ನವದೆಹಲಿ: ಹರಿಯಾಣದ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ ಜುಲಾನಾ ಕ್ಷೇತ್ರವು ಒಂದು. ಕಾಂಗ್ರೆಸ್‌ನಿಂದ ಮಾಜಿ ಕುಸ್ತಿಪಟು ವಿನೇಶ್ ಪೋಗಟ್ ಅವರು ಕಣಕ್ಕಿಳಿಯುತ್ತಿದ್ದಂತೆ ಕ್ಷೇತ್ರದಲ್ಲಿ ಚುನಾವಣೆ ಕಾವು ಹೆಚ್ಚಾಗತೊಡಗಿತ್ತು.ಅಂದಿನಿಂದ ತೀವ್ರ ಪೈಪೋಟಿ ಕೊಟ್ಟಿದ್ದ ವಿನೇಶ್ ಪೋಗಟ್ ಅವರು ಇಂದು ಗೆಲುವಿನ ಹಾದಿ ಸಮೀಪಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿರುದ್ಧ ಮತದಾರರು ವಿನೇಶ್ ಪೋಗಟ್ ‘ಕೈ’ ಹಿಡಿದಿದ್ದಾರೆ.ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಪೋಗಟ್ ವಿರುದ್ಧ ನಿವೃತ್ತ ಪೈಲಟ್ ಕ್ಯಾಪ್ಟನ್ ಯೋಗೇಶ್ ಬೈರಾಗಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು. ಸದ್ಯ ಬಿಜೆಪಿ ಅಭ್ಯರ್ಥಿ ಹಿನ್ನೆಡೆ ಅನುಭವಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಅವರು ಲೈಂಗಿಕ ದೌರ್ಜನ್ಯ ವಿರುದ್ಧ ಇದೇ ವಿನೇಶ್ ಪೂಗಟ್ ಹಾಗೂ ಬಜರಂಗ್ ಪೋನಿಯಾ ಅವರು ಹೋರಾಟಕ್ಕಿಳಿದಿದ್ದರು. ಕೇಂದ್ರ ಬಿಜೆಪಿ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದರು. ಅಲ್ಲದೇ ಕೇಂದ್ರ ಬಿಜೆಪಿ ನಡೆಯನ್ನು ತೀವ್ರವಾಗಿ ಖಂಡಿಸಿದ್ದರು.
ಈ ಸಂದರ್ಭಕ್ಕಾಗಿಯೇ ಕಾಂಗ್ರೆಸ್ ಕಾಯುತ್ತಿತ್ತು ಎಂಬಂತೆ ಈ ಬಾರಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ವಿನೇಶ್ ಪೂಗಟ್ ಅವರಿಗೆ ಟಿಕೆಟ್ ನೀಡಿತು. ಇದಕ್ಕೆ ಮೊದಲು ಪ್ಯಾರಿಸ್ ಒಲಂಪಿಕ್ 2024 ಅಂತಿಮ ಸುತ್ತಿಗೆ ತೂಕದ ಕಾರಣದಿಂದ ಪೋಗಟ್ ಅನರ್ಹಗೊಂಡಿದ್ದರು. ಇದರ ಹಿಂದೆಯು ಬಿಜೆಪಿ ಕೈವಾಡ ಇದೆ ಎಂಬ ಮಾತು ಕೇಳಿ ಬಂದಿತ್ತು. ನಂತರ ಪೋಗಟ್ ಕ್ರೀಡಾ ಜೀವನಕ್ಕೆ ವಿದಾಯ ಹೇಳಿ ಕಾಂಗ್ರೆಸ್ ಸೇರಿದರು.