ಬೆಂಗಳೂರು:ಕಾರ್ಮಿಕ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕ ಸಂದರ್ಭದಲ್ಲಿ ‘ಬೀದರ್ ಮಾದರಿ’ ಅನುಸರಿಸುವ ಕುರಿತು ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಯಿತು.
ವಿಧಾನಸೌಧದ ಸಚಿವರ ಕಚೇರಿಯಲ್ಲಿ ಕಾರ್ಮಿಕ ಸಂಘಟನೆಗಳು ಬೀದರ್ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹೊರಗುತ್ತಿಗೆ ನೇಮಕಕ್ಕೇ ಒಂದು ಸೊಸೈಟಿ ರಚನೆ ಮಾಡಲಾಗಿದೆ.
ಈ ಸೊಸೈಟಿ ಮೂಲಕ ಅಲ್ಲಿ ಈವರೆಗೆ 2 ರಿಂದ 3 ಸಾವಿರ ಹೊರಗುತ್ತಿಗೆ ನೇಮಕ ಮಾಡಲಾಗಿದೆ. ಈ ಮಾದರಿಯ ನೇಮಕದಿಂದ ಹೊರಗುತ್ತಿಗೆ ನೌಕರರಿಗೆ ಸಾಕಷ್ಟು ಅನುಕೂಲವಾಗಿದೆ. ಕಿರಿಕಿರಿ ತಪ್ಪಿದೆ. ನೇರವಾಗಿ ಕಾಲ ಕಾಲಕ್ಕೆ ವೇತನ ಪಾವತಿಯಾಗುತ್ತಿದೆ. ಹಾಗಾಗಿ ಇದೇ ಮಾದರಿಯನ್ನು ಇಡೀ ರಾಜ್ಯಾದ್ಯಂತ ಕಾರ್ಮಿಕ ಇಲಾಖೆ ನೇಮಕದಲ್ಲಿ ಅಳವಡಿಸಲು ಸಾಧ್ಯವೇ ಎಂಬ ಕುರಿತು ಸಮಾಲೋಚನೆ ನಡೆಯಿತು.
ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಕಾನೂನು ಇಲಾಖೆ, ಹಣಕಾಸು ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸಿ ಅಭಿಪ್ರಾಯ ಪಡೆಯಲು ಸಭೆ ನಿರ್ಧರಿಸಿತು.ಖಾಸಗಿಯವರು ಹೊರಗುತ್ತಿಗೆ ನೇಮಕ ಮಾಡಿಕೊಂಡಲ್ಲಿ ಸರಿಯಾದ ರೀತಿಯಲ್ಲಿ ವೇತನ ಪಾವತಿಸುವುದಿಲ್ಲ. ಅನೇಕ ಕಡೆ ನಿಗದಿಗಿಂತ ಕಡಿಮೆ ಸಂಬಳ ನೀಡಿ ಶೋಷಣೆ ಮಾಡುತ್ತಾರೆ. ಪಿಎಫ್, ಇಎಸ್ಐ ವಂತಿಗೆ ಸಕಾಲಕ್ಕೆ ಪಾವತಿಸುವುದಿಲ್ಲ. ‘ಬೀದರ್ ಮಾದರಿ’ ಅನುಸರಿಸಿದರೆ ಇಂತಹ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ. ಹಾಗಾಗಿ ಈ ಮಾದರಿ ಪಾಲಿಸುವಂತೆ ಕಾರ್ಮಿಕ ಸಂಘಟನೆಗಳು ಕಾರ್ಮಿಕ ಇಲಾಖೆ ಮುಂದೆ ಬೇಡಿಕೆ ಇಟ್ಟಿದ್ದವು.ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ವಿಸ್ಕೃತ ಚರ್ಚೆ ನಡೆಯಿತು.
ಗಿಗ್ ಕಾರ್ಮಿಕರಿಗೆ ಸೇವಾ ಭದ್ರತೆ ಒದಗಿಸುವ ವಿಧೇಯಕದ ಸಂಬಂಧ ವಿವಿಧ ಇಲಾಖೆಗಳಿಗೆ ಅಭಿಪ್ರಾಯ ಕೋರಿ ಪ್ರಸ್ತಾವನೆ ಕಳುಹಿಸಿದ್ದು, ಐಟಿ, ಬಿಟಿ ಮತ್ತು ಕಾಮರ್ಸ್ ಅಂಡ್ ಇಂಡಸ್ಟ್ರಿ ಇಲಾಖೆಗಳಿಂದ ಇನ್ನೂ ಅಭಿಪ್ರಾಯ ಬರದಿರುವ ಕುರಿತು ಆಯಾ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದರು.
ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಏಕ್ ರೂಪ್ ಕೌರ್, ಕಾರ್ಮಿಕ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಅಪರ ಕಾರ್ಮಿಕ ಆಯುಕ್ತ ಮಂಜುನಾಥ, ಜಂಟಿ ಕಾರ್ಮಿಕ ಆಯುಕ್ತ ರವಿಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನಿರ್ದೇಶಕರು ಮತ್ತು ಕಾರ್ಮಿಕ ಇಲಾಖೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.