(ಕವಿ ಮದ್ದೂರು ದೊರೆಸ್ವಾಮಿ ಅವರ “ ಹಂಬಲದ ಹಣತೆ ” ಕವನ ಸಂಕಲನ ಬಿಡುಗಡೆಯ ಸಂದರ್ಭದ ಅಧ್ಯಕ್ಷೀಯ ಭಾಷಣದ ಲೇಖನ ರೂಪ )
ಜನಪದ ಸಾಹಿತ್ಯ ಜನಜೀವನದ ಒಡಲಿನಿಂದ ತಂತಾನೇ ಮೂಡಿದಂತಹ ಒಂದು ಅನುಭವ-ಅನುಭಾವಿಕ ಅಭಿವ್ಯಕ್ತಿ. ಅಲ್ಲಿ ಜೀವನಾನುಭವಗಳೊಂದಿಗೇ ಬದುಕಿನುದ್ದಕ್ಕೂ ಸಮಾಜವು ಎದುರಿಸುವ ತಲ್ಲಣ, ಆತಂಕ ಮತ್ತು ತುಮುಲಗಳನ್ನು ಮೌಖಿಕವಾಗಿ ದಾಖಲಿಸುವ ಒಂದು ಹಪಹಪಿ ಸಾಮಾನ್ಯವಾಗಿ ಕಾಣುತ್ತದೆ. ಹಾಗಾಗಿಯೇ ಯಾವುದೇ ದೇಶದ/ಪ್ರದೇಶದ ಜನಪದ ಸಾಹಿತ್ಯಗಳನ್ನು ಒಳಹೊಕ್ಕು ನೋಡಿದರೂ ಅಲ್ಲಿ ನಮಗೊಂದು ವಿಶಾಲ ಸಮಾಜ ಕಾಣುತ್ತದೆ. ಆಧುನಿಕ ಸಾಹಿತ್ಯವನ್ನು ಇದರ ಒಂದು ವಿಸ್ತರಣೆಯಾಗಿ ನೋಡಿದಾಗ, ಈ ಸಾಹಿತ್ಯಾಭಿವ್ಯಕ್ತಿಯಲ್ಲಿ ಒಡೆದಿರುವ ಕವಲುಗಳು ಎದುರಾಗುತ್ತವೆ. ಓದು-ಬರಹವನ್ನೇ ಅರಿಯದಿದ್ದ ಪ್ರಾಚೀನ ಸಮಾಜದಲ್ಲಿ ಹುಟ್ಟಿಕೊಂಡಂತಹ ಸೃಜನಶೀಲ ಅಭಿವ್ಯಕ್ತಿಯ ಮಾದರಿಗಳು ಆಧುನಿಕ ಪ್ರಪಂಚದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಅಥವಾ ತಮ್ಮ ಧ್ವನಿಗಾಗಿ ಸುತ್ತಲಿನ ಪರಿಸರದ ವಿಭಿನ್ನ ನೆಲೆಗಳನ್ನು ಆಧರಿಸುತ್ತವೆ.
ಸಮಕಾಲೀನ ಸಾಹಿತ್ಯ ರಚನೆಯ ಸಂದರ್ಭದಲ್ಲಿ ನಾವು ಕಾಣಬಹುದಾದ ಒಳನೋಟಗಳನ್ನು ಈ ಚಾರಿತ್ರಿಕ ಹೆಜ್ಜೆಗಳಲ್ಲೇ ಗುರುತಿಸಿದರೂ, 21ನೆಯ ಶತಮಾನದ ಡಿಜಿಟಲ್ ಯುಗದಲ್ಲಿ ನಿಂತು ನೋಡುವಾಗ ಸಾಹಿತ್ಯಾಭಿವ್ಯಕ್ತಿಗಳು ಅಷ್ಟ ದಿಕ್ಕುಗಳಿಂದಲೂ ಸವಾಲುಗಳನ್ನೇ ಎದುರಿಸುತ್ತವೆ. ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ನರಮೇಧ ಮತ್ತು ಅದಕ್ಕೆ ಕುರುಡಾಗಿರುವ ನಾಗರಿಕ ಪ್ರಪಂಚವನ್ನು ಅಣಕಿಸುವ ಒಂದು ಪದ್ಯವನ್ನು ಇಲ್ಲಿ ಉಲ್ಲೇಖಿಸಲೇಬೇಕಿದೆ. ಹೇಬಾ ಅಲ್-ಅಘಾ ಎಂಬ ಪ್ಯಾಲೆಸ್ಟೈನ್ ಕವಯಿತ್ರಿ ಯುದ್ಧ ಮುಗಿದ ಮೇಲೆ ( (When the war parts) ಕವಿತೆಯಲ್ಲಿ ನಾಶವಾಗುತ್ತಿರುವ ತನ್ನ ಸಮಾಜದ ದುಸ್ಥಿತಿಯನ್ನು ನೆನೆಯುತ್ತಾ ಈ ಪದ್ಯದ ಕೆಲವು ಸಾಲುಗಳಲ್ಲಿ
“ ಏನಾಗುತ್ತಿದೆ ಎಂದು ಕೇಳಲು
ಏನಾಯಿತು ಎಂದು ಕೇಳಲು
ನಮ್ಮ ಬೀದಿಯ ಹೆಸರೇನೆಂದು ಕೇಳಲು
ನೀವು ಯಾರಾದರೂ ನಮ್ಮ ಬೀದಿ
ಮನೆ ನೋಡಿರುವಿರಾ ”
ಎಂದು ಕೇಳುತ್ತಾಳೆ. ಅಂದರೆ ನರಮೇಧ ಮತ್ತು ವಿನಾಶಕ್ಕೆ ಕುರುಡಾಗಿರುವ ಒಂದು ನಾಗರಿಕ ಜಗತ್ತನ್ನು ಅಣಕಿಸುವಂತೆ ತನ್ನವರನ್ನು ನೆನೆದು ದುಃಖಿಸುತ್ತಾಳೆ. ಇಂತಹ ಸಾಹಿತ್ಯಕ ಅಭಿವ್ಯಕ್ತಿಗಳು ಪ್ರತಿರೋಧದ ದನಿಯಾಗಿ, ಆಂತರ್ಯದ ನೋವಿನ ದನಿಯಾಗಿ ಸಮಾಜದ ನಡುವೆ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುತ್ತದೆ. ಇದನ್ನು ಆಗುಮಾಡುವ ಶಕ್ತಿ ಕಾವ್ಯಕ್ಕೆ ಇದೆ.
ಸಾಹಿತ್ಯ, ಅದರಲ್ಲೂ ಕಾವ್ಯ ಹುಟ್ಟುವುದು ಹೇಗೆ, ಎಲ್ಲಿ ಮತ್ತು ಯಾವ ಸಂದರ್ಭಗಳಲ್ಲಿ ಎಂದು ಹೇಳುವುದು ಕಷ್ಟವಾದರೂ, ವ್ಯಕ್ತಿಯು ತನ್ನ ನಿತ್ಯ ಬದುಕಿನಲ್ಲಿ ಎಡತಾಕುತ್ತಲೇ ಇರುವ ಸಾಮಾಜಿಕ-ಸಾಂಸ್ಕೃತಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಇರುವಾಗ, ತನ್ನೊಳಗಿನ ತಮುಲಗಳನ್ನು ಹೊರಹಾಕುವ ಒಂದು ಸಂವಹನ ಸಾಧನವಾಗಿ ಸಾಹಿತ್ಯ ಹೊರಹೊಮ್ಮುವುದನ್ನು ಸುಲಭವಾಗಿ ಗುರುತಿಸಬಹುದು. ಆಲ್ಬರ್ಟ್ ಕಾಮು ಅವರ ಪ್ಲೇಗ್ ಕಾದಂಬರಿ ಇದಕ್ಕೊಂದು ಚಾರಿತ್ರಿಕ ನಿದರ್ಶನ. ಸಮಾಜದ ಒಳಸೂಕ್ಷ್ಮಗಳನ್ನು ಸದಾ ಗಮನಿಸುತ್ತಲೇ ತನ್ನ ವ್ಯಕ್ತಿಗತ ಬದುಕನ್ನು ರೂಪಿಸಿಕೊಳ್ಳುವ ಮನಸ್ಥಿತಿ ಇರುವ ಯಾವುದೇ ವ್ಯಕ್ತಿಯಲ್ಲಿ ಸಾಮಾಜಿಕ ತುಡಿತ ಸಹಜವಾಗಿಯೇ ಇರುತ್ತದೆ. ನೊಂದವರಿಗಾಗಿ ಮಿಡಿಯುವ ಈ ಮನಸ್ಥಿತಿಯು ಧ್ಯಾನಸ್ಥ ಸ್ಥಿತಿಯನ್ನು ತಲುಪಿದ ಕ್ಷಣದಲ್ಲಿ ಆತನ ಅಥವಾ ಆಕೆಯ ಮನದಲ್ಲಿ ಮೂಡುವ ಆಲೋಚನೆಗಳು ಸೃಜನಶೀಲ ಅಭಿವ್ಯಕ್ತಿಯನ್ನು ಪಡೆದುಕೊಳ್ಳುತ್ತವೆ. ಅದನ್ನೇ ರಂಗರೂಪಕ್ಕೆ, ಕಾವ್ಯರೂಪಕ್ಕೆ ಅಥವಾ ಗದ್ಯರೂಪಕ್ಕೆ ಇಳಿಸುವ ಪ್ರಯತ್ನವನ್ನು ಮಾನವ ಸಮಾಜ ಮಾಡುತ್ತಲೇ ಬಂದಿದೆ.
ಈ ಸಾಹಿತ್ಯಕ ಪಥದಲ್ಲಿ ಮೂಡುವ ಕಾವ್ಯ ಎಂಬ ಒಂದು ಪ್ರಕಾರ ಹಲವು ವೈಶಿಷ್ಟ್ಯಗಳಿಂದ ಕೂಡಿರುತ್ತದೆ. ಕಾದಂಬರಿಗೆ ಬೇಕಾದ ಕೇಂದ್ರ ವಸ್ತು, ರಂಗಪ್ರಯೋಗಕ್ಕೆ ಬೇಕಾದ ಸಾಮಾಜಿಕ ಸನ್ನಿವೇಶಗಳನ್ನು ಅಪೇಕ್ಷಿಸದೆಯೇ ಸೃಜನಶೀಲ ವ್ಯಕ್ತಿಯ ಮನಸ್ಸಿನಲ್ಲಿ ಸೃಷ್ಟಿಸುವ ಅಂತರ್ ಪ್ರಜ್ಞೆ ಹಲವಾರು ಸಂದರ್ಭಗಳಲ್ಲಿ ಕಾವ್ಯರೂಪ ಪಡೆದುಕೊಳ್ಳುತ್ತದೆ. ಹಾಗಾಗಿಯೇ ಅವಸರದ ಸಾಹಿತ್ಯ ಕಾವ್ಯ ಎನಿಸಿಕೊಳ್ಳಲಾಗುವುದಿಲ್ಲ. ನಮ್ಮ ಸುತ್ತಲಿನ ಸನ್ನಿವೇಶಗಳು ನಮಗೆ ಒಂದು ಹೊಳಹು ಮಾತ್ರ ನೀಡುತ್ತದೆ. ಅದರ ಸುತ್ತಲೂ ಗಿರಕಿ ಹೊಡೆಯುವ ಆಲೋಚನೆಗಳು ಇಡೀ ಸಮಾಜದ ಒಳಸೂಕ್ಷ್ಮಗಳನ್ನು ಭೇದಿಸಿ, ಅಲ್ಲಿ ಕಾಣುವ ನೋವು ತಲ್ಲಣಗಳಿಗೆ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ-ರಾಜಕೀಯ ಕಾರ್ಯಕಾರಣಗಳನ್ನು ಶೋಧಿಸುತ್ತಾ ಹೋದಾಗ ಅಲ್ಲಿ ಕಾದಂಬರಿ ವಸ್ತು ಸಿಗುತ್ತದೆ. ಆದರೆ ಸಮಾಜವು ವ್ಯಕ್ತಿಯೊಳಗೆ ಸೃಷ್ಟಿಸುವಂತಹ ಒಂದು ಸೂಕ್ಷ್ಮ ಹೊಳಹು, ಆ ಸನ್ನಿವೇಶದ ಒಳಹೊರಗನ್ನು ಭೇದಿಸಿ ನೋಡುವ ಪ್ರಚೋದನೆ ನೀಡಿದಾಗ, ಅಲ್ಲಿ ಕಾವ್ಯ ಸೃಷ್ಟಿಯಾಗುತ್ತದೆ. ಹಾಗಾಗಿಯೇ ಕಾವ್ಯ ಎನ್ನುವುದು ಪ್ರತಿಮೆ, ಅಲಂಕಾರ, ಗೇಯತೆ, ರೂಪಕಗಳನ್ನೊಳಗೊಂಡ ಸಾಹಿತ್ಯಕ ಅಭಿವ್ಯಕ್ತಿಯಾಗುತ್ತದೆ.
ಇದೇ ಆಂತರ್ಯದ ಅಭಿವ್ಯಕ್ತಿಯನ್ನು ಗದ್ಯರೂಪದಲ್ಲೂ ವ್ಯಕ್ತಪಡಿಸಲು ಸಾಧ್ಯ. ಅಂತಹ ಅನೇಕ ಕಾದಂಬರಿಗಳನ್ನು ನಾವು ಕಂಡಿದ್ದೇವೆ. ಅಂಥವನ್ನು ಸಾಮಾನ್ಯವಾಗಿ ಕಾವ್ಯಾತ್ಮಕ ಎಂದೂ ಬಣ್ಣಿಸುವುದನ್ನು ಕಂಡಿದ್ದೇವೆ. ಸಮಾಜದ ಒಳಸೂಕ್ಷ್ಮಗಳನ್ನು ಅಥವಾ ಆಂತರಿಕ ಬೇನೆ-ಯಾತನೆಗಳನ್ನು ದಾಖಲಿಸುವ ಈ ಅಕ್ಷರಾಭಿವ್ಯಕ್ತಿಯ ಮೂಲ ಗುರಿ, ಬಾಹ್ಯ ಪ್ರಪಂಚದ ಅರಿವಿಗೆ ಬಾರದ ಸಾಮಾಜಿಕ ವಾಸ್ತವಿಕತೆಗಳನ್ನು ತೆರೆದಿಡುವುದೇ ಆಗಿರುತ್ತದೆ. ಒಂದು ಉದಾಹರಣೆಯಾಗಿ ʼ ಹಂಗರ್ ʼ ಕಾದಂಬರಿಯನ್ನು ಉಲ್ಲೇಖಿಸಬಹುದು. ನಾರ್ವೆಯ Knut Humsun ಎಂಬ ಕಾದಂಬರಿಕಾರ 1859-1952 ಬ್ರೆಜಿಲ್ ದೇಶದ ತಳಸಮುದಾಯಗಳನ್ನು ಕಾಡಿದ ಹಸಿವು ಮತ್ತು ಬಡತನವನ್ನು ಪತ್ರಕರ್ತನ ಬದುಕಿನ ಮೂಲಕ ಚಿತ್ರಿಸುವ ಕಾದಂಬರಿ Hunger ಬರೆದಿದ್ದ. ಇದಕ್ಕೆ 1922ರ ನೊಬೆಲ್ ಪ್ರಶಸ್ತಿ ಬಂದಿತ್ತು. ಇದರಲ್ಲಿ ಒಂದು ಸನ್ನಿವೇಶದಲ್ಲಿ ಕಾದಂಬರಿಕಾರನು ಹಸಿವಿನ ಪರಾಕಾಷ್ಠೆಯನ್ನು ತಾನು ಕಂಡಂತೆ ಮತ್ತು ಅನುಭವಿಸಿದಂತೆ ಬರೆಯುತ್ತಾ ಹೋಗುತ್ತಾನೆ. ಒಂದೆಡೆ ಹಸಿವಿನಿಂದ ಬಳಲಿದ ವ್ಯಕ್ತಿಯೊಬ್ಬ ನೆಲಕ್ಕೆ ಬಿದ್ದಿದ್ದ ದೇಹದ ಸ್ತನದ ಭಾಗವನ್ನು ಕತ್ತರಿಸಿಕೊಂಡು ತಿನ್ನುವ ದೃಶ್ಯ ಬರುತ್ತದೆ. ನಮ್ಮ ಮರಾಠಿಯ ಉಚಲ್ಯಾ ನೆನಪಿಸುತ್ತದೆ. ಕಾದಂಬರಿಕಾರರು ತಮ್ಮ ಕೃತಿಯು ಉದ್ದೇಶಿಸುವ ಕಾಲಘಟ್ಟದ ಸಾಮಾಜಿಕ-ಸಾಂಸ್ಕೃತಿಕ ವಾಸ್ತವಗಳನ್ನು ಬಳಸಿಕೊಳ್ಳುತ್ತಾರೆ. ಇಂತಹ ಜೀವನಾನುಭವಗಳನ್ನು ಅನುಭವ ಮತ್ತು ಅನುಭಾವದ ನೆಲೆಗಳಲ್ಲಿ ಹಿಡಿದಿರುವ ಸಾಹಿತ್ಯಕ ಅಭಿವ್ಯಕ್ತಿಗೆ ಕಾವ್ಯ ರೂಪ ಕೊಡುವಾಗ, ಕವಿ ಉಪಮೆ, ಪ್ರತಿಮೆ, ಅಲಂಕಾರ, ರೂಪಕಗಳನ್ನು ಬಳಸಿಕೊಳ್ಳುತ್ತಾನೆ.
ಕವಿ ಮದ್ದೂರು ದೊರೆಸ್ವಾಮಿ ಅವರ ʼ ಹಂಬಲದ ಹಣತೆ ʼ ಇಂತಹುದೇ ಸಾಮಾಜಿಕ ಸನ್ನಿವೇಶಗಳ ನಡುವೆ ಹುಟ್ಟಿರುವ ಸೃಜನಶೀಲ ಕೃತಿ. ಡಿಜಿಟಲ್ ಯುಗದಲ್ಲಿ ನಿಂತು ಕಾವ್ಯ ರಚಿಸಲು ಬೇಕಾದ ಬೌದ್ಧಿಕ ಪರಿಕರಗಳೆಂದರೆ ಚರಿತ್ರೆಯತ್ತ ಇಣುಕಿ ನೋಡುವ, ವರ್ತಮಾನವನ್ನು ಸೂಕ್ಷ್ಮದರ್ಶಕದಂತೆ ಗಮನಿಸುವ ಮತ್ತು ಭವಿಷ್ಯವನ್ನು ಕಟ್ಟುವ ಒಂದು ಮನಸ್ಥಿತಿ. ವ್ಯಕ್ತಿಯ ಜೀವನಾನುಭವವನ್ನೇ ಕಾವ್ಯವಾಗಿಸಲು ಯತ್ನಿಸುವಾಗ ಕೆಲವೊಮ್ಮೆ ಅದು ಗದ್ಯರೂಪ ಪಡೆದುಕೊಳ್ಳುವುದು ಸಹಜ. ಆದರೆ ವ್ಯಷ್ಟಿ ಬದುಕನ್ನು ಸಮಷ್ಟಿಯೊಂದಿಗೆ ಸಮೀಕರಿಸಿ ನೋಡುವ ಕವಿಯ ಕಾಣ್ಕೆ ಅಕ್ಷರಗಳಿಗೆ ಕಾವ್ಯಸ್ಪರ್ಶ ನೀಡುತ್ತದೆ. ಈ ಕಾಣ್ಕೆಯನ್ನು ಮುಂಗಾಣ್ಕೆಯೊಂದಿಗೆ ಅಭಿವ್ಯಕ್ತಿಸುವ ಕಲೆ ಕವಿಯಲ್ಲಿ ಇರಬೇಕಾಗುತ್ತದೆ. ಸಾಮಾಜಿಕ-ಲಿಂಗ ಸೂಕ್ಷ್ಮತೆಯೊಂದೇ ಅಲ್ಲದೆ ಮನುಜ ಸಂಬಂಧಗಳನ್ನು ಸಮಷ್ಟಿ ನೆಲೆಯಲ್ಲಿ ನಿರ್ವಚಿಸುವ ಹಾಗೂ ಈ ಸಂಬಂಧಗಳ ನಡುವೆ ಇರುವ ತಾಕಲಾಟಗಳನ್ನು ಅನುಭಾವದ ನೆಲೆಯಲ್ಲಾದರೂ ಗುರುತಿಸುವ ಸೃಜನಶೀಲತೆ ಕವಿಯಲ್ಲಿರಬೇಕು.
ಮದ್ದೂರು ದೊರೆಸ್ವಾಮಿ ಅವರ ಕೆಲವು ರಚನೆಗಳಲ್ಲಿ ಇದು ಕಂಡುಬರುತ್ತದೆ. ಸೃಜನಶೀಲ ಅಭಿವ್ಯಕ್ತಿಯಾಗಿ ಒಬ್ಬ ವ್ಯಕ್ತಿಗೆ ತನ್ನ ವೈಯುಕ್ತಿಕ ಬದುಕು-ಪರಿಸರ ಮತ್ತು ಬಾಹ್ಯ ಸಮಾಜ-ಸಂಸ್ಕೃತಿ ನೀಡುವ ಸೂಕ್ಷ್ಮ ಹೊಳಹುಗಳನ್ನು ಗಮನಿಸುವಾಗ ಅಲ್ಲಿ ಮನುಜ ಸಂವೇದನೆ ಮತ್ತು ಅಂತರ್ಗತ ಪ್ರಜ್ಞೆ ಪುಟಿದೇಳುತ್ತದೆ. ಈ ಪ್ರಜ್ಞೆಯ ಮೂಸೆಯಲ್ಲಿ ಸೃಷ್ಟಿಯಾಗುವ ಚಿಂತನೆಗಳು ಸಾಹಿತ್ಯಕ ರೂಪ ಪಡೆದುಕೊಂಡಾಗ ಕತೆ, ಕಾದಂಬರಿ, ಕಾವ್ಯ, ನಾಟಕಗಳಾಗಿ ಹೊರಹೊಮ್ಮುತ್ತವೆ. ಇದರಲ್ಲಿ ಕಾವ್ಯ ರಚನೆ ಸಂಕೀರ್ಣವೂ ಕ್ಲಿಷ್ಟವೂ ಆದ ಒಂದು ಕುಸುರಿ ಕಲೆ. ಏಕೆಂದರೆ ಕಾವ್ಯದಲ್ಲಿ ಪ್ರತಿಮೆ, ರೂಪಕಗಳ ಮೂಲಕ ಕವಿಯ ಮೂಲ ಆಲೋಚನೆಗಳನ್ನು ಸುಪ್ತವಾಗಿಸಲಾಗುತ್ತದೆ. ಇಲ್ಲಿ ಅನುಭವ ಮತ್ತು ಅನುಭಾವ ಭಿನ್ನ ನೆಲೆಗಳಲ್ಲಿ ಅಕ್ಷರ ರೂಪ ಪಡೆದುಕೊಳ್ಳುತ್ತವೆ. ಉದಾಹರಣೆಗೆ ಹಸಿವು ಅಥವಾ ಬಡತನದ ಸುತ್ತ ಮೂಡುವ ಕವಿ ಪ್ರಜ್ಞೆಗೆ ಅದರ ಸ್ವಾನುಭವ ನೀಡುವ ಅಭಿವ್ಯಕ್ತಿಗಳೇ ಬೇರೆ, ಭೌತಿಕವಾಗಿ ಬಾಹ್ಯಾನುಭವ ನೀಡುವ ಆಲೋಚನೆಗಳೇ ಬೇರೆ.
ಈ ವ್ಯತ್ಯಾಸವನ್ನು ಕವಿಯ ಮನಸ್ಸು ಗ್ರಹಿಸಬೇಕು. ಸ್ವಾನುಭವವು ಕವಿತೆಯ ರೂಪ ಪಡೆದುಕೊಂಡಾಗ ಅಲ್ಲಿ ಗಾಢವಾದ ಅಂತರಾಳದ ಧ್ವನಿಯನ್ನು ಗುರುತಿಸಬಹುದು. ದ ರಾ ಬೇಂದ್ರೆ ಅವರ ʼ ನೀ ಹೀಂಗ ನೋಡಬೇಡ ನನ್ನ ʼ ಪದ್ಯವನ್ನು ಇಲ್ಲಿ ಉಲ್ಲೇಖಿಸಬಹುದು. ಅಲ್ಲಿ ಕವಿ ಬೇಂದ್ರೆ ಪುತ್ರಶೋಕದಿಂದ ಜರ್ಝರಿತಳಾದ ತನ್ನ ಪತ್ನಿಯ ಕಣ್ಣೋಟವನ್ನು ಬಣ್ಣಿಸುವ ಪರಿ ಹೀಗಿದೆ.
“ ಇಬ್ಬನಿ ತೊಳೆದರು ಹಾಲು ಮೆತ್ತಿದಾ ಕವಳ ಕಂಟಿಯ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತಾ ಹಗಲ ”
ಇಲ್ಲಿ ಕವಿ ಬೇಂದ್ರೆಗೆ ಮಗನನ್ನು ಕಳೆದುಕೊಂಡ ತಾಯಿಯ ತೇವದ ಕಣ್ಣುಗಳು ಹೀಗೆ ಕಾಣುತ್ತವೆ. ಇದು ಅನುಭವಾತ್ಮಕ ಕವಿತೆಯಾದರೂ ಇಲ್ಲಿ ಪ್ರತಿಮೆ, ರೂಪಕಗಳ ಭಂಡಾರವೇ ಇದೆ. ಇದೇ ಕವಿಯ ʼ ಮೂಡಲ ಮನೆಯ ʼ ಕವಿತೆಯಲ್ಲಿ ಕವಿ ಬೇಂದ್ರೆಗೆ “ ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳ ಹಾಡು ” ಕೇಳಿಸುತ್ತದೆ. ಇದು ಕವಿ ಪ್ರಜ್ಞೆ ಎನ್ನುವುದು ಅನುಭಾವದ ನೆಲೆಯಲ್ಲಿ ತನ್ನನ್ನು ತಾನೇ ವಿಸ್ತರಿಸಿಕೊಳ್ಳುವ ಒಂದು ಸೃಜನಶೀಲ ಬಗೆ.
ಕವಿಯಾಗುವ ಹಂಬಲ ಇಂತಹ ಶ್ರೇಷ್ಠ ಕವಿತೆಗಳನ್ನು ಓದುವಂತೆ ಪ್ರೇರೇಪಿಸಬೇಕು. ಬರೆದುದೆಲ್ಲವೂ ಕವಿತೆಯಾಗಲಾರದು ಎನ್ನುವ ಒಂದು ಮಾತಿದೆ. ವರ್ತಮಾನದ ಸನ್ನಿವೇಶವನ್ನು ನೋಡಿದಾಗ ಇದು ಮತ್ತಷ್ಟು ಜಿಜ್ಞಾಸೆ ಹುಟ್ಟಿಸುವ ಮಾತು ಎನಿಸುತ್ತದೆ. ಏಕೆಂದರೆ ಡಿಜಿಟಲ್ ಯುಗದಲ್ಲಿ ʼ ಅವಸರದ ಸಾಹಿತ್ಯ ʼವೂ ಸಹ ಕವಿತೆ ಎನಿಸಿಕೊಳ್ಳಬಹುದು. ಇಂದು ಕೃತಕ ಬುದ್ಧಿಮತ್ತೆ – Artificial Intelligencȩ ನಮಗೆ ಒಂದು ಕವಿತೆ ಬರೆದುಕೊಡುವ ಅಪಾಯವನ್ನು ಎದುರಿಸುತ್ತಿದ್ದೇವೆ. ಘೌತಿಕ ಜಗತ್ತಿನಲ್ಲಿ ಕವನ ಸ್ಪರ್ಧೆಗಳನ್ನು ಗಮನಿಸಿದಾಗ ಇದು ಮತ್ತಷ್ಟು ಸ್ಪಷ್ಟವಾಗುತ್ತದೆ. , ಇಷ್ಟು ದಿನಗಳೊಳಗಾಗಿ ಅಥವಾ ಇಂತಹ ವಿಷಯ/ವ್ಯಕ್ತಿಯನ್ನು ಕುರಿತು ಅಥವಾ ಇಷ್ಟು ಸಾಲುಗಳಲ್ಲಿ ಕವಿತೆ ಬರೆಯಲು ಕೋರಲಾಗುತ್ತದೆ. ಅಂದರೆ ರೇಸ್ನಲ್ಲಿ ಬರುವ ಕವಿತೆಗಳಿಗೆ ಗೋಲ್ ಪೋಸ್ಟ್ ಒಂದನ್ನು ನಿಗದಿಪಡಿಸಲಾಗುತ್ತದೆ. ಅಲ್ಲಿ ಸೃಜನಶೀಲತೆಗೆ ಪೆಟ್ಟು ಬೀಳುತ್ತದೆ. ವ್ಯಕ್ತಿ ಕೇಂದ್ರಿತ ಕವಿತೆಗಳು ಅಂತಿಮವಾಗಿ ಸ್ತುತಿ ಗೀತೆಗಳಾಗಿಬಿಡುತ್ತವೆ. ವರ್ತಮಾನದ ಘಟನೆಗಳು ಕಾವ್ಯವಸ್ತುವಾದಾಗ ಅದು ಹೇಳಿಕೆಗಳ ಆಡುಂಬೊಲವಾಗಿಬಿಡುತ್ತದೆ. ಹಾಗಾಗಿಯೇ ಇಂದು ಗಪದ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಡಿಜಿಟಲ್ ಯುಗದಲ್ಲಿ ಕವಿಯಾಗಬಯಸುವವರು ಈ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಕವಿಯಾಗುವ ಹಂಬಲ ಸಹಜವೇ ಆದರೂ ʼ ಕವಿ ಎನಿಸಿಕೊಳ್ಳುವ ʼ ಹಂಬಲ ಕಾವ್ಯಪ್ರಜ್ಞೆಯನ್ನು ಸಂಕುಚಿತಗೊಳಿಸಿಬಿಡುತ್ತದೆ. ದಸರಾ, ದೀಪಾವಳಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ನಡೆಯುವ ಕವಿಗೋಷ್ಟಿಗಳ ಆಯ್ಕೆಯ ಮಾನದಂಡಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಅರ್ಥವಾಗುತ್ತದೆ. ಟೊಳ್ಳು-ಗಟ್ಟಿಯನ್ನು ಬೇರ್ಪಡಿಸಲಾಗದ ಒಂದು ಸನ್ನಿವೇಶವನ್ನು ಅಲ್ಲಿ ಕಾಣುತ್ತೇವೆ. ಕವಿಯಾಗುವ ಹಂಬಲ ಹೊತ್ತ ಸೃಜನಶೀಲ ಮನಸ್ಸು ಇದರಿಂದ ದೂರ ಇರಬೇಕಾಗುತ್ತದೆ. ಜಿ. ಎಸ್. ಶಿವರುದ್ರಪ್ಪ ಅವರ “ ಹಾಡು ಹಕ್ಕಿಗೆ ಬೇಕೇ ಬಿರುದು ಸಮ್ಮಾನ ” ಎಂಬ ಮಾರ್ಮಿಕ ಸಾಲುಗಳು ಇದನ್ನೇ ಧ್ವನಿಸುತ್ತವೆ ಅಲ್ಲವೇ ? ಕವಿಯ ಕಾವ್ಯಪ್ರಜ್ಞೆ ಒಂದು ರೀತಿಯಲ್ಲಿ ಸ್ವಯಂ ಬಂಧನಕ್ಕೊಳಪಡಿಸುವ ಆಂತರಿಕ ಅಭಿವ್ಯಕ್ತಿಯಾಗಿಯೇ ಇರುತ್ತದೆ.
ಇದನ್ನುಅಕ್ಷರ ರೂಪಕ್ಕಿಳಿಸುವಾಗ ಆ ಸುಪ್ತ ಕಾವ್ಯ ಪ್ರಜ್ಞೆ ವಿಶಾಲ ಸಮಾಜಕ್ಕೆ ತೆರೆದುಕೊಳ್ಳುತ್ತದೆ. ಒಬ್ಬ ಕಲೆಗಾರನ ಕುಂಚದಂತೆ ಈ ಪ್ರಜ್ಞೆಯೂ ಸಹ ಹಾಳೆಗಳ ಮೇಲೆ ಅಕ್ಷರ ರೂಪ ಪಡೆಯುತ್ತಾ ಹೋಗುತ್ತದೆ. ಈ ಹಂತದಲ್ಲಿ ಕವಿ ತನ್ನ ಸಾಮಾಜಿಕ-ಸಾಂಸ್ಕೃತಿಕ ಅರಿವು ಮತ್ತು ಪ್ರಜ್ಞೆ ಎರಡನ್ನೂ ಜಾಗೃತಾವಸ್ಥೆಯಲ್ಲಿರಿಸಬೇಕು. ಹಾಗೆಯೇ ಮನುಜ ಸೂಕ್ಷ್ಮತೆಯಿಂದ ಹೊರತಾದ ಪಾರಂಪರಿಕ ಚಿಂತನೆಗಳ ಬಗ್ಗೆಯೂ ಎಚ್ಚರವಹಿಸಬೇಕು. ಆಗ ತನ್ನ ಹಸಿವಿನಲ್ಲಿ ತಳಸಮಾಜದ ಹಸಿವನ್ನೂ, ತನ್ನ ನೋವಿನಲ್ಲಿ ದಮನಿತರ ನೋವನ್ನೂ ಕಾಣಲು ಸಾಧ್ಯ. ಹಸಿವು ಮತ್ತು ಶೋಷಣೆ ಎರಡನ್ನೂ ಅನುಭವಿಸಿರುವ ವ್ಯಕ್ತಿಯಲ್ಲಿ ಈ ಎರಡೂ ಸಹ ಕಾವ್ಯ ಸ್ಪರ್ಶದೊಂದಿಗೆ ಮೂಡಿಬರುತ್ತದೆ. ಲ್ಯಾಟಿನ್ ಅಮೆರಿಕದ ಘೆಟ್ಟೋ ಹಾಡುಗಳನ್ನು ಇಲ್ಲಿ ನಿದರ್ಶನವಾಗಿ ನೋಡಬಹುದು. (ಮೈಕೆಲ್ ಜಾಕ್ಸನ್ ಈ ಕವಿತೆಗಳನ್ನು ಹಾಡಾಗಿಸಿದ್ದರಿಂದಲೇ ಅಷ್ಟು ಜನಪ್ರಿಯತೆ ಗಳಿಸಲು ಸಾಧ್ಯವಾಗಿದ್ದು.)
ಜಾಗತೀಕರಣದ ಡಿಜಿಟಲ್ ಯುಗದಲ್ಲಿ ಭಾರತೀಯ ಸಮಾಜದ ನಡುವೆ ನಿಂತು ಕಾವ್ಯ ರಚಿಸುವ ಸೃಜನಶೀಲ ಮನಸ್ಸಿಗೆ ಇಂದಿಗೂ ಕಾಡುತ್ತಿರುವ ಪುರುಷಾಧಿಪತ್ಯ, ಅಸ್ಪೃಶ್ಯತೆ, ಜಾತಿ ದೌರ್ಜನ್ಯ, ಹಸಿವು ಮತ್ತು ಅದು ಈಡುಮಾಡುವ ಅವಮಾನ, ಮಹಿಳಾ ದೌರ್ಜನ್ಯ ಇವೆಲ್ಲವೂ ಕಾಡುತ್ತಲೇ ಇದ್ದಾಗ ಕವಿ ಮನಸ್ಸು ಸಮಾಜದ ಒಳಹೊಕ್ಕಿ ನೋಡುವ ಮೂಲಕ ಅಲ್ಲಿರಬಹುದಾದ ಸೂಕ್ಷ್ಮಾತಿಸೂಕ್ಷ್ಮ ಸಂವೇದನೆಯ ತಂತುಗಳನ್ನು ತನ್ನೊಳಗೆ ಇಳಿಸಿಕೊಳ್ಳುತ್ತಾನೆ. ವಿಶ್ವದ ಶೇಕಡಾ 1ರಷ್ಟು ಅತಿ ಶ್ರೀಮಂತರು ಜಗತ್ತಿನ ಅರ್ಧದಷ್ಟು ಸಂಪತ್ತಿನ ಒಡೆಯರಾಗಿದ್ದಾರೆ. ಅತ್ಯಾಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅವಿಷ್ಕಾರಗಳ ನಡುವೆಯೇ ಸಾಮಾಜಿಕ ಬಹಿಷ್ಕಾರ, ಅಸ್ಪೃಶ್ಯತೆ, ಅತ್ಯಾಚಾರ, ಹಸಿವೆಯನ್ನು ನೋಡುತ್ತಿದ್ದೇವೆ. ಈ ಅಪಾಯಗಳ ನಡುವೆಯೇ ನಮ್ಮ ಕಾವ್ಯ ರಚನೆಗಳು ಹೆಚ್ಚು ಹೆಚ್ಚು ಸಮಾಜಮುಖಿಯಾಗುತ್ತಾ ಜನಮಾನಸದ ನಡುವೆ ನೆಲೆ ಕಂಡುಕೊಳ್ಳಬೇಕಾಗುತ್ತದೆ.
ಕೋವಿದ್ ಸಂದರ್ಭದಲ್ಲಿ ಸಾವಿರಾರು ಕಿಲೋಮೀಟರ್ ಪಯಣಿಸಿ ಅಸುನೀಗಿದ ನೂರಾರು ವಲಸೆ ಕಾರ್ಮಿಕರಾಗಲೀ, ಶತಮಾನಕ್ಕೂ ಹೆಚ್ಚಿನ ಶೋಷಣೆಯ ಬದುಕು ಸವೆಸಿರುವ ಚಿನ್ನದ ಗಣಿ ಕಾರ್ಮಿಕರಾಗಲೀ, ಇಂದಿಗೂ ಅಸ್ಪೃಶ್ಯತೆಯಿಂದ ನಲುಗುತ್ತಿರುವ ತಳಸಮುದಾಯಗಳ ಬದುಕಾಗಲೀ 21ನೆಯ ಶತಮಾನದ ಕಾವ್ಯದ ವಸ್ತುಗಳಾಗುತ್ತಿಲ್ಲ. ಆದರೆ ಈ ಶೋಷಣೆಯ ವಿರುದ್ಧ ಹೋರಾಡಿದ ಚಾರಿತ್ರಿಕ ವ್ಯಕ್ತಿಗಳು ಕಾವ್ಯ ಸರಕುಗಳಾಗುತ್ತಿದ್ದಾರೆ. ಇದು ಗಂಭೀರ ವಿಷಯವೊಂದರ Romanticisation ಗೆ ಎಡೆಮಾಡಿಕೊಡುತ್ತದೆ. ಭವಿಷ್ಯದ ತಲೆಮಾರಿಗೆ ವರ್ತಮಾನದ ದುರಂತಗಳನ್ನು ಮುಟ್ಟಿಸುವ ಹಾದಿಯಲ್ಲಿ ನಾವು ಎಡವುತ್ತೇವೆ. ಕವಿಯಾಗುವ ನಮ್ಮ ಹಂಬಲ ನಮ್ಮನ್ನು ಈ ಹಾದಿಯಲ್ಲಿ ಕೈ ಹಿಡಿದು ನಡೆಸುವಂತಾಗಬೇಕು.
ಕವಿ ಮದ್ದೂರು ದೊರೆಸ್ವಾಮಿ ಅವರ ಸಂಕಲನದಲ್ಲಿ ಈ ಕಾವ್ಯ ಸೂಕ್ಷ್ಮತೆಯ ಸುಳಿವು ಖಂಡಿತವಾಗಿಯೂ ಕಾಣುತ್ತದೆ. ಅವರ ಹಂಬಲದ ಹಣತೆ, ಮುಂದಿನ ದಿನಗಳ ಕಾವ್ಯ ಪಯಣದಲ್ಲಿ ಹಣತೆಯಾಗುವ ಹಂಬಲವಾಗಿ ಮಾರ್ಪಟ್ಟರೆ ಇನ್ನೂ ಉತ್ತಮ ಕವಿತೆಗಳನ್ನು ಬರೆಯುವ ಕ್ಷಮತೆ ಅವರಲ್ಲಿ ಕಾಣುತ್ತದೆ. ಕವಿ ಮದ್ದೂರು ದೊರೆಸ್ವಾಮಿ ಅವರಲ್ಲಿ ಸುಪ್ತ ಕಾವ್ಯಪ್ರಜ್ಞೆ ಇದೆ. ಅದು ಅನುಭವಾತ್ಮಕ ಹಾಗೂ ಅನುಭಾವಿಕ ನೆಲೆಗಳಲ್ಲಿ ಕಾವ್ಯಸ್ಪರ್ಶದೊಂದಿಗೆ ಹೊರಬಂದು, ಸಮಾಜದ ಒಳಸುಳಿಗಳ ನಡುವೆ ಸಂಚರಿಸಿದಾಗ ಅವರಿಂದ ಇನ್ನೂ ಉತ್ಕೃಷ್ಟ ಕಾವ್ಯವನ್ನು ನಿರೀಕ್ಷಿಸಬಹುದು. ಆ ಕ್ಷಮತೆ ಅವರಲ್ಲಿದೆ. ಅದಕ್ಕಾಗಿ ದೊರೆಸ್ವಾಮಿ ಅಭಿನಂದನಾರ್ಹರು.
-೦-೦-೦-೦-