
ಬೆಂಗಳೂರು: ಸ್ವಾಭಿಮಾನ-ನಾಡಭಕ್ತಿ, ದೇಶಭಕ್ತಿಗೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ದಿಟ್ಟತನಕ್ಕೆ ಪ್ರೇರಣಾಶಕ್ತಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆ ವ್ಯಕ್ತಪಡಿಸಿ ಗುಣಗಾನ ಮಾಡಿದರು.

ವಿಧಾನಸೌಧ ಮುಂದಿನ ಮೆಟ್ಟಿಲುಗಳ ಬಳಿ ‘ಕಿತ್ತೂರು ವಿಜಯೋತ್ಸವದ ಜ್ಯೋತಿ’ ಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಿಂದ ಹೊರಟ ಜ್ಯೋತಿ ಎಲ್ಲಾ ಜಿಲ್ಲೆಗಳನ್ನು ಹಾದು ಕಿತ್ತೂರು ತಲುಪಲಿದೆ ಎಂದರು.

ಬ್ರಿಟಿಷರ ವಿರುದ್ಧ ನೇರ ಸವಾಲೊಡ್ಡಿದ ದಿಟ್ಟ ಮಹಿಳೆ. ಸಂಗೊಳ್ಳಿ ರಾಯಣ್ಣ ಕೂಡ ರಾಣಿ ಚನ್ನಮ್ಮ ಅವರ ಸೈನ್ಯದಲ್ಲಿದ್ದರು. ಬ್ರಿಟಿಷರಿಗೆ ತೆರಿಗೆ ಕೊಡಲು, ದತ್ತು ಮಕ್ಜಳಿಗೆ ಹಕ್ಕಿಲ್ಲವೆಂಬ ಕಾಯ್ದೆ ವಿರೋಧಿಸಿ ವಿರೋಚಿತವಾಗಿ ಹೋರಾಡಿದ ದೇಶಪ್ರೇಮಿಗಳು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬ್ರಿಟಿಷರ ವಿರುದ್ಧ ಮೊದಲ ಯುದ್ಧದಲ್ಲಿ ಕಿತ್ತೂರಿನ ರಾಣಿ ಚನ್ನಮ್ಮ ವಿಜಯ ಸಾಧಿಸಿ 200 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ವಿಜಯ ಜ್ಯೋತಿ ರಾಜ್ಯ ಸಂಚರಿಸಿ ಅ.23ರ ವೇಳೆಗೆ ಕಿತ್ತೂರು ತಲುಪಲಿದೆ. ಅ.23 ರಿಂದ 25ರವರೆಗೆ ಕಿತ್ತೂರು ಉತ್ಸವ ನಡೆಯಲಿದೆ ಎಂದು ತಿಳಿಸಿದರು.ನಾಡಪ್ರೇಮ, ದೇಶಪ್ರೇಮ, ಸ್ವಾಭಿಮಾನಕ್ಕೆ ಮತ್ತೊಂದು ಹೆಸರು ರಾಣಿ ಚನ್ನಮ್ಮ. ಕಿತ್ತೂರಿನಲ್ಲಿ ಆಚರಿಸಲ್ಪಡುತ್ತಿರುವ ಕಿತ್ತೂರು ಉತ್ಸವಕ್ಕೆ ಮತ್ತು ಕಿತ್ತೂರಿನ ಅಭಿವೃದ್ಧಿಗೆ ಸರ್ಕಾರ ಸಕಲ ನೆರವನ್ನು ನೀಡುತ್ತಿದೆ. ಅಗತ್ಯ ಅನುದಾನವನ್ನೂ ನೀಡುತ್ತಿದೆ ಎಂಬ ಭರವಸೆ ನೀಡಿದರು.
ಇಂದು ಮಹಾತ್ಮ ಗಾಂಧಿಯವರ ಜಯಂತಿ. ಜತೆಗೆ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜನುಮದಿನವೂ ಹೌದು. ಗಾಂಧಿ ನಡಿಗೆ ಮೂಲಕ ಗಾಂಧಿ ತತ್ವಾದರ್ಶಗಳು ಇವತ್ತಿನ ಯುವ ಪೀಳಿಗೆಗೆ ತಲುಪಿಸುವ ಪ್ರಯತ್ನ ಮಾಡಿದ್ದೇವೆ ಎಂದರು.ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ನೇತೃತ್ವ ವಹಿಸಿ ಶಾಂತಿಯುತವಾಗಿ ಸ್ವಾತಂತ್ರ್ಯ ದೊರಕಿಸಿಕೊಟ್ಟರು. 1920 ರಿಂದ 1947 ರ ವರೆಗಿನ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.
ಸಚಿವರಾದ ಎಚ್.ಕೆ.ಪಾಟೀಲ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಮರ್, ಶಾಸಕರಾದ ರಿಜ್ವಾನ್ ಅರ್ಷದ್, ರಾಜು ಕಾಗೆ, ಬಾಬಾಸಾಹೇಬ ಪಾಟೀಲ, ಸಲೀಂ ಅಹ್ಮದ್, ಹ್ಯಾರಿಸ್, ನಸೀರ್ ಅಹ್ಮದ್ ಇನ್ನಿತರರು ಇದ್ದರು.