ವಿಜಯನಗರ ಜಿಲ್ಲೆ ಆದ ಬಳಿಕ ವಿಜಯನಗರ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಟ್ಟಿಲ್ಲೆಂದು ಕಾಂಗ್ರೆಸ್ ಶಾಸಕ ಗವಿಯಪ್ಪ ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅನುದಾನ ಕೆಲವೇ ಕೆಲವು ಕೋಟಿ ಕೊಟ್ಟಿದ್ದಾರೆ ಎಂದು ಹೇಳಿದ್ದ ಮಾತನ್ನು ಜೆಡಿಎಸ್ ಹಾಗು ಬಿಜೆಪಿ ರಾಜಕೀಯ ಅಸ್ತ್ರ ಮಾಡಿಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳುವ ಕೆಲಸ ಮಾಡಿದ್ದಾರೆ. ಜೆಡಿಎಸ್ ಹಾಗು ಬಿಜೆಪಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದು ಸರ್ಕಾರವನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
“ಅನುದಾನದ ಕೊರತೆಯಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೊಳ್ಳುತ್ತಾರೆ. ಆದರೆ ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯ ಹಾಗೂ ಪಕ್ಷಪಾತ ಮಾಡುತ್ತಿರುವುದು ಯಾಕೆ..? ಕೆಲವರು ಕೋಟಿ ಕೋಟಿ ಹಣ ಪಡೆಯುತ್ತಿರುವಾಗ ವಿಜಯನಗರ ಕ್ಷೇತ್ರವನ್ನು ಯಾಕೆ ಕಡೆಗಣಿಸಲಾಗುತ್ತಿದೆ..? ಎಂದು ಜೆಡಿಎಸ್ ಪ್ರಶ್ನೆ ಮಾಡಿದ್ದಾರೆ.ಕಾಂಗ್ರೆಸ್ ಶಾಸಕ ಗವಿಯಪ್ಪ ಅವರ ಅಸಹನೆ ಮತ್ತು ಆಕ್ರೋಶವನ್ನು ನ್ಯಾಯಯೋಚಿತವಾಗಿಯೇ ಇದೆ ಎಂದು ಪ್ರಶಂಸೆ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿ ಆಗಿದೆಯಾ..? ಸರ್ಕಾರದ ಬಳಿ ದುಡ್ಡಿಲ್ಲದ ಖಾಲಿ ‘ಕೈ’ ಆಡಳಿತ ಮಾಡುತ್ತಿದೆ. ರಾಜು ಕಾಗೆ ಬಳಿಕ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕರಾದ ಗವಿಯಪ್ಪ, ನಮ್ಮ ಕ್ಷೇತ್ರಕ್ಕೆ ಅನುದಾನ ಕೊಡ್ತಿಲ್ಲ ಎಂದು ಕಣ್ಣೀರು ಹಾಕುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ದಿವಾಳಿತನಕ್ಕೆ ಸಾಕ್ಷಿ ಎಂದು ವಾಗ್ದಾಳಿ ಮಾಡಿದೆ.
ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಗೆ ಬರೀ 10 ಕೋಟಿ ಅನುದಾನ ಕೊಡಲಾಗಿದೆ ಎಂದು ಶಾಸಕ ಗವಿಯಪ್ಪ ಅಸಮಾಧಾನ ತೋಡಿಕೊಂಡಿದ್ದಾರೆ. ಹಿಂದಿನ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದೆ.. ಆದರೆ ಈ ಬಾರಿ ಅನುದಾನ ಸಿಗದೆ, ಕ್ಷೇತ್ರದಲ್ಲಿ ಆಸ್ಪತ್ರೆಗಳು, ರಸ್ತೆಗಳ ಸಮಸ್ಯೆಗಳು ಸಾಕಷ್ಟಿದೆ. ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಆಗುತ್ತಿಲ್ಲ ಎಂದು ತಮ್ಮ ಸರ್ಕಾರದ ವಿರುದ್ಧವೇ ಕಿಡಿಕಾರಿರುವುದು ಭ್ರಷ್ಟ ಕಾಂಗ್ರೆಸ್ ಸರ್ಕಾರದ ಅದಕ್ಷ ಆಡಳಿತಕ್ಕೆ ಉದಾಹರಣೆ ಎಂದಿದೆ.
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿರುವ ಸಿಎಂ ಸಿದ್ದರಾಮಯ್ಯ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊಡುತ್ತಿಲ್ಲ. ಸ್ವತಃ ಕಾಂಗ್ರೆಸ್ ಶಾಸಕರೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಕಣ್ಣೀರಿಡುತ್ತಿದ್ದರೂ ಮುಖ್ಯಮಂತ್ರಿಗಳು ಕಿವಿಗೊಡುತ್ತಿಲ್ಲ.. ಯಾಕಂದರೆ ಸರ್ಕಾರದ ಬೊಕ್ಕಸ ಖಾಲಿ ಮಾಡಿರುವುದೇ ಸಿದ್ದರಾಮಯ್ಯ ಅವರ ಸಾಧನೆ ಎಂದು ಟೀಕೆ ಮಾಡಿದೆ.