ಧಾರವಾಡ: ಇಬ್ಬರು ತಾಯಂದಿರು ತಮ್ಮ ಪ್ರಿಯಕರನೊಂದಿಗೆ ಸೇರಿ ತಮ್ಮ ಆರು ಮಕ್ಕಳನ್ನು ಅಪಹರಿಸಿ ಗಂಡನ ಕುಟುಂಬಕ್ಕೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಹಾಗೂ ಇಬ್ಬರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅಪಹರಣ ಪ್ರಕರಣದಲ್ಲಿ ಆರು ಮಕ್ಕಳನ್ನು ಧಾರವಾಡ ವಿದ್ಯಾಗಿರಿ ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೆ, ಆರೋಪಿ ತಾಯಂದಿರಾದ ಪ್ರಿಯಾಂಕಾ, ರೇಷ್ಮಾ ಅಲಿಯಾಸ್ ರಶ್ಮಿ ಮತ್ತು ಅವರ ಸ್ನೇಹಿತರಾದ ಸುನೀಲ್ ಮತ್ತು ಮುತ್ತುರಾಜ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೊಲೀಸ್ ಆಯುಕ್ತರು, ನ.7ರಂದು ಮಕ್ಕಳನ್ನು ಹಾಸ್ಟೆಲ್ ಗೆ ಕರೆದುಕೊಂಡು ಹೋದ ಪ್ರಿಯಾಂಕಾ ಹಾಗೂ ರೇಷ್ಮಾ ನಾಪತ್ತೆಯಾಗಿದ್ದಾರೆ. 8 ಮಂದಿ ಕಾಣೆಯಾಗಿರುವ ಬಗ್ಗೆ ವಿದ್ಯಾಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.
6 ಮಕ್ಕಳು ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾಗಿರಿ ಪೊಲೀಸರು ದೂರು ದಾಖಲಿಸಿಕೊಂಡು ಹುಡುಕಾಟ ಆರಂಭಿಸಿದ್ದಾರೆ. 6 ಮಕ್ಕಳು ನಾಪತ್ತೆಯಾಗಿದ್ದು, ಪ್ರಕರಣ ಧಾರವಾಡ ಸುತ್ತಮುತ್ತ ಆತಂಕ ಸೃಷ್ಟಿಸಿದೆ.ನಿರಂತರ ಶೋಧದ ವೇಳೆ ಈ ಪ್ರಕರಣದ ಕುರಿತು ಬೆಂಗಳೂರಿನಿಂದ ಒಂದಷ್ಟು ಮಾಹಿತಿ ಸಿಕ್ಕಿದ್ದು, ಇಬ್ಬರು ತಾಯಂದಿರು ಸೇರಿ 8 ಮಂದಿ ಪರಾರಿಯಾಗಿದ್ದಾರೆ.
ಈ ಜಾಡು ಹಿಡಿದು ಪೊಲೀಸರು ಬೆಂಗಳೂರಿಗೆ ತೆರಳಿದ್ದರು. ಹೈದರಾಬಾದ್, ಗೋವಾ ಮತ್ತು ಮಹಾರಾಷ್ಟ್ರದಲ್ಲೂ ಅವರಿಗಾಗಿ ಹುಡುಕಾಟ ನಡೆದಿದೆ. ಆದರೆ, ಮಂಗಳವಾರ ನಾಪತ್ತೆಯಾದ ಮಕ್ಕಳ ಕುಟುಂಬಗಳಿಗೆ ಹಣದ ಬೇಡಿಕೆಯ ಕರೆ ಬಂದಿದೆ. ಪೊಲೀಸರ ಪ್ರಕಾರ, ತಮ್ಮ ಸ್ನೇಹಿತರು ಮತ್ತು ಅವರ ಮಕ್ಕಳೊಂದಿಗೆ ಕಾಣೆಯಾದ ಮಹಿಳೆಯರು ಗಂಡನ ಕುಟುಂಬಗಳಿಗೆ ಕರೆ ಮಾಡಿ 10 ಲಕ್ಷ ರೂ. ಹಣ ಕೊಡದಿದ್ದರೆ ಮಕ್ಕಳನ್ನು ಮಾರಿ ನೇಪಾಳಕ್ಕೆ ಹೋಗುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.
ಹಣದ ಬೇಡಿಕೆ ಬಂದ ತಕ್ಷಣ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಆರೋಪಿಗಳು ಮಕ್ಕಳೊಂದಿಗೆ ಬೆಂಗಳೂರಿನಲ್ಲಿದ್ದಾರೆ ಎಂಬ ಮಾಹಿತಿ ಇತ್ತು. ಆ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಿ 6 ಮಕ್ಕಳನ್ನು ರಕ್ಷಿಸಲಾಗಿದ್ದು, ಪ್ರಿಯಾಂಕಾ ಮತ್ತು ರೇಷ್ಮಾ ಹಾಗೂ ಅವರ ಪ್ರೇಮಿಗಳಾದ ಸುನೀಲ್ ಮತ್ತು ಮುತ್ತುರಾಜ್ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಪತಿಯನ್ನು ಕಳೆದುಕೊಂಡಿದ್ದ ಪ್ರಿಯಾಂಕಾ ಶಿಕಾರಿಪುರ ಮೂಲದ ಮುತ್ತುರಾಜ್ ಜತೆ ಸ್ನೇಹ ಬೆಳೆಸಿದ್ದರು. ಗಂಡನಿದ್ದರೂ ರೇಷ್ಮಾ ಸುನಿಲ್ ಜೊತೆ ಸಂಬಂಧ ಹೊಂದಿದ್ದಳು. ತನಿಖೆ ವೇಳೆ ಇವರಿಬ್ಬರು ಮದುವೆಗೂ ಮುನ್ನವೇ ಪ್ರೇಮಿಗಳಾಗಿರುವುದು ಪತ್ತೆಯಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಆರೋಪಿಗಳಿಬ್ಬರು ಮಹಿಳೆಯರು ಓಡಿ ಹೋಗುವುದಾಗಿ ಗಂಡನ ಮನೆಯವರಿಗೆ ಬೆದರಿಕೆ ಹಾಕುತ್ತಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಆದರೆ ಹೆಂಗಸರು ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಏನನ್ನೂ ಮಾಡುವುದಿಲ್ಲ ಎಂದು ಕುಟುಂಬಸ್ಥರು ಭಾವಿಸಿದ್ದರು. ಆದರೆ, ಕುಟುಂಬದವರನ್ನು ವಿಚಾರಣೆಗೊಳಪಡಿಸಿದಾಗ ನೈಜ ಕಥೆ ಬಯಲಾಗಿದ್ದು, ಪೊಲೀಸರು ಇಬ್ಬರು ಮಹಿಳೆಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ. ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.