ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತು ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ಸಭೆ ಮಾಡಲಾಗಿದೆ. ಸಭೆಯಲ್ಲಿ ನೀರಾವರಿ ಸಚಿವ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವರಾದ ಆರ್.ವಿ ತಿಮ್ಮಾಪುರ್, ಶಿವಾನಂದ್ ಪಾಟೀಲ್ ಸೇರಿದಂತೆ ವಿಜಯಪುರ, ಬಾಗಲಕೋಟೆಯ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ರೈತ ಹೋರಾಟಗಾರರು ಭಾಗಿಯಾಗಿದ್ದರು.
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತ ಸಭೆಯಲ್ಲಿ ಚರ್ಚಿಸಿ ಸಿಎಂ ಸಿದ್ದರಾಮಯ್ಯ ಹಲವು ಸೂಚನೆಗಳನ್ನು ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯ ಚರ್ಚೆಯಾದ ಪ್ರಮುಖ ಅಂಶಗಳು ಏನಂದ್ರೆ, ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಟ್ಟವನ್ನ 510.60 ಮೀಟರ್ ನಿಂದ 524.26 ಮೀಟರ್‌ಗೆ ಎತ್ತರಿಸಿ ಯೋಜನೆ ಪೂರ್ಣಗೊಳಿಸುವುದು. ಹಂತ ಹಂತವಾಗಿ ಯೋಜನೆ ಪೂರ್ಣಗೊಳಿಸುವುದು.
ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಮುಳುಗಡೆ ಹೊಂದಲಿರುವ ಜಮೀನು, ಪುನರ್ವಸತಿ, ಕಾಲುವೆಗಾಗಿ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳುವುದು.ಇದುವರೆಗೂ 28,967 ಎಕರೆ ಸ್ವಾಧೀನ ಪಡಿಸಿಕೊಂಡಿದ್ದು, ಉಳಿದ 1,04,963 ಎಕರೆ ಭೂಮಿ ವಶಕ್ಕೆ ಪಡೆಯುವುದು. ಜಲಾಶಯದ ಹಿನ್ನಿರಿನಿಂದ ಮುಳುಗಡೆಯಾಗುವ 188 ಗ್ರಾಮಗಳ 73,020 ಜಮೀನು ಭೂಸ್ವಾಧೀನ ಪ್ರಕ್ರಿಯೆ ಬಾಕಿಯಿದ್ದು, 2022ರಲ್ಲಿ ಅಂದಿನ ಸರ್ಕಾರದ ನಿರ್ಧಾರ ಬದಲಿಸಿ ಒಂದೇ ಹಂತದಲ್ಲಿ ಭೂಸ್ವಾಧಿನಕ್ಕೆ ಕ್ರಮ ಕೈಗೊಂಡಿತ್ತು.
ಜಮೀನು ಕಳೆದು ಕೊಳ್ಳುವ ರೈತರಿಗೆ ಮಾರುಕಟ್ಟೆ ದರ ಹಾಗೂ ಭೂಸ್ವಾಧೀನ ಕಾಯ್ದೆ ಗಮನದಲ್ಲಿರಿಸಿಕೊಂಡು ಪರಿಹಾರ ನೀಡುವುದು. ರೈತರಿಗಾಗಿ ಯೋಜನೆ ಅನುಷ್ಠಾನ ಮಾಡ್ತಿದ್ದು ಸಹಮತದ ದರ ನಿಗದಿಗೆ ಎಲ್ಲರು ಮುಂದೆ ಬರಬೇಕು ಎಂದು ಸಿಎಂ ಮನವಿ ಮಾಡಿದ್ದಾರೆ. ರೈತರಿಗೆ ಅನ್ಯಾಯ ಆಗಬಾರದು, ಸರ್ಕಾರಕ್ಕೂ ಹೊರೆಯಾಗಬಾರದು. ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಇರುವ 20 ಸಾವಿರ ಪ್ರಕರಣ ಹಿಂಪಡೆದು ಸಹಮತದಿಂದ ಬಗೆಹರಿಸಲು ಪ್ರಯತ್ನ ಮಾಡುವುದಕ್ಕೆ ಸಭೆಯಲ್ಲಿ ತೀರ್ಮಾನ ಮಾಡಲಾಯ್ತು.