ಹುಬ್ಬಳ್ಳಿ:ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಗೃಹ ಸಚಿವ ಅಮಿತ್ ಶಾ ಅವರ ಸಂಪೂರ್ಣ ಹೇಳಿಕೆಯನ್ನು ಕೇಳಿ ನಿರ್ಧಾರ ಮಾಡಬೇಕು. ಅದು ಬಿಟ್ಟು ಅರ್ಧಂಬರ್ಧ ಹೇಳಿಕೆ ನೀಡಿ ಆರೋಪ ಮಾಡುವುದು ಸರಿಯಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿ.ಆರ್.ಅಂಬೇಡ್ಕರ್ ಚುನಾವಣೆಯಲ್ಲಿ ಸೋಲುವುದಕ್ಕೆ ಕಾಂಗ್ರೆಸ್ ನವರೇ ಕಾರಣ. ಅಂಬೇಡ್ಕರ್ ಅವರ ಬಗ್ಗೆ ಯಾವಾಗಲೂ ಋಣಾತ್ಮಕವಾಗಿ ನಡೆದುಕೊಳ್ಳೋದು ಕಾಂಗ್ರೆಸ್ ಎಂದು ಆರೋಪಿಸಿದರು.
ಸಿಟಿ ರವಿ ಬಂಧನ ವಿಚಾರವಾಗಿ ಮಾತನಾಡಿ, ಈ ವಿಚಾರದಲ್ಲಿ ನಾವು ಈಗಾಗಲೇ ಕಾನೂನಾತ್ಮಕವಾಗಿ ಹೋರಾಟ ಮಾಡಿದ್ದೇವೆ.ಸರ್ಕಾರದ ಈ ನಡೆಯನ್ನ ನಾವು ಖಂಡಿಸಿದ್ದೇವೆ.ಈ ಹಿನ್ನೆಲೆ ಸರ್ಕಾರಕ್ಕೆ ಮುಖಭಂಗ ಆದಂತಾಗಿದೆ.ಹೀಗಾಗಿ ಸಿಎಂ ಹಾಗೂ ಡಿಸಿಎಂ ಈ ಬಗ್ಗೆ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಒಂದು ರೀತಿ ಷಂಡ ಸರ್ಕಾರವಾಗಿದೆ. ಈ ಸರ್ಕಾರದ ಕೈಯಲ್ಲಿ ಏನೂ ಆಗಲ್ಲ ಎಂದರು. ನನ್ನ ಹೇಳಿಕೆಯನ್ನು ಇದೊಂದು ಅಸಂಸ್ಕೃತಿ ಪದ ಅಂತಾ ನನ್ನ ಮೇಲೆ ಕೇಸ್ ಹಾಕಿದ್ರೂ ಪರ್ವಾಗಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಮಹಿಳೆಯರಿಗಾಗಲಿ ಯಾರಿಗೂ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹಮಂತ್ರಿಗಳು ಅವರದ್ದೇ ಆದ ಹೇಳಿಕೆ ಕೊಡುತ್ತಾ ಹೊರಟಿದ್ದಾರೆ ಎಂದರು.
ಸರ್ಕಾರದ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಕಾಂಗ್ರೆಸ್ ಸರ್ಕಾರ ತನ್ನ ಹಗರಣಗಳನ್ನ ಮುಚ್ಚಿ ಹಾಕೋಕೆ ವಿಷಯಾಂತರ ಮಾಡುತ್ತಿದೆ.ಸಿಎಂ ಐದು ವರ್ಷ ಆಡಳಿತ ಹೇಗೆ ಮಾಡಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ.ಆದ್ರೆ ಡಿಕೆಶಿ ಅದನ್ನ ಹೇಗೆ ನಿಲ್ಲಿಸಬೇಕು ಅನ್ನೋ ಪ್ರಯತ್ನದಲ್ಲಿದ್ದಾರೆ ಎಂದು ತಿಳಿಸಿದರು.