ಬೆಂಗಳೂರು: ಕ್ರೀಡಾ ಮನೋಭಾವ ರೂಡಿಸಿಕೊಂಡರೆ ಮನುಷ್ಯ ಸೃಷ್ಟಿಯ ಮೇಲು-ಕೀಳಿನ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ತೃತೀಯ ಮಿನಿ ಒಲಂಪಿಕ್ಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗೆ ಜಾತಿ, ಧರ್ಮದ ಗಡಿ ಮತ್ತು ಮಿತಿಗಳಿಲ್ಲ. ಕ್ರೀಡಾಪಟು ಎಲ್ಲಾ ತಾರತಮ್ಯಗಳನ್ನು ಮೀರಿರುತ್ತಾನೆ ಎಂದರು. ಕ್ರೀಡೆಗಳಲ್ಲಿ, ಒಲಂಪಿಕ್ಸ್ ನಲ್ಲಿ ಭಾಗವಹಿಸುವುದೇ ಪ್ರಶಸ್ತಿ. ಹೀಗಾಗಿ ಒಲಂಪಿಕ್ ನಲ್ಲಿ ಪ್ರಶಸ್ತಿ ಪಡೆಯುವುದೇ ಮುಖ್ಯ ಅಲ್ಲ. ಸಕ್ರಿಯ ಭಾಗವಹಿಸುವಿಕೆ ಅತ್ಯಂತ ಮುಖ್ಯ.
ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪಂದ್ಯಾವಳಿಗಳು ಆಯೋಜನೆಗೊಳ್ಳುತ್ತವೆ. ಕ್ರೀಡಾಪಟು ಆಗುವವರಿಗೆ ಪರಿಶ್ರಮ ಮತ್ತು ಉತ್ತಮ ತರಬೇತಿ ಅಗತ್ಯ. ಸರ್ಕಾರ ಮತ್ತು ಕ್ರೀಡಾ ಸಂಸ್ಥೆಗಳು ಅವಕಾಶಗಳನ್ನು ಕಲ್ಪಿಸಬೇಕು. ಶಿಕ್ಷಣ ಮತ್ತು ಕ್ರೀಡೆ ಮಾನಸಿಕ ಮತ್ತು ದೈಹಿಕ ವಿಕಾಸಕ್ಕೆ ಅತ್ಯಂತ ಅಗತ್ಯ. ಶಿಸ್ತು ಇಲ್ಲದ ಕ್ರೀಡಾಪಟುವನ್ನು ಕಾಣಲು ಸಾಧ್ಯವಿಲ್ಲ. ಶಿಸ್ತು , ಪರಿಶ್ರಮ ಇಲ್ಲದವರು ಉತ್ತಮ ಕ್ರೀಡಾಪಟು ಆಗಲು ಸಾಧ್ಯವಿಲ್ಲ. ಕ್ರೀಡೆ ಜೊತೆಗೆ ಓದು, ಶಿಕ್ಷಣ ಕೂಡ ಅಷ್ಟೇ ಮುಖ್ಯ ಎಂದರು.
ಕ್ರೀಡೆಯಲ್ಲಿ ಸಾಧಿಸುವವರಿಗೆ ಹಲವು ಸವಲತ್ತು ಮತ್ತು ಬದುಕಿನ ಅವಕಾಶಗಳನ್ನು ಕಲ್ಪಿಸುತ್ತಿದೆ. ಒಲಂಪಿಕ್ ನಲ್ಲಿ ಚಿನ್ನ ಗೆಲ್ಲುವವರಿಗೆ 6 ಕೋಟಿ ರೂಪಾಯಿ, ಬೆಳ್ಳಿ ಪದಕ ವಿಜೇತರಿಗೆ 4 ಕೋಟಿ ರೂಪಾಯಿ ಕೊಡುತ್ತಿದ್ದೇವೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸುವವರಿಗೆ ಪೊಲೀಸ್ ಇಲಾಖೆಯಲ್ಲಿ ಶೇ3 ಮತ್ತು ಇತರೆ ಇಲಾಖೆಯಲ್ಲಿ ಶೇ 2 ರಷ್ಟು ಉದ್ಯೋಗ ಮೀಸಲಿಟ್ಟಿದ್ದೇವೆ ಎಂದರು.
ಗ್ರೇಸ್ ಅಂಕಗಳ ಬಗ್ಗೆ ಪರಿಶೀಲನೆ:
ಕ್ರೀಡೆಗೆ ಭಾಗವಹಿಸುವ ಮಕ್ಕಳ ಪ್ರೋತ್ಸಾಹಕ್ಕೆ ಕೃಪಾಂಕ ಕೊಡಬೇಕು ಎಂದು ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಗೋವಿಂದರಾಜು ಅವರು ಇಟ್ಟಿರುವ ಬೇಡಿಕೆ ಬಗ್ಗೆ ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.
ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಗೋವಿಂದರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ರಿಜ್ವಾನ್ ಅರ್ಷದ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಒಲಂಪಿಕ್ ಸಂಸ್ಥೆಯ ಮಹಾಕಾರ್ಯದರ್ಶಿ ಅಂಜು ಬಾಬಿ ಜಾರ್ಜ್, ಸಚಿವ ರಾಮಲಿಂಗಾರೆಡ್ಡಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.ಬೆಂಗಳೂರು ನ 14: ಕ್ರೀಡಾ ಮನೋಭಾವ ರೂಡಿಸಿಕೊಂಡರೆ ಮನುಷ್ಯ ಸೃಷ್ಟಿಯ ಮೇಲು-ಕೀಳಿನ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.