹೇಗೋ, ಅದೇ ರೀತಿ ಭಾರತೀಯ ಚಿತ್ರರಂಗಕ್ಕೆ ಶಂಕರ್. ಅವರು ನಂಬರ್ 1 ಕಮರ್ಷಿಯಲ್ ಸಿನಿಮಾ ಮೇಕರ್. ನಿರ್ಮಾಪಕ ದಿಲ್ ರಾಜು ಅವರೊಂದಿಗೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದು ತಿಳಿಸಿದರು.
ನಿರ್ದೇಶಕ ಸುಕುಮಾರ್ ಮಾತನಾಡಿ, ‘ಹೊಸ ನಿರ್ದೇಶಕರಿಗೆ ಅವಕಾಶ ನೀಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ದಿಲ್ ರಾಜು ಅವರು ನನಗೆ ಆರ್ಯ ಚಿತ್ರ ನಿರ್ದೇಶಿಸಲು ಅವಕಾಶ ಕೊಟ್ಟಿದ್ದರು. ನಾನು ನನ್ನ ಮೊದಲ ಫಿಲಂಫೇರ್ ಪ್ರಶಸ್ತಿಯನ್ನು ಶಂಕರ್ ಸರ್ ಅವರಿಂದ ಸ್ವೀಕರಿಸಿದ್ದೇನೆ. ನಾನು ಚಿರಂಜೀವಿ ಅಭಿಮಾನಿ. ಹೀಗಾಗಿ ಶಂಕರ್ ಸರ್ ಚಿರು ಸರ್ ಜೊತೆ ಏಕೆ ಕೆಲಸ ಮಾಡಿಲ್ಲ ಎಂದು ಯಾವಾಗಲೂ ಆಶ್ಚರ್ಯಪಡುತಿದ್ದೆ.
ಆದರೆ ಅವರು ಚರಣ್ ಜೊತೆ ಕೈ ಜೋಡಿಸಿದಾಗ ನನಗೆ ಅಪಾರ ಸಂತೋಷವಾಯಿತು. ಚರಣ್ ನನ್ನ ಸಹೋದರನಂತೆ, ಮತ್ತು ಅವರೊಂದಿಗೆ ಕೆಲಸ ಮಾಡುವುದು ಯಾವಾಗಲೂ ಸಂತೋಷವಾಗುತ್ತದೆ ಎಂದರು.’ಆರ್‌ಆರ್‌ಆರ್’ ಬಳಿಕ ರಾಮ್‌ಚರಣ್ ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹೀಗಾಗಿ ಮೆಗಾ ಫ್ಯಾನ್ಸ್ ‘ಗೇಮ್ ಚೇಂಜರ್’ ದರ್ಶನಕ್ಕೆ ಕಾಯುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಗೆ ಆಕ್ಷನ್ ಕಟ್ ಹೇಳಿದ್ದಾರೆ.
ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಮತ್ತು ಜೀ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ದಿಲ್ ರಾಜು ಮತ್ತು ಸಿರಿಶ್ ನಿರ್ಮಿಸುತ್ತಿರುವ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಗೇಮ್ ಚೇಂಜರ್ ನಲ್ಲಿ ರಾಮ್ ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕಿಯಾರಾ ಅಡ್ವಾಣಿ, ಅಂಜಲಿ, ಎಸ್ ಜೆ ಸೂರ್ಯ, ಶ್ರೀಕಾಂತ್, ಸುನಿಲ್, ಸಮುದ್ರಕನಿ ಮತ್ತು ಜಯರಾಮ್ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ಕಥೆ ಬರೆದಿದ್ದಾರೆ. ಎಸ್.ಯು.ವೆಂಕಟೇಶನ್ ಮತ್ತು ವಿವೇಕ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಹರ್ಷಿತ್ ಚಿತ್ರದ ಸಹ ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಸಾಯಿ ಮಾಧವ್ ಬುರ್ರಾ ಸಂಭಾಷಣೆ ಬರೆದಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಎಸ್ ತಿರುನಾವುಕ್ಕರಸು ಛಾಯಾಗ್ರಹಣವನ್ನು ನಿಭಾಯಿಸಿದ್ದಾರೆ. ಅವಿನಾಶ್ ಕೊಲ್ಲಾ ಆಕ್ಷನ್ ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದು, ಅನ್ಬೀರವ್ ಆಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಪ್ರಭುದೇವ, ಗಣೇಶ್ ಆಚಾರ್ಯ, ಪ್ರೇಮ್ ರಕ್ಷಿತ್, ಬಾಸ್ಕೊ ಮಾರ್ಟಿನ್, ಜಾನಿ ಮತ್ತು ಸ್ಯಾಂಡಿ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರವು ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಜನವರಿ 10, 2025 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.