ಚಿಕ್ಕಮಗಳೂರು: ಮಾಜಿ ಸಚಿವ ಹಾಲಿ ಪರಿಷತ್ ಸದಸ್ಯ ಸಿ.ಟಿ ರವಿಗೆ ಜಾಮೀನು ಮಂಜೂರು ಆಗ್ತಿದ್ದಂತೆ, ಚಿಕ್ಕಮಗಳೂರಲ್ಲಿ ಸಂಭ್ರಮ ಮನೆ ಮಾಡಿತ್ತು. ಬಿಜೆಪಿ ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ರು. ಈ ವೇಳೆ ಪೊಲೀಸರು ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೀತು. ಈ ವೇಳೆ ಸಿ.ಟಿ ರವಿ ಪತ್ನಿ ಪಲ್ಲವಿ ರವಿ ಮಾಧ್ಯಮಗಳ ಜೊತೆಗೆ ಮಾತನಾಡಿ ಸಂತಸ ಹಂಚಿಕೊಂಡರು.
ಸಿ.ಟಿ ರವಿ ಬಂಧನದ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ನನಗೆ ಇರಲಿ, ನಮ್ಮ ಕುಟುಂಬಕ್ಕೂ ಯಾವುದೇ ಮಾಹಿತಿ ಇರಲಿಲ್ಲ. ನಾನು ಮಂಗಳೂರು ಹೋಗಿದ್ದೆ. TVಯಲ್ಲಿ ನ್ಯೂಸ್ ನೋಡಿದ ಬಳಿಕ ನನಗೆ ಮಾಹಿತಿ ಗೊತ್ತಾಯ್ತು ಎಂದಿದ್ದಾರೆ. ಇನ್ನು ಗುರುವಾರ ರಾತ್ರಿಯೆಲ್ಲಾ ಪೊಲೀಸರು ಜೀಪ್ನಲ್ಲಿ ಕೂರಿಸಿಕೊಂಡು ಸುತ್ತಿಸಿದ್ದಾರೆ. ನಾನು ರಾತ್ರಿ ಕಾಲ್ ಮಾಡಿದ್ದೆ. ಅವರು ಪ್ರತಿ ಸ್ಥಳದ ಲೊಕೇಶನ್ ಕಳಿಸಿದ್ದಾರೆ. ಯಾವುದೋ ಕಾಡು, ಯಾವುದೋ ಡ್ಯಾಂ, ಫಾರ್ಮ್ ಹೌಸ್ ಬಳಿ ಎಲ್ಲಾ ಕರೆದುಕೊಂಡು ಹೋಗಿದ್ದಾರೆ ಎಂದಿದ್ದಾರೆ.
ನನ್ನ ಗಂಡ ಮಹಿಳೆಯರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ನಮ್ಮ ಮನೆಗೆ ಬರುವ ಪ್ರತಿ ಹೆಣ್ಣು ಮಕ್ಕಳನ್ನು ಗೌರವದಿಂದ ಮಾತನಾಡಿಸಿ, ಉತ್ತಮವಾಗಿ ನಡೆದುಕೊಳ್ಳುತ್ತಾರೆ. ಮಹಿಳೆಯರಿಗೆ ಗೌರವ ಕೊಡದೆ ಇರುವುದಿಲ್ಲ ಎಂದಿದ್ದಾರೆ. ಇನ್ನು ಇದೇ ವೇಳೆ ಸಿ.ಟಿ ರವಿ ನಿವಾಸಕ್ಕೆ ಭೇಟಿ ನೀಡಿದ್ದ ಮಾಜಿ ಸಚಿವ ಜೀವರಾಜ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
1989 ರಿಂದ ಸಿ.ಟಿ ರವಿಯವರನ್ನ ನಾನು ನೋಡಿದ್ದೇನೆ. ಈ ತರದ ಪದ ಬಳಸುತ್ತಾರೆಂದು ಕನಸಿನಲ್ಲೂ ನಂಬಲು ಸಾಧ್ಯವಿಲ್ಲ. ಅಧಿವೇಶನ ಮುಗಿದ ಬಳಿಕವೂ ಲೈವ್ ಕ್ಯಾಮೆರಾ ಆನ್ ಇರುತ್ತವೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ರೂ ಫೋರೆನ್ಸಿಕ್ ಲ್ಯಾಬ್ ನಿಂದ ವರದಿ ಬಂದ ಮೇಲೆ ನೋಡ್ತೀವಿ ಅನ್ನೋ ಸರ್ಕಾರ ಸಿ.ಟಿ ರವಿ ವಿಚಾರದಲ್ಲಿ ಹೇಗೆ ನಡೆದುಕೊಳ್ತಿದೆ ಎಂದು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಇಷ್ಟು ದೊಡ್ಡ ರಾಜಕಾರಣಿ, ಇಷ್ಟು ಕೆಟ್ಟ ಮಟ್ಟಕ್ಕೆ ಇಳಿಯುತ್ತಾರಾ..? ಎಂದು ಪ್ರಶ್ನಿಸಿದ್ದು, ಈ ಹಿಂದೆ ನೋಡಿದ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರಾ..? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಿ.ಟಿ ರವಿ ಮೇಲೆ 4 ಜನ ಸುಳ್ಳು ಆರೋಪ ಮಾಡ್ತಾರೆ. ಅವರೆಲ್ಲ ಕಾಂಗ್ರೆಸ್ ಸದಸ್ಯರು ಎಂದಿರುವ ಜೀವರಾಜ್, ರವಿಯನ್ನ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಿದ್ದಾರೆ.. ಇಡೀ ಕರ್ನಾಟಕದ ಜನ, ಬಿಜೆಪಿ ಹಾಗು ಸಿ.ಟಿ ರವಿ ಪರ ನಿಲ್ಲುತ್ತೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ತಪ್ಪು ಮಾಡದಿರುವ ರಾಮ , ಧರ್ಮರಾಯರೇ ವನವಾಸಕ್ಕೆ ಹೋಗಿದ್ದಾರೆ. ಮನಸಿಗೆ ಬಂದಂತೆ ಮಾಡಬಹುದು ಎಂಬ ಕಲ್ಪನೆಯಲ್ಲಿದ್ದವರಿಗೆ ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ. ಅನಿವಾರ್ಯ ಕಾರಣಗಳಿಂದ ಇಲ್ಲಿಗೆ ಬರಲು ಸಾಧ್ಯವಾಗಿಲ್ಲ. ಸರ್ಕಾರ ಹೀಗೆಯೇ ಇರಲ್ಲ ಇದನ್ನ ಪೊಲೀಸ್ ಅಧಿಕಾರಿಗಳು ನೆನಪಿಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಹಣೆಯಲ್ಲಿ ರಕ್ತ ಬರ್ತಿದ್ರೂ ಟೆರರಿಸ್ಟ್ಗಳಿಗೆ ಬಿರಿಯಾನಿ ಕೊಡೋದನ್ನ ನೋಡಿದ್ದೆ. ಅವರ ಅಣ್ತಮ್ಮಂದಿರೇ ಬಾಂಬ್ ಇಟ್ಟವರು. ರವಿ ದೇಶ ಬಿಟ್ಟು ಹೋಗುವ ಕ್ಯಾರೆಕ್ಟರ್ ಏನು ಅಲ್ಲ. ಗಡಿಬಿಡಿಯಲ್ಲಿ ಎಳೆದೊಯ್ಯುವ ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನ ದೃಷ್ಟಿಯಲ್ಲಿ ಇದೊಂದು ಹಕ್ಕು ಚ್ಯುತಿ ಮಂಡಿಸಲು ಯೋಗ್ಯವಾದ ಪ್ರಕರಣ. ಇದನ್ನ ಸರ್ಕಾರವೇ ಮಾಡಿಸಿದೆ, ಮಂತ್ರಿಗಳೇ ಶಾಮೀಲಾಗಿದ್ದಾರೆ. ಸರ್ಕಾರ ಹಾಗೂ ಕಾಂಗ್ರೆಸ್ ಸಂಸ್ಕೃತಿಯೇ ಆ ರೀತಿ ಇದೆ ಎಂದು ಮಾಜಿ ಸಚಿವ ಡಿ.ಎನ್ ಜೀವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.