ಬೆಂಗಳೂರು:ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಮತ್ತು ವಿಜಯೇಂದ್ರ ಬಣದ ನಡುವೆ ತಿಕ್ಕಾಟ ಜೋರಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಮಾಜಿ ಸಚಿವ ರೇಣುಕಾಚಾರ್ಯ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಬಣಕ್ಕೆ ಸೆಡ್ಡು ಹೊಡೆದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮದೇ ತಂಡ ಕಟ್ಟಿಕೊಂಡು ವಕ್ಫ್ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಇದು ವಿಜಯೇಂದ್ರ ಬಣದ ಕಣ್ಣು ಕೆಂಪಗಾಗಿಸಿದೆ. ಹೈಕಮಾಂಡ್ ಗೂ ದೂರು ನೀಡಿದ್ದಾರೆ.
ಇಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ‘ಏನು ಯತ್ನಾಳ್ ಮೋದಿಗಿಂತ ದೊಡ್ಡವರಾ? ಮೋದಿಗೇ ಸೂಚನೆ ಕೊಡುವಷ್ಟು ದೊಡ್ಡವರಾಗಿ ಬಿಟ್ಟರಾ? ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನೇ ಪ್ರಶ್ನೆ ಮಾಡುತ್ತಾರೆ. ಇಂತಹವರನ್ನು ಪಕ್ಷದಿಂದ ಮುಲಾಜಿಲ್ಲದೇ ಕಿತ್ತು ಹಾಕಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.