ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆ ಆದ ಬಳಿಕ ಚನ್ನಪಟ್ಟಣದಲ್ಲಿ ಇಂದು ಜೆಡಿಎಸ್ – ಬಿಜೆಪಿ ಕಾರ್ಯಕರ್ತರ ಸಭೆ ಆಯೋಜನೆ ಮಾಡಲಾಗಿದ್ದು, ಮತದಾರರಿಗೆ ಜೆಡಿಎಸ್ ಬಿಜೆಪಿ ನಾಯಕರು ಕೃತಜ್ಞತೆ ಸಲ್ಲಿಸಲಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಆರ್.ಅಶೋಕ್, ಡಾ.ಸಿ.ಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಸಂಜೆ 4 ಗಂಟೆಗೆ ಶಿಶಿರ ಹೋಂ ಸ್ಟೇ ರೆಸಾರ್ಟ್‌ನಲ್ಲಿ ನಡೆಯುವ ಸಭೆಯಲ್ಲಿ ಕಾರ್ಯಕರ್ತರ ಜೊತೆ ಸೋಲಿನ ಪರಾಮರ್ಶೆ ನಡೆಸಲಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾಗಲು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ, ನೇರವಾಗಿ ಬಿಡದಿಯ ತೋಟದ ಮನೆಗೆ ತೆರಳಿದ್ದಾರೆ. ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಬೆಳಗ್ಗೆ 10:50 ರ ಏರ್ ಇಂಡಿಯಾ ವಿಮಾನದಲ್ಲಿ ಆಗಮಿಸಿದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಚನ್ನಪಟ್ಟಣ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದು, ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಕೆಂಪೇಗೌಡ ಏರ್ಪೋಟ್‌ನ ವಿಐಪಿ ಟರ್ಮಿನಲ್ ಮೂಲಕ ಆಗಮಿಸಿದ ಹೆಚ್.ಡಿ ಕುಮಾರಸ್ವಾಮಿ, ಕನಿಷ್ಠ ಸೌಜನ್ಯಕ್ಕೂ ಕಾರಿನ ಗ್ಲಾಸ್ ಇಳಿಸಿ ಮಾಧ್ಯಮದವರನ್ನು ನೋಡಲಿಲ್ಲ, ಮಾತನಾಡಿಸಲೂ ಇಲ್ಲ. ಸೋಲಿನ ಬೇಸರದಲ್ಲಿರುವ ಕೇಂದ್ರ ಸಚಿವರು, ಇಲ್ಲೀವರೆಗೂ ಮೌನಕ್ಕೆ ಶರಣಾಗಿದ್ದಾರೆ.