
ರಾಷ್ಟ್ರ ರಾಜಧಾನಿ ದೆಹಲಿಯ ಶಂಭು ಗಡಿಯಲ್ಲಿ ಅನ್ನದಾತರ ಆಕ್ರೋಶ ಜೋರಾಗಿದೆ. ಕೈಯಲ್ಲಿ ಬಾವುಟಗಳನ್ನ ಹಿಡಿದು ರೈತರು ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ನಮ್ಮನ್ನ ದೆಹಲಿಗೆ ಹೋಗಲು ಬಿಡಿ ಅಂತ ಪೊಲೀಸರು ಹಾಗು ಸೈನಿಕರ ಜೊತೆ ವಾಗ್ವಾದಕ್ಕೆ ಇಳಿದು, ಆಕ್ರೋಶ ಹೊರ ಹಾಕಿದ್ದಾರೆ. ಏನಾಗುತ್ತೋ ನೋಡೇ ಬಿಡೋಣ.. ನಮ್ಮ ಬೇಡಿಕೆ ಈಡೇರುವ ತನಕ ನಾವು ಹಿಂದೆ ಹೋಗಲ್ಲ. ನಮ್ಮನ್ನೇ ತಡಿತೀರಾ..? ಅಂತ ಹೆದ್ದಾರಿಗೆ ಅಡ್ಡಲಾಗಿ ಹಾಕಿರುವ ಬ್ಯಾರಿಕೇಡ್ ಹಾಗು ಮುಳ್ಳುತಂತಿ ಬೇಲಿಗಳನ್ನ ಕಿತ್ತು ಎಸೆದಿದ್ದಾರೆ.

ನಮ್ಮನ್ನ ನೀವು ಎಷ್ಟೇ ತಡೆದ್ರೂ ನಮ್ಮ ಹೋರಾಟ ನಿಲ್ಲಲ್ಲ.. ದೆಹಲಿಗೆ ಹೋಗಲು ನಮ್ಮನ್ನ ಬಿಡಿ ಅಂತ ಪೊಲೀಸರ ಜೊತೆ ವಾಗ್ವಾದ ಮಾಡಿದ್ದಾರೆ. ಪ್ಲೀಸ್, ಪ್ರತಿಭಟನೆ ಕೈಬಿಡಿ.. ಊರುಗಳಿಗೆ ವಾಪಸ್ ಹೋಗಿ ಅಂತ ಪೊಲೀಸರು ಹೇಳಿದ್ರು ಕೇಳದೆ ಪರಿಸ್ಥಿತಿ ಕೈಮೀರಿದ ಕೂಡಲೇ ಟಿಯರ್ ಗ್ಯಾಸ್‌ಗಳನ್ನ ರೈತರತ್ತ ಎಸೆದಿದ್ದಾರೆ.

ಪಂಜಾಬ್-ಹರಿಯಾಣದ ಶಂಭು ಗಡಿಯಲ್ಲಿ ಕಳೆದ 10 ತಿಂಗಳಿಂದ ಪ್ರತಿಭಟನೆ ಮಾಡ್ತಿರೋ ರೈತರಲ್ಲಿ 101 ರೈತರು ದೆಹಲಿಗೆ ಪಾದಯಾತ್ರೆ ತೆರಳಲು ಮುಂದಾಗಿದ್ದ ವೇಳೆ ಪೊಲೀಸರು ಹಾಗು ಸೇನೆ ಮೂಲಕ ತಡೆಯುವ ಕೆಲಸ ಆಗಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ಮಾಡ್ತಿದ್ದು, ದೆಹಲಿ ಚಲೋ ನಡೆಯಬೇಕಿತ್ತು. ಪಂಜಾಬ್, ಹರಿಯಾಣ ರೈತರು ಚಳಿಗಾಲದ ಅಧಿವೇಶನದ ಸಮಯದಲ್ಲಿ ಸಂಸತ್‌ಗೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದರು. ಸಂಯುಕ್ತ ಕಿಸಾನ್ ಮೋರ್ಚಾ, ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಸಾವಿರಾರು ರೈತರು ದೆಹಲಿ ಕಡೆಗೆ ನುಗ್ಗಲು ಸಜ್ಜಾಗಿದ್ದರು.
ಪಂಜಾಬ್, ಹರಿಯಾಣ ಸೇರಿ ಹಲವೆಡೆಯಿಂದ ಬಂದಿದ್ದ ರೈತರನ್ನ ಶಂಭು ಗಡಿಯಲ್ಲೇ ತಡೆದಿದ್ದ ಪೊಲೀಸರು, ತಡಗೋಡೆ ನಿರ್ಮಿಸಿ, ರಸ್ತೆಗೆ ಬ್ಯಾರಿಕೇಡ್ ಹಾಕಿ.. ಮುಳ್ಳಿನ ತಂತಿಬೇಲಿ ಹಾಕಿ ತಡೆಯುತ್ತಿದ್ದಾರೆ.. ಟಿಯರ್ ಗ್ಯಾಸ್ ಪ್ರಯೋಗಿಸಿ ಪ್ರತಿಭಟನಾಕಾರರನ್ನ ಚದುರಿಸುವ ಪ್ರಯತ್ನ ನಡಿತು.. ಟಿಯರ್ ಗ್ಯಾಸ್ ಹೊಗೆಯಿಂದ ವಿಪರೀತ ಕೆಮ್ಮು, ಕಣ್ಣು ಉರಿ ಉಂಟಾಗಿ ರೈತರು ಉಸಿರುಗಟ್ಟಿ ಅಸ್ವಸ್ಥರಾದ್ರು. ಸಂಘರ್ಷದಲ್ಲಿ ಕೆಲ ರೈತರು ಗಾಯಗೊಂಡಿದ್ದಾರೆ. ಹೀಗಾಗಿ ಜಾಥಾವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ಮಾತನಾಡಿ, ನಮ್ಮ ಮೇಲೆ ಪುಷ್ಪವೃಷ್ಟಿ ಮಾಡಿದ್ರು. ಆ ಬಳಿಕ ರಬ್ಬರ್ ಗುಂಡು ಹಾರಿಸಿದರು, ನಮ್ಮ ಮೇಲೆ ಎರಚಿದ ಹೂವಿನಲ್ಲಿ ರಾಸಾಯನಿಕ ಅಂಶಗಳಿದ್ದವು.. ಹಲವು ರೈತರು ಗಾಯಗೊಂಡಿದ್ದಾರೆ.. ನಾಳೆ 2 ವೇದಿಕೆಗಳು ಸಭೆ ನಡೆಸಲಿವೆ. ಆ ಬಳಿಕ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇವೆ ಎಂದಿದ್ದಾರೆ. ಅಂದರೆ ಪೊಲೀಸರು ಹೂಗಳನ್ನು ರಾಸಾಯನಿಕ ಬೆರೆಸಿ ಎರಚಿದ್ರಾ..? ಅನ್ನೋ ಅನುಮಾನ ಮೂಡಿದೆ.