ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತರ ಜಾಮೀನು ಪಡೆದು BGS ಆಸ್ಪತ್ರೆ ಸೇರಿದ್ರು. ಆದರೆ ದರ್ಶನ್ ಜಾಮೀನು ಪಡೆದಿದ್ದು, ಅನಾರೋಗ್ಯ ನಿಮಿತ್ತ. ಅದೂ ಅಲ್ಲದೆ ದರ್ಶನ್ಗೆ ಚಿಕಿತ್ಸೆ ನೀಡಲು ಬಳ್ಳಾರಿಯಲ್ಲಿ ವ್ಯವಸ್ಥೆಯೇ ಇಲ್ಲ ಎಂದು ಕೋರ್ಟ್ಗೆ ಹೇಳಲಾಗಿತ್ತು. ಸರ್ಕಾರಿ ವೈದ್ಯರೂ ಕೂಡ ಅದನ್ನೇ ಹೇಳಿದ್ದರು. ಆ ಬಳಿಕ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿಗೆ ಬಂದಿದ್ದ ದರ್ಶನ್ 6 ವಾರಗಳ ಕಾಲ ಯಾವುದೇ ಸರ್ಜರಿ ಮಾಡಿಸಿಕೊಳ್ಳದೆ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ರು.
6 ವಾರಗಳ ಕಾಲದ ಜಾಮೀನು ಅವಧಿ ಮುಗಿಯುತ್ತೆ ಎನ್ನುವಾಗ ಡಿಸೆಂಬರ್ 11ರಂದು ಸರ್ಜರಿ ಮಾಡಿಸಿಕೊಳ್ಳಲಾಗುತ್ತದೆ ಎಂದು ಕೋರ್ಟ್ಗೆ ದರ್ಶನ್ ಪರ ವಕೀಲರು ಹೇಳಿದ್ದರು. ಅಷ್ಟು ಮಾತ್ರವಲ್ಲದೆ ಸರ್ಜರಿ ಮಾಡಿಸಿದ ಬಳಿಕ ವಿಶ್ರಾಂತಿ ಅಗತ್ಯವಿದ್ದು, ಜಾಮೀನು ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದರು. ವಾದ ಪ್ರತಿವಾದ ಆಲಿಸಿದ್ದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ನಾಳೆ ಮಧ್ಯಾಹ್ನ 2.30ಕ್ಕೆ ದರ್ಶನ್ ಜಾಮೀನು ಭವಿಷ್ಯ ನಿಗದಿಯಾಗಿದೆ. ಜಾಮೀನು ರದ್ದು ಮಾಡಬೇಕು ಎಂದು ಸರ್ಕಾರಿ ವಕೀಲರು ವಾದಿಸಿದ್ದರು. ನಾಳೆ ದರ್ಶನ್ ಜಾಮೀನು ಭವಿಷ್ಯದ ಜೊತೆಗೆ ಪವಿತ್ರಾಗೌಡ ಜಾಮೀನು ಭವಿಷ್ಯವೂ ಹೊರ ಬೀಳಲಿದ್ದು, ಒಂದು ವೇಳೆ ಜಾಮೀನು ಕೊಡದಿದ್ರೆ ಮುಂದೇನು ಅನ್ನೋ ಆತಂಕ ಎದುರಾಗಿದೆ.