ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ: ವೈಯಕ್ತಿಕ ಟೀಕೆಗಿಂತ, ಕೆಲಸ ಮುಖ್ಯ
ಅಭಿವೃದ್ಧಿ ಮಾಡಿದ್ದೇವೆ, ಜನ ಆಶೀರ್ವಾದ ಮಾಡಿದ್ದಾರೆ: ಸಂತೋಷ್ ಲಾಡ್ (Santosh Lad)

ಚುನಾವಣೆಯಲ್ಲಿ ವೈಯಕ್ತಿಕ ಟೀಕೆಗಿಂತ ಅಭಿವೃದ್ಧಿ ಪರ ನಾವು ಮಾತನಾಡಿದ್ದೇವೆ. ಅದಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Minister Santosh Lad) ಹೇಳಿದರು.

ಇತ್ತೀಚೆಗೆ ನಡೆದ ವಿಧಾನಸಭಾ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಹಣ ಬಲ, ಸರ್ಕಾರದ ಬಲ ಬಳಸಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂಬ ವಿರೋಧಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡಿದ ಲಾಡ್ ಅವರು, ರಾಜಕೀಯದಲ್ಲಿ ಟೀಕೆ ಹೊಸದಲ್ಲ. ಆದರೆ ನಾವು ಯಾರ ವಿರುದ್ಧವೂ ಟೀಕೆ ಮಾಡಿಲ್ಲ. ಸರ್ಕಾರ ಜನರಿಗಾಗಿ ಕೆಲಸ ಮಾಡಿದೆ. ಅದನ್ನೇ ಪ್ರಚಾರದಲ್ಲಿ ಹೇಳಿದೆವು. ಅದಕ್ಕೆ ನಮಗೆ ಜನರೂ ಆಶೀರ್ವಾದ ಮಾಡಿದ್ದಾರೆ ಎಂದು ಹೇಳಿದರು.
ಮೂರು ಕ್ಷೇತ್ರಗಳಲ್ಲಿನ ಗೆಲುವು ನಾಯಕರು, ಮುಖಂಡರು, ಕಾರ್ಯಕರ್ತರ ಗೆಲುವು. ನಮ್ಮ ಸರ್ಕಾರ ನೀಡಿದ ಗ್ಯಾರಂಟಿಗೆ ಸಿಕ್ಕ ಗೆಲುವು. ಇದು ಬಡವರ ಗೆಲುವು ಎಂದು ವಿಶ್ಲೇಷಿಸಿದರು.

ನಾವು ನಮ್ಮ ಸರ್ಕಾರ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿದೆವು. ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ಜನ ಒಪ್ಪಿಕೊಂಡಿದ್ದಾರೆ ಎಂಬುದು ಈ ಫಲಿತಾಂಶದಿಂದ ತಿಳಿದಿದೆ. ನಮ್ಮ ಮತದಾರರು ಪ್ರಜ್ಞಾವಂತರು. ಅವರು ಬಿಜೆಪಿಯ ಸುಳ್ಳುಗಳನ್ನು ನಂಬಲಿಲ್ಲ. ಆದ್ದರಿಂದ ಕಾಂಗ್ರೆಸ್ ಕೈ ಹಿಡಿದರು ಎಂದರು.

ಈ ಉಪ ಚುನಾವಣೆಯಲ್ಲಿ ಮುಡಾ ಹಗರಣ(Muda Scam), ವಾಲ್ಮೀಕಿ ಹಗರಣ (Valmiki Scam) ಹಾಗೂ ವಕ್ಫ್ ವಿವಾದ ಯಾವುದನ್ನೂ ಲೆಕ್ಕಿಸದೆ ಜನ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಇಲ್ಲಿ ಯಾವುದೇ ಮ್ಯಾಜಿಕ್ ನಡೆದಿಲ್ಲ. ಎಲ್ಲಾ ವಿವಾದ ಮತ್ತು ಹಗರಣಗಳನ್ನು ಬಿಜೆಪಿ ಮತ್ತು ಜೆಡಿಎಸ್ ರಾಜಕೀಯಗೊಳಿಸಿದರು. ಅದರಿಂದ ಅವರಿಗೆ ನಷ್ಟವಾಯಿತೇ ಹೊರತು ಲಾಭವಾಗಲಿಲ್ಲ. ವಾಲ್ಮೀಕಿ ಹಗರಣದಲ್ಲಿ ತಪ್ಪಾಗಿದೆ. ತನಿಖೆ ನಡೆದಿದೆ. ಕೆಲವೇ ದಿನಗಳಲ್ಲಿ ಸತ್ಯ ಹೊರಬರಲಿದೆ ಎಂದು ಹೇಳಿದರು.

ಅಭಿವೃದ್ಧಿ ಮಾಡಿ ಓಟು ಕೇಳಿದರೆ ಪ್ರಜಾಪ್ರಭುತ್ವಕ್ಕೆ ಒಳ್ಳೆಯದು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಬಡವರು ಮತ್ತು ರೈತರಿಗೆ ಹೇಳಿಕೊಳ್ಳುವ ಯಾವುದೇ ಕಾರ್ಯಕ್ರಮ ಮಾಡಲಿಲ್ಲ. ಅವರಿಗೆ ಹೇಳಿಕೊಳ್ಳಲು ಏನೂ ಇಲ್ಲ. ಹಾಗಾಗಿ ಅವರು ಟೀಕೆ ಮಾಡುತ್ತಾರೆ. ಸೋತಾಗ ಏನು ಬೇಕಾದರೂ ಹೇಳಬಹುದು ಎಂದು ಹೇಳಿದರು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ (Maharastra Election) ಬಗ್ಗೆ ಮಾತನಾಡಿದ ಸಂತೋಷ್ ಲಾಡ್ ಅವರು, ಪ್ರಜಾಪ್ರಭುತ್ವದಲ್ಲಿ ಒಂದೇ ಪಕ್ಷದ ಸರ್ಕಾರ ಹೆಚ್ಚು ದಿನ ಅಧಿಕಾರದಲ್ಲಿರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಆಳಿದರೂ ಅದಕ್ಕೆ ತನ್ನದೇ ಆದ ನೈತಿಕತೆ ಇರಬೇಕು. ಯಾವುದರ ಮೇಲೆ ಮತ ಕೇಳುತ್ತಾರೆ. ಮಾನದಂಡ ಏನು ಎಂಬುದು ತಿಳಿಯಬೇಕು ಎಂದರು.

ಮಹಾರಾಷ್ಟ್ರದಲ್ಲಿ ಆರು ತಿಂಗಳ ಹಿಂದೆ ಮೋದಿ ಬೇಡ ಎಂದು ಜನ ಓಟು ಹಾಕಿದ್ದರು. ಈಗ ಮತ್ತೆ ಮೋದಿಗೆ ಮತ ಹಾಕಿದ್ದಾರೆ. ಹಾಗಾದರೆ ಏನು ಬದಲಾವಣೆ ಆಯಿತು. ಇದನ್ನು ದೇಶದ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡಬೇಕು. ರಾಜಕೀಯ ಪಕ್ಷಗಳನ್ನು ಬದಿಗಿಟ್ಟು ಯಾಕೆ ಮತದಾರರು ಓಟು ಹಾಕುತ್ತಾ ಇದ್ದಾರೆ ಎಂಬುದನ್ನು ಅಧ್ಯಯನ ಮಾಡಬೇಕಿದೆ ಎಂದರು.
ಇಂತಹ ರಾಜಕೀಯ ಬೆಳವಣಿಗೆಗಳು ನಿಜಕ್ಕೂ ಎಚ್ಚರಿಕೆಯ ಗಂಟೆ. ಯಾವುದೇ ಮಾಧ್ಯಮಗಳೂ ಸಹ ಇಂತಹ ಫಲಿತಾಂಶ ಬರುತ್ತೆ ಎಂದು ಊಹೆ ಮಾಡಿರಲಿಲ್ಲ. ಮತದಾರರು ಯಾಕೆ ಹೀಗೆ ಮಾಡಿದರು ಎಂಬುದರ ವಿಶ್ಲೇಷಣೆ ಆಗಬೇಕು ಎಂದರು.

ಮಧ್ಯಪ್ರದೇಶದಲ್ಲಿ ಶೇಕಡಾ ಎಂಟರಷ್ಟು ಮತ ಪ್ರಮಾಣ ಜಾಸ್ತಿಯಾಗಿದೆ. ಯಾಕೆ ಆಗಿದೆ ಎಂಬುದರ ಬಗ್ಗೆ ತಿಳಿಯಬೇಕು. ಯಾವುದೇ ರಾಜಕೀಯ ಪಕ್ಷ ಗೆದ್ದರೂ ಮಾರ್ಜಿನ್ ಸಹ ಪ್ರಮುಖವಾಗಲಿದೆ. ಆರು ತಿಂಗಳಲ್ಲಿ ಜನರು ಮೋದಿ ಅವರಿಗೆ ಓಟು ನೀಡಿದ್ದಾರೆ ಎಂದರೆ ಏನಾಗುತ್ತಿದೆ ಎಂಬುದು ಪ್ರತಿಯೊಬ್ಬರಿಗೆ ತಿಳಿಯಬೇಕು ಎಂದರು.
ಅಧಿಕಾರದಲ್ಲಿರುವವರು ಬೇರೆಯವರನ್ನು ಟೀಕೆ ಮಾಡುವುದು ಒಳ್ಳೆಯ ಪ್ರಜಾಪ್ರಭುತ್ವದ ಲಕ್ಷಣ ಅಲ್ಲ. ಅಭಿವೃದ್ಧಿ ಬಗ್ಗೆ ಮಾತನಾಡಲಿ. ಜನರಿಗೆ ತಿಳಿಸಲಿ. ಕಾರ್ಯಕ್ರಮ ನೀಡಿದ್ದೇವೆ ಎಂದ ಮಾತ್ರಕ್ಕೆ ಜನ ಓಟು ಹಾಕಬೇಕು ಎಂದೇನಿಲ್ಲ. ಮೋದಿಯವರು ಯಾವ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ ಎಂಬುದರ ಅಧ್ಯಯನ ಮಾಡಿದರೆ, ಅಂಕಿ ಅಂಶ ತೆಗೆದು ನೋಡಿದರೆ ಭಯ ಆಗುತ್ತದೆ ಎಂದರು.