ಬಡ ಮಧ್ಯಮ ವರ್ಗಗಳಲ್ಲಿ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆಯ ಭಾವನೆ ಇರುವುದೇ ಹೆಚ್ಚು

ನಾ ದಿವಾಕರ
ಭಾರತ ಆರ್ಥಿಕವಾಗಿ ವಿಶ್ವದ ಅಗ್ರಮಾನ್ಯ ರಾಷ್ಟ್ರವಾಗುವ ಹಾದಿಯಲ್ಲಿ ದಾಪುಗಾಲು ಹಾಕುತ್ತಿರುವುದು ವಾಸ್ತವ. ಇಡೀ ಜಗತ್ತು ಕೋವಿದ್ ಸಂಕಷ್ಟಕ್ಕೆ ಸಿಲುಕಿದಾಗ, ವಲಸೆ ಕಾರ್ಮಿಕರ ಬಡ ಜನತೆಯ ಹಾಗೂ ನಿರ್ಗತಿಕರ ಜೀವನೋಪಾಯವೇ ಅಪಾಯಕ್ಕೀಡಾಗಿದ್ದಾಗ ಮತ್ತೊಂದು ಬದಿಯಲ್ಲಿ ಶ್ರೀಮಂತಿಕೆಯ ಆಡಂಬರ ಮತ್ತು ವೈಭವಗಳೂ ಅಷ್ಟೇ ತೀವ್ರವಾಗಿ ಹೆಚ್ಚಾಗಿದ್ದು ಚರಿತ್ರೆಯ ವಿಡಂಬನೆಯಾದರೂ ಸತ್ಯ. ಮಾರುಕಟ್ಟೆ ಪ್ರೇರಿತ, ಕಾರ್ಪೋರೇಟ್ ಆಧಾರಿತ ಅರ್ಥವ್ಯವಸ್ಥೆಯಲ್ಲಿ ಸಹಜವಾಗಿ ಕಾಣಬಹುದಾದ ತಳಸಮಾಜದ ಆರ್ಥಿಕ ಶೋಷಣೆ ಮತ್ತು ಅದರಿಂದಲೇ ಎತ್ತರಕ್ಕೇರುವ ಮೇಲ್ವರ್ಗದ ಸಮಾಜದ ಸಿರಿವಂತಿಕೆ ಭಾರತದಲ್ಲೂ ಕಂಡಿದ್ದು ಅಚ್ಚರಿಯೇನಲ್ಲ. ಹಾಗಾಗಿಯೇ ಇಂದು ಭಾರತ ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕೋಟ್ಯಧಿಪತಿಗಳನ್ನು ಉತ್ಪಾದಿಸಿದ ದೇಶ ಎಂಬ ಹೆಗ್ಗಳಿಕೆಯನ್ನೂ ಪಡೆದಿದೆ.
ಅದ್ಧೂರಿ ಜೀವನದ ಒಂದು ಮಗ್ಗುಲು

2024ರ ಜನವರಿಯಲ್ಲಿ ಆರಂಭವಾಗಿ ಜುಲೈ ತಿಂಗಳಲ್ಲಿ ಸಮಾಪ್ತಿಯಾದ ಭಾರತದ ಉದ್ಯಮಿ ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರ ವಿವಾಹ ಈ ಬಡತನ-ಶ್ರೀಮಂತಿಕೆಯ ನಡುವಿನ ತಾತ್ವಿಕ ಸಂಘರ್ಷಗಳಿಗೆ ಚರ್ಚಾವೇದಿಕೆಯಾಗಿದ್ದು ಸಹಜವೇ ಆಗಿದೆ. ಐದು ಸಾವಿರ ಕೋಟಿ ರೂಗಳ ವೆಚ್ಚದ ಈ ವಿವಾಹ ಒಂದೆಡೆ ಶ್ರೀಮಂತ ಭಾರತದ ಚಿತ್ರಣವನ್ನು ಜಗತ್ತಿನ ಮುಂದೆ ಹಿಡಿದು ಬೀಗಿದ್ದರೆ ಮತ್ತೊಂದೆಡೆ ದೇಶದ ತಳಮಟ್ಟದ ಸಮಾಜವನ್ನು ತೀವ್ರವಾಗಿ ಕಾಡುತ್ತಿರುವ ನಿರುದ್ಯೋಗ, ಹಸಿವು ಮತ್ತು ಬಡತನ ಪ್ರಜ್ಞಾವಂತ ಸಮಾಜವನ್ನು ಯೋಚಿಸುವಂತೆ ಮಾಡಿತ್ತು. ಈ ನಾಗರಿಕರನ್ನು ಎಡಬಿಡದೆ ಕಾಡುತ್ತಿರುವ ದಾರಿದ್ರ್ಯವನ್ನು ಕೋಟ್ಯಧಿಪತಿಗಳ ವಿವಾಹದ ವೈಭವಗಳು ಸುಲಭವಾಗಿ ಮರೆಮಾಚುತ್ತವೆ. ಏಕೆಂದರೆ ಸಾರ್ವಜನಿಕ ಅಭಿಪ್ರಾಯವನ್ನು ಉತ್ಪಾದಿಸುವ ಮಾರುಕಟ್ಟೆ ಪ್ರೇರಿತ ಮಾಧ್ಯಮಗಳು ವಂದಿಮಾಗಧ ಶೈಲಿಯಲ್ಲಿ ಈ ಪರದೆಯನ್ನು ನಿರ್ಮಿಸಿಬಿಡುತ್ತವೆ.
ಈ ವಿಡಂಬನೆ ಮತ್ತು ವಿಪರ್ಯಾಸಗಳ ನಡುವೆಯೇ ಖ್ಯಾತ ಅರ್ಥಶಾಸ್ತ್ರಜ್ಞರಾದ ಲುಕಾಸ್ ಚಾನ್ಸಲ್, ಥಾಮಸ್ ಪಿಕೆಟಿ, ನಿತಿನ್ ಕುಮಾರ್ ಭಾರ್ತಿ ಮತ್ತು ಅನ್ಮೋಲ್ ಸೊಮಾಂಚಿ ಅವರು 2024ರ ಮಾರ್ಚ್ ತಿಂಗಳಲ್ಲಿ ಮಂಡಿಸಿದ ವರದಿಯೊಂದು ಭಾರತೀಯ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆಗಳನ್ನು ಪ್ರಮಾಣೀಕರಿಸುತ್ತದೆ. “ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆಗಳು 1922-2023- ಕೋಟ್ಯಧಿಪತಿ ಸಾಮ್ರಾಜ್ಯದ ಉಗಮ ” ಈ ವರದಿಯು ನೀಡುವ ಅಂಕಿಅಂಶಗಳು ವಾಸ್ತವವನ್ನು ತೆರೆದಿಡುತ್ತವೆ. ಇದರ ಅನುಸಾರ 2022-23ರಲ್ಲಿ ಭಾರತದ ಜನಸಂಖ್ಯೆಯ ಮೇಲ್ ಸ್ತರದ ಶೇಕಡಾ 1ರಷ್ಟು ಜನರು ದೇಶದ ಒಟ್ಟು ಆದಾಯದ ಶೇಕಡಾ 22.6ರಷ್ಟನ್ನು, ಒಟ್ಟು ಸಂಪತ್ತಿನ ಶೇಕಡಾ 40.1ರಷ್ಟನ್ನೂ ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನು ನೈಜ ಸನ್ನಿವೇಶದಲ್ಲಿ ನಿಷ್ಕರ್ಷೆ ಮಾಡಿದರೆ ಮೇಲ್ ಸ್ತರದ ಶೇಕಡಾ 1ರಷ್ಟು ಜನರ ಸರಾಸರಿ ಸಂಪತ್ತು 54 ದಶಲಕ್ಷ ರೂಗಳಷ್ಟಿದ್ದು ಇದು ಸರಾಸರಿ ಭಾರತೀಯರ ಸಂಪತ್ತಿಗಿಂತ 40 ಪಟ್ಟು ಹೆಚ್ಚಾಗಿದೆ. ಇದೇ ವೇಳೆ ಭಾರತೀಯ ಸಮಾಜದ ಕೆಳಸ್ತರದ ಶೇಕಡಾ 50ರಷ್ಟು ಜನರ ಬಳಿ 1.7 ಲಕ್ಷ ರೂಗಳಷ್ಟು ಸಂಪತ್ತು ಇದೆ. ಇದು ರಾಷ್ಟ್ರೀಯ ಸರಾಸರಿಯ ಶೇಕಡಾ 0.1 ರಷ್ಟು. ಮಧ್ಯಮ ವರ್ಗಗಳ ಬಳಿ 9.6 ಲಕ್ಷ ರೂಗಳ ಸಂಪತ್ತು ಅಂದರೆ ಒಟ್ಟುಸರಾಸರಿಯ ಶೇಕಡಾ 0.7ರಷ್ಟಿದೆ. ಈ ಆಘಾತ ಮೂಡಿಸುವ ಅಂಕಿಅಂಶಗಳು ನಮ್ಮನ್ನು ಚಕಿತಗೊಳಿಸುವ ಮುನ್ನ ಮತ್ತೊಂದು ಆಯಾಮದಲ್ಲಿ ನೋಡಿದರೆ ಭಾರತದ 92 ಕೋಟಿ ವಯಸ್ಕರ ಪೈಕಿ 10 ಸಾವಿರ ವ್ಯಕ್ತಿಗಳು ಸರಾಸರಿ 22.6 ಶತಕೋಟಿ ರೂಗಳ ಸಂಪತ್ತನ್ನು ಶೇಖರಿಸಿರುವುದು ಕಾಣುತ್ತದೆ. ಇದು ಸರಾಸರಿ ಭಾರತೀಯರ ಸಂಪತ್ತಿನ 16,763 ಪಟ್ಟು ಹೆಚ್ಚು. ಇಲ್ಲಿ ಇನ್ನೂ ಕುತೂಹಲದ ಸಂಗತಿ ಎಂದರೆ 2022-23ರಲ್ಲಿ ಕೋಟ್ಯಧಿಪತಿಗಳ ಒಟ್ಟು ಸಂಪತ್ತಿನ ಶೇಕಡಾ 90ರಷ್ಟು ಮೇಲ್ಜಾತಿಯವರ ಬಳಿ ಇತ್ತು. ಪರಿಶಿಷ್ಟ ಜಾತಿಗಳ (SC) ಬಳಿ ಶೇಕಡಾ 2.6ರಷ್ಟಿತ್ತು. ಭಾರತದ ಅತಿ ಶ್ರೀಮಂತರ ಪೈಕಿ ಪರಿಶಿಷ್ಟ ವರ್ಗಗಳ(ST) ಸುಳಿವೂ ಸಿಗುವುದಿಲ್ಲ.
ಬಡತನ ಮತ್ತು ಸಿರಿತನದ ನಡುವೆ
ನೀತಿ ಆಯೋಗವು ತನ್ನ ಇತ್ತೀಚಿನ ವರದಿಯಲ್ಲಿ 13.5 ಕೋಟಿ ಭಾರತೀಯರು ಬಹುಆಯಾಮದ ದಾರಿದ್ರ್ಯದಿಂದ (Multidimensional poverty) ಪಾರಾಗಿದ್ದಾರೆ ಎಂದು ಹೇಳಿದ್ದರೂ, ವಾಸ್ತವ ಚಿತ್ರಣ ಭಿನ್ನವಾಗಿಯೇ ಇದೆ. ಪೌಷ್ಟಿಕತೆಯೂ ಈ ದತ್ತಾಂಶದ ಒಂದು ಅಂಗವಾಗಿರುತ್ತದೆ. ಈ ನಿಟ್ಟಿನಲ್ಲಿ ಜುಲೈ 24ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಒಡನಾಡಿ ಸಂಸ್ಥೆಗಳು ನೀಡಿರುವ “ ಜಗತ್ತಿನಲ್ಲಿ ಆಹಾರ ಭದ್ರತೆ ಮತ್ತು ಪೌಷ್ಟಿಕತೆಯ ಸ್ಥಿತಿಗತಿಗಳು ” ಎಂಬ ವರದಿ ಭಿನ್ನ ಚಿತ್ರಣ ನೀಡುತ್ತದೆ. ಈ ವರದಿಯ ಅನುಸಾರ ಶೇಕಡಾ 56.5ರಷ್ಟು ಭಾರತೀಯರು ಆರೋಗ್ಯಕರ ಆಹಾರ ಪಡೆಯುವುದರಲ್ಲಿ ವಿಫಲರಾಗಿದ್ದಾರೆ. ಅಂದರೆ ಭಾರತದ 79 ಕೋಟಿ ಜನರು ಆರೋಗ್ಯಕರ ಆಹಾರ ಪಡೆಯಲು ದಿನಕ್ಕೆ 350 ರೂಗಳನ್ನು ಖರ್ಚು ಮಾಡಲು ಅಶಕ್ಯರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಒಂದು ಶ್ರೀಮಂತ ಉದ್ಯಮಿಯ ಕುಟುಂಬ ಮದುವೆಗಾಗಿ 5000 ಕೋಟಿ ರೂಗಳನ್ನು ಖರ್ಚು ಮಾಡುವುದನ್ನು ಹೇಗೆ ಬಣ್ಣಿಸುವುದು.

ಖರ್ಚು ವೆಚ್ಚಗಳಿಂದಾಚೆಗೆ ಶ್ರೀಮಂತ ಉದ್ಯಮಿಗಳು ಸಮಾಜ ಕಲ್ಯಾಣದ ಉದ್ದೇಶಗಳಿಗಿಂತಲೂ ಹೆಚ್ಚು ಹಣವನ್ನು ತಮ್ಮ ಆಡಂಬರಕ್ಕೆ ಏಕೆ ಬಳಸುತ್ತಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಶ್ರೀಮಂತ ವರ್ಗಗಳಲ್ಲಿ ರೂಢಿಗತವಾಗಿರುವ ಮನಸ್ಥಿತಿಯಷ್ಟೇ ಅಲ್ಲದೆ, ಒಂದು ಸಾಂಸ್ಕೃತಿಕ ಚಿಂತನೆಯಾಗಿ ರೂಪುಗೊಂಡಿರುತ್ತದೆ. ಇದನ್ನು ಅಮೆರಿಕದ ವಿದ್ವಾಂಸ ವೆಬ್ಲನ್ ತಮ್ಮ ಹಿತವಲಯ ವರ್ಗದ ತತ್ವಗಳು ಎಂಬ ಪ್ರಬಂಧದಲ್ಲಿ “ ಅತ್ಯಂತ ಬೆಲೆ ಬಾಳುವ ಐಷಾರಾಮಿ ವಸ್ತುಗಳ ಬಳಕೆಯು ವಿರಾಮವಾಗಿರುವ ಹಿತವಲಯದ ಜನರಿಗೆ ಖ್ಯಾತಿಯನ್ನು ತಂದುಕೊಡುತ್ತದೆ, ತನ್ನ ಬಳಿ ಇರುವ ಐಶ್ವರ್ಯವನ್ನು ಪ್ರದರ್ಶಿಸುವ ಸಲುವಾಗಿಯೇ ಸ್ನೇಹ ಬಳಗಕ್ಕೆ ಅಮೂಲ್ಯವಾದ ದುಬಾರಿ ಉಡುಗೊರೆಗಳನ್ನು ಕೊಡಲು ಮುಂದಾಗುತ್ತಾರೆ, ಅದ್ಧೂರಿ ಔತಣ ಮತ್ತು ಮನರಂಜನೆಯನ್ನು ಒದಗಿಸುತ್ತಾರೆ ” ಎಂದು ಬಣ್ಣಿಸುತ್ತಾರೆ. ಇತರ ಯಾರಿಗೇ ಆದರೂ ನಿಲುಕಲಾರದಷ್ಟು ಮಟ್ಟಿಗೆ ಈ ಅದ್ಧೂರಿ ಮತ್ತು ವೈಭವವನ್ನು ಮೆರೆಸಲಾಗುತ್ತದೆ. ಹೀಗೆ ದುಂದು ವೆಚ್ಚ ಮಾಡುವ ಮೂಲಕ ಅತಿಶ್ರೀಮಂತರು ಸ್ವ ವೈಭವೀಕರಣದಲ್ಲಿ ತೊಡಗುತ್ತಾರೆ.
ಇದೇ ತತ್ವವನ್ನು ರಾಜಕೀಯ ನೆಲೆಯಲ್ಲಿ ವ್ಯಾಖ್ಯಾನಿಸುವ ಮೈಕೆಲ್ ಜೆ ಸಾಂಡೆಲ್ ತಮ್ಮ The Tyranny of Merit ಕೃತಿಯಲ್ಲಿ , ಶ್ರೀಮಂತರು ಅಗಾಧ ಸಂಪತ್ತನ್ನು ಗಳಿಸಲು ತಾವು ಎಲ್ಲ ಅರ್ಹತೆಯನ್ನೂ ಪಡೆದುಕೊಂಡಿದ್ದೇವೆ ಎಂದು ನಿರೂಪಿಸುವ ಸಲುವಾಗಿಯೇ ಸಂಪತ್ತಿನ ಒಡೆತನವನ್ನು ಪ್ರದರ್ಶಿಸಲು ಸ್ವೇಚ್ಚೆಯಾಗಿ ಖರ್ಚು ಮಾಡಲು ಮುಂದಾಗುತ್ತಾರೆ ಎಂದು ಹೇಳುತ್ತಾರೆ. ಪಶ್ಚಿಮದಲ್ಲೂ ಕೆಲವು ವಿದ್ವಾಂಸರು ವ್ಯಕ್ತಿಯ ಅಪಾರ ಯಶಸ್ಸಿಗೆ ಅಂತಹ ವ್ಯಕ್ತಿ ತನ್ನ ಬಾಲ್ಯದಲ್ಲಿ ಬೆಳೆದ ಪರಿಸರವೇ ಕಾರಣ ಆದರೆ ಆ ಪರಿಸ್ಥಿತಿಗಳ ಶ್ರೇಯಸ್ಸನ್ನು ಇವರು ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಅರ್ಥಶಾಸ್ತ್ರಜ್ಞ ಫ್ರೆಡ್‌ರಿಚ್ ಹಾಯೆಕ್ ಇದನ್ನು ಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸುತ್ತಾ ಯಶಸ್ಸಿನ ಶಿಖರ ಏರಿದವರು ಸಮುದಾಯದ ಸಾಮಾನ್ಯ ಒಳಿತಿಗಾಗಿ ಕೊಡುಗೆ ನೀಡಲೇಬೇಕು ಏಕೆಂದರೆ ಈ ಸಮುದಾಯವೇ ಅವರ ಯಶಸ್ಸಿಗೆ ಕಾರಣವಾಗಿರುತ್ತದೆ ಎಂದು ಹೇಳುತ್ತಾರೆ.

ಶ್ರೀಮಂತಿಕೆಯ ಹಕ್ಕು-ಜವಾಬ್ದಾರಿ
ಆದರೆ ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ ಶ್ರೀಮಂತಿಕೆಯನ್ನು ದೈವದತ್ತ ವರ ಅಥವಾ ಪೂರ್ವ ಜನ್ಮದ ಪುಣ್ಯದ ಫಲ ಎಂದು ಭಾವಿಸಲಾಗುತ್ತದೆ. ಹಾಗಾಗಿಯೇ ಮೇಲೆ ಉಲ್ಲೇಖಿಸಿದ ವಿದ್ವಾಂಸರ ಅಭಿಪ್ರಾಯದಲ್ಲಿ ಇರುವ ವಾಸ್ತವವನ್ನು ಅರ್ಥಮಾಡಿಕೊಳ್ಳದ ಭಾರತದ ಶ್ರೀಮಂತ ವರ್ಗಗಳು ಮಾರುಕಟ್ಟೆಯು ತಮಗೆ ಒದಗಿಸುವ ಅಪಾರ ಸಂಪತ್ತಿಗೆ ತಮ್ಮ ಪ್ರತಿಭೆ ಮತ್ತು ಪರಿಶ್ರಮಗಳಷ್ಟೇ ಕಾರಣ ಎಂದು ಭಾವಿಸುವುದಲ್ಲದೆ ಬಡಜನತೆ ಪ್ರತಿಭೆಯಿಲ್ಲದ ಕಾರಣದಿಂದಲೇ ದಾರಿದ್ರ್ಯ ಅನುಭವಿಸುತ್ತಾರೆ ಎಂದು ಭಾವಿಸುತ್ತಾರೆ. ತಾವು ಪಡೆದ ಶ್ರೀಮಂತಿಕೆಗೆ ತಮ್ಮ ಅರ್ಹತೆ ಮತ್ತು ಪ್ರತಿಭೆಯೇ ಕಾರಣ ಎಂದು ಭಾವಿಸುವುದರಿಂದಲೇ ಶ್ರೀಮಂತ ವರ್ಗಗಳು ತಮ್ಮ ಸಾಮಾಜಿಕ ಸ್ಥಾನಮಾನಗಳನ್ನು ಹೆಚ್ಚಿಸಿಕೊಳ್ಳುವ ಹಾದಿಯಲ್ಲಿ ಅವಕಾಶವಂಚಿತ ಜನರನ್ನು ವಿಫಲರಾದವರು ಎಂದು ಪರಿಗಣಿಸಿ ನಗಣ್ಯಗೊಳಿಸುತ್ತವೆ. ಹಾಗಾಗಿಯೇ ಇಂತಹ ಅದ್ಧೂರಿ ಸಮಾರಂಭಗಳಲ್ಲಿ ಕೆಳಸ್ತರದ ವರ್ಗಗಳ ಪ್ರಾತಿನಿಧ್ಯದ ಸುಳಿವೂ ಸಹ ಇರುವುದಿಲ್ಲ. ಈ ವರ್ಗದ ಮನತಣಿಸಲು ಮತ್ತೊಂದು ಸಂದರ್ಭದಲ್ಲಿ ಮನರಂಜನೆಯನ್ನು ಏರ್ಪಡಿಸುವ ಔದಾರ್ಯವನ್ನೂ ಶ್ರೀಮಂತ ವರ್ಗಗಳು ತೋರುತ್ತವೆ.
ದುರಂತ ಎಂದರೆ ಭಾರತದ ಸಂದರ್ಭದಲ್ಲಿ ಈ ಕೆಳಸ್ತರದ ಸಮಾಜವೂ ಸಹ ತನ್ನ ತಳಶ್ರೇಣಿಯನ್ನು ಸ್ವೀಕೃತ ಎಂದು ಭಾವಿಸಿದ್ದು, ಮೇಲ್ವರ್ಗದ ಜನತೆಗೆ ಅಂತಹ ಐಷಾರಾಮಿ ಅದ್ಧೂರಿ ಮತ್ತು ವೈಭವವನ್ನು ಹೊಂದುವ ಹಕ್ಕು ಇದೆ ಎಂದೇ ಪರಿಗಣಿಸುತ್ತದೆ. ಹಾಗಾಗಿಯೇ ಅಂಬಾನಿ ಕುಟುಂಬದ ಅದ್ಧೂರಿ ವಿವಾಹದ ಸಂದರ್ಭದಲ್ಲಿ ಕೇಳಿಬಂದ ಸಾರ್ವಜನಿಕ ಚರ್ಚೆಗಳಲ್ಲಿ “ ಆ ಕೋಟ್ಯಧಿಪತಿ ಅಪಾರ ಸಂಪತ್ತು ಗಳಿಸಿದ್ದಾನೆ, ಆತನ ಮಕ್ಕಳಿಗೆ ಅದನ್ನು ಖರ್ಚು ಮಾಡುವ ಹಕ್ಕು ಅವರಿಗೆ ಇರುತ್ತದೆ ” ಎಂಬ ಅಭಿಪ್ರಾಯಗಳು ಕೆಳಸ್ತರದ ಜನರಿಂದಲೂ ಕೇಳಿಬರುತ್ತದೆ. ಈ ಕೆಳಸ್ತರದ ದುಡಿಯುವ ವರ್ಗಗಳಿಗೆ ಅಥವಾ ಸಣ್ಣ ವ್ಯಾಪಾರಿಗಳಿಗೆ ತಮ್ಮ ದೈನಂದಿನ ಬದುಕು ಸುಗಮವಾಗಿ ಸಾಗುವುದಷ್ಟೇ ಆಕಾಂಕ್ಷೆಯಾಗಿರುತ್ತದೆ. ಈ ಮಧ್ಯಮ-ಕೆಳಮಧ್ಯಮ ವರ್ಗದ ಮನಸ್ಥಿತಿಯನ್ನು ಮೈಕೆಲ್ ಲಮಾಂಟ್ ಎಂಬ ಸಮಾಜಶಾಸ್ತ್ರಜ್ಞೆ ತಮ್ಮ Dignity of Working Men ಎಂಬ ಕೃತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಅಮೆರಿಕದಂತಹ ಸಮಾಜದಲ್ಲೂ ಸಹ ಬಹುಪಾಲು ಮಧ್ಯಮ ವರ್ಗದ ಜನರು ಅತಿ ಶ್ರೀಮಂತರ ಬಗ್ಗೆ ಅಸಮಾಧಾನವನ್ನು ಹೊಂದಿರುವುದಿಲ್ಲ ಎಂದು ಹೇಳುವ ಲಮಾಂಟ್, ಸಾರ್ವಜನಿಕ ವಲಯದಲ್ಲಿ ಈ ರೀತಿಯ ಸಂಪತ್ತಿನ ವಿತರಣೆಯನ್ನು ಸಮರ್ಥಿಸುವ ಧ್ವನಿಗಳೇ ಹೆಚ್ಚಾಗಿರುತ್ತವೆ ಎಂದು ಹೇಳುತ್ತಾರೆ. ಶಕ್ತಿ ಇದ್ದವರು ಸಂಪಾದಿಸುತ್ತಾರೆ ಎಂಬ ಪಾರಂಪರಿಕ ನಂಬಿಕೆ ಇಲ್ಲಿ ಕಾಣುತ್ತದೆ.

ಪ್ರತಿಭೆ ಮತ್ತು ಯೋಗ್ಯತೆ ಎಂಬ ಮಿಥ್ಯೆಗಳು ಜನಸಾಮಾನ್ಯರಲ್ಲಿ ಬೇರೂರಿರುವುದರಿಂದಲೇ ಮಧ್ಯಮ ವರ್ಗಗಳು ಮತ್ತು ಕೆಳಸ್ತರದ ಸಮಾಜ ಶ್ರೀಮಂತಿಕೆಯನ್ನು ಸ್ವೀಕೃತ ಎಂದೇ ಭಾವಿಸುವುದನ್ನು ಸಮಾಜಶಾಸ್ತ್ರಜ್ಞರು ಗುರುತಿಸುತ್ತಾರೆ. ಈ ನಿಟ್ಟಿನಲ್ಲಿ ಧಾರ್ಮಿಕವಾಗಿ ವಿವಿಧ ಮತಗಳು ಕೆಳಸ್ತರದ ಅವಕಾಶವಂಚಿತ ಜನರ ಕಣ್ತೆರೆಸುವಂತಹ ಸಂದೇಶಗಳನ್ನು ರವಾನಿಸಿದ್ದರೂ, ಆಧುನಿಕ ಪ್ರಪಂಚದಲ್ಲಿ ಇದು ಪರಿಣಾಮಕಾರಿಯಾಗಿಲ್ಲ. ಉದಾಹರಣೆಗೆ ಇಸ್ಲಾಂ ಮತದ ಪವಿತ್ರ ಕುರಾನ್ ಗ್ರಂಥದಲ್ಲಿ ಸಂಪತ್ತು ಎನ್ನುವುದು ದೈವದತ್ತವಾದ ಕೊಡುಗೆ ಆದರೆ ಶ್ರೀಮಂತರು ಇದರ ಒಡೆತನ ಹೊಂದಿದ್ದರೂ ಬಡಜನತೆಯ ಪರವಾಗಿ ಧರ್ಮದರ್ಶಿಗಳಂತೆ ಕಾಪಿಟ್ಟುಕೊಳ್ಳಬೇಕು ಹಾಗಾಗಿ ವಂಚಿತ ಜನರಿಗೆ ಈ ಸಂಪತ್ತಿನ ಮೇಲೆ ಹಕ್ಕಿರುತ್ತದೆ ಎಂದು ಹೇಳಲಾಗಿದೆ. ಹಿಂದೂ/ಕ್ರೈಸ್ತ ಮತಗಳ ಧಾರ್ಮಿಕ ನಿರೂಪಣೆಗಳಲ್ಲೂ ಇಂತಹ ಮೌಲ್ಯಯುತ ಸಂದೇಶಗಳನ್ನು ಕಾಣಬಹುದು.
ಬಂಡವಾಳಶಾಹಿಯ ಧೋರಣೆ
ಆದರೆ ಬಂಡವಾಳಶಾಹಿ ಜಗತ್ತಿನಲ್ಲಿ, ಕಾರ್ಪೋರೇಟ್ ಮಾರುಕಟ್ಟೆ ಆರ್ಥಿಕತೆಯು ರೂಪಿಸುವ ಶ್ರೀಮಂತ ಜಗತ್ತು ಈ ಮಾನವೀಯ ಮೌಲ್ಯಗಳಿಗೆ ವಿಮುಖವಾಗಿರುತ್ತದೆ. ಸಂಪತ್ತಿನ ಶೇಖರಣೆ, ಕ್ರೋಢೀಕರಣ ಮತ್ತು ಸ್ವೇಚ್ಚತೆಯ ಅದ್ಧೂರಿ ವೆಚ್ಚ ಈ ಮೂಲ ಮಂತ್ರಗಳನ್ನೇ ಅನುಸರಿಸುವ ಶ್ರೀಮಂತ ವರ್ಗಗಳಿಗೆ ವಂಚಿತ ಜನತೆ ಸದಾ ನೆರವಿಗಾಗಿ ಕೈಚಾಚಿ ನಿಂತ ಸಮುದಾಯಗಳಾಗಿ ಕಾಣುತ್ತವೆ. ಸಮಕಾಲೀನ ಭಾರತದಲ್ಲಿ ಮದುವೆ ಮತ್ತಿತರ ಕೌಟುಂಬಿಕ ಸಮಾರಂಭಗಳಿಗೆ ಸ್ಚೇಚ್ಚತೆಯಿಂದ ಖರ್ಚು ಮಾಡುವ ಒಂದು ಪರಂಪರೆ ಬೇರೂರಿಬಿಟ್ಟಿದೆ. ಕೋಟ್ಯಧಿಪತಿಗಳಷ್ಟೇ ಅಲ್ಲದೆ ಮೇಲ್ ಮಧ್ಯಮ ವರ್ಗಗಳಲ್ಲೂ ಸಹ ಈ ಐಷಾರಾಮಿ ಅದ್ಧೂರಿ ಆಚರಣೆಗಳು ಸಾಮಾನ್ಯ ಸಂಗತಿಯಾಗಿದೆ. ದುಬಾರಿ ವೆಚ್ಚ ಮಾಡುವುದು, ಅದ್ಧೂರಿ ಸಮಾರಂಭಗಳನ್ನು ಏರ್ಪಡಿಸುವುದು ತನ್ಮೂಲಕ ತಮ್ಮ ಶ್ರೀಮಂತಿಕೆಯನ್ನು ವೈಭವಯುತವಾಗಿ ಪ್ರದರ್ಶಿಸಿಕೊಳ್ಳುವ ಗೀಳು ಉಳ್ಳವರ ಬದುಕಿನ ಒಂದು ಭಾಗವಾಗಿದೆ.

ಸಮಾಜದ ಮತ್ತೊಂದು ಬದಿಯಲ್ಲಿ ಅಪೌಷ್ಟಿಕತೆ, ಹಸಿವು, ಬಡತನದಿಂದ ಬಳಲಿ ಅವಕಾಶವಂಚಿತರಾಗಿ ಬಾಳುತ್ತಿರುವ ಅಪಾರ ಜನಸ್ತೋಮವೂ ನಮಗೆ ಕಾಣುತ್ತದೆ. ಈ ವಿಡಂಬನೆಯ ನಡುವೆಯೇ ಭಾರತೀಯ ಸಮಾಜ ಶ್ರಿಮಂತಿಕೆಯನ್ನು ವೈಭವೀಕರಿಸುವುದರಲ್ಲಿ ತೊಡಗಿದೆ. ಇಲ್ಲಿ ನಿರ್ಲಕ್ಷ್ಯಕ್ಕೊಳಗಾಗುವ ತಳಸಮಾಜದ ದಾರಿದ್ರ್ಯ ಮತ್ತು ನಿತ್ಯ ಬದುಕಿನ ಬವಣೆಗಳು ಕೇವಲ ಸಾಹಿತ್ಯಕ ಹಾಳೆಗಳನ್ನು ಅಲಂಕರಿಸುತ್ತವೆ. ಹಾಗಾಗಿಯೇ ಭಾರತದ ಅಧಿಕಾರ ರಾಜಕಾರಣದಲ್ಲಿ ಕಾಂಗ್ರೆಸ್ ಮುಕ್ತ, ವಿರೋಧ ಪಕ್ಷ ಮುಕ್ತ, ಭ್ರಷ್ಟಾಚಾರ ಮುಕ್ತ ಭಾರತ ಎಂಬ ಘೋಷಣೆಗಳು ಹೇರಳವಾಗಿದ್ದರೂ, ʼ ಹಸಿವು ಮುಕ್ತ ಭಾರತ ʼ ಎಂಬ ಉದಾತ್ತ ಘೋಷಣೆ ಎಲ್ಲಿಯೂ ಕಾಣಲಾಗುವುದಿಲ್ಲ. ಇದು ಪ್ರಜ್ಞಾವಂತ ನಾಗರಿಕರನ್ನು ಕಾಡಬೇಕಿರುವ ಪ್ರಶ್ನೆ.
( ಈ ಲೇಖನದ ಅಂಕಿಅಂಶ-ದತ್ತಾಂಶ-ಮಾಹಿತಿಗಳನ್ನು ಆಗಸ್ಟ್ 5 ರ ದ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ The Psychology of Extravagance-ಫೈಜುರ್ ರಹಮಾನ್ ಮತ್ತು ಸಂತೋಶ್ ಮೆಹ್ರೋತ್ರ –ಲೇಖನದಿಂದ ಪಡೆದುಕೊಳ್ಳಲಾಗಿದೆ)
-೦-೦-೦–
