ಲೋಕಸಭಾ ಚುನಾವಣೆಯಲ್ಲಿ ತಮ್ಮ ಪತಿ ದೇವಾನಂದ ಪುಲ್ ಸಿಂಗ್ ಚೌಹ್ಹಾಣ್ ಅವರಿಗೆ ಪ್ರಹ್ಲಾದ್ ಜೋಷಿ ಪ್ರಭಾವ ಬಳಸಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರ ಸಹೋದರ ಗೋಪಾಲ ಜೋಷಿ ಮತ್ತು ಸಹೋದರಿ ವಿಜಯ್ ಲಕ್ಷ್ಮಿ ಜೋಷಿ ಹಾಗೂ ಗೋಪಾಲ್ ಜೋಷಿ ಮಗ ಅಜಯ್ ಜೋಷಿ ಭರವಸೆ ನೀಡಿ ಎರಡು ಕೋಟಿ ರೂಪಾಯಿ ಪಡೆದು ಟಿಕೆಟ್ ಕೊಡಿಸದೆ, ಹಣವನ್ನು ವಾಪಸ್ ನೀಡದೆ ಮೋಸ ಮಾಡಿದ್ದಾರೆ, ದುಡ್ಡು ವಾಪಾಸ್ ಕೇಳಿದಾಗ ಗೂಂಡಾಗಳಿಂದ ಬೆದರಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಲಂಬಾಣಿ ಸಮುದಾಯಕ್ಕೆ ಸೇರಿರುವ ದೇವಾನಂದ್ ಸಿಂಗ್ ಅವರು 2018ರಲ್ಲಿ ಬಿಜಾಪುರ ಜಿಲ್ಲೆಯ ನಾಗಠಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದಿದ್ದರು. 2023ರಲ್ಲಿ ಸೋತಿದ್ದರು.
ಸುನೀತಾ ಚೌಹ್ಹಾಣ್ ಅವರಿಂದ ಮೊದಲು 25 ಲಕ್ಷ ಪಡೆದಿದ್ದ ಗೋಪಾಲ್ ಜೋಷಿ “”ಆ ಹಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಹಾ ಅವರ ಸೆಕ್ರೆಟರಿಗೆ ನೀಡಿದ್ದು ನನ್ನ ತಮ್ಮ (ಪ್ರಹ್ಲಾದ್ ಜೋಷಿ)ನ ವರ್ಚಸ್ಸು ಚೆನ್ನಾಗಿದೆ, ಅವನ ಮಾತನ್ನು ನರೇಂದ್ರ ಮೋದಿ ಮತ್ತು ಅಮಿತ್ ಶಹಾ ಇಬ್ಬರೂ ಕೇಳುತ್ತಾರೆ, ಟಿಕೆಟ್ ಗ್ಯಾರಂಟಿ’’ ಎಂದು ಭರವಸೆ ನೀಡಿದ್ದರಂತೆಟಿಕೆಟ್ ಸಿಗದೆ ಇದ್ದಾಗ ದುಡ್ಡು ವಾಪಸ್ ಕೇಳಲು ಹೋದರೆ ‘’ ನನಗೆ 200 ಕೋಟಿ ರೂಪಾಯಿಗಳ ಪ್ರಾಜೆಕ್ಟ್ ಬಿಲ್ ಬರಲಿದೆ ಎಂದು ಸದ್ಯಕ್ಕೆ 1ಕೋಟಿ 75 ಲಕ್ಷ ಕೊಡಿ ನಂತರ ಎಲ್ಲ ಹಣ ವಾಪಸ್ ಕೊಡುತ್ತೇನೆ ಎಂದು ನನ್ನನ್ನು ನಂಬಿಸಿ ಒಟ್ಟು ಎರಡು ಕೋಟಿ ರೂಪಾಯಿ ಪಡೆದು ಗೋಪಾಲ್ ಜೋಷಿ ಅವರ ಮಗ ಅಜಯ್ ಸಿಂಗ್ ಹಾಗೂ ವಿಜಯ್ ಲಕ್ಷ್ಮೀ ಅವರು ವಂಚಿಸಿದ್ದಾರೆ.
ಅದರ ನಂತರ ದುಡ್ಡ ವಾಪಸ್ ಕೇಳಲು ಹೊರಟರೆ ವಿಜಯ್ ಲಕ್ಷ್ಮಿ ಮತ್ತು ಅಜಯ್ ಜೋಷಿ ಗೂಂಡಾಗಳಿಂದ ಹಲ್ಲೆ ಮಾಡಿಸಿದ್ದಲ್ಲದೆ ಜಾತಿ ನಿಂದನೆ ಕೂಡಾ ಮಾಡಿದ್ದಾರೆ ಎಂದು ಸುನೀತಾ ಚೌಹ್ಹಾಣ್ ದೂರಿನಲ್ಲಿ ತಿಳಿಸಿದ್ದಾರೆ.
ನೊಂದ ಮಹಿಳೆ ಸುನೀತಾ ಚೌಹ್ಹಾಣ್ ಅವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಹ್ಲಾದ್ ಜೋಷಿ ಸೋದರ ಗೋಪಾಲ ಜೋಷಿ, ಸೋದರಿ ವಿಜಯಲಕ್ಷ್ಮಿ ಮತ್ತು ಗೋಪಾಲ ಜೋಷಿ ಮಗ ಅಜಯ್ ಜೋಷಿ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ದಿನಾಂಕ 17-10-2024ರ ಸಂಜೆ ಐದು ಗಂಟೆಗೆ ಎಫ್ ಐಆರ್ ದಾಖಲಿಸಿದ್ದಾರೆ.