
ಬೆಂಗಳೂರು( ಜಮಖಂಡಿ): ರಾಜ್ಯದ ಮಾಜಿ ಸಿಎಂ ಓರ್ವರಿಗೆ ಸಂಬಂಧಿಸಿ ಅಶ್ಲೀಲ ಸಿಡಿ ಶೀಘ್ರವೇ ರಿಲೀಸ್ ಆಗಲಿದೆ ಎಂದು ಕಾಂಗ್ರೆಸ್ನ ಮಾಜಿ ಶಾಸಕ ಆನಂದ ನ್ಯಾಮಗೌಡ ಅವರು ಸಂಚಲನದ ಹೇಳಿಕೆ ನೀಡಿದ್ದಾರೆ.
ಜಮಖಂಡಿ ನಗರದ ದೇಸಾಯಿ ವೃತ್ತದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿ “ಇವತ್ತು ಒಂದು ಹೊಸ ಸುದ್ದಿ ಬಂದಿದೆ.ಆ ಸುದ್ದಿ ಇವತ್ತೆ ಕೇಳಿನಿ.ಅದೇನಪ್ಪಾ ಅಂದ್ರೆ , ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಒಂದು ಅಶ್ಲೀಲ ಸಿಡಿ ಹೊರಗೆ ಬರೋದಿದೆ.ಆ ಅಶ್ಲೀಲ ಸಿಡಿ ಬಿಜೆಪಿಯವರದ್ದೆ” ಎಂದರು.

ರಾಜ್ಯದ ಅದರಲ್ಲೂ ಬಿಜೆಪಿಯ ಮಾಜಿ ಸಿಎಂ ಓರ್ವರ ಅಶ್ಲೀಲ ಸಿಡಿ ಬಿಡುಗಡೆಯಾಗಲಿದೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಇದೀಗ ಭಾರೀ ಕುತೂಹಲ ಮೂಡಿಸಿದ್ದಾರೆ.ಅಲ್ಲದೇ ಆ CDಯು ಭಾರತೀಯ ಜನತಾ ಪಕ್ಷದ ನಾಯಕನದ್ದೇ ಎಂದು ಅವರು ಒತ್ತಿ-ಒತ್ತಿ ಹೇಳಿದ್ದಾರೆ. ಅದು ಯಾರಿಗೆ ಸಂಬಂಧಿಸಿದ ಸಿಡಿ ಎಂಬುವುದು ನ್ಯಾಮಗೌಡ ಅವರು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬಿಜೆಪಿ-ಜೆಡಿಎಸ್ ನಾಯಕರು ಮುಡಾ, ವಾಲ್ಮೀಕಿ ಹಗರಣದಲ್ಲಿ ಕಟ್ಟು ಹಾಕಿದ್ದು, ಇದೀಗ ನ್ಯಾಮಗೌಡ ಅವರು ಹೇಳುವ ಮಾತು ನಿಜವಾದರೆ, ಆಗ ಕಾಂಗ್ರೆಸ್ನವರು ಬಿಜೆಪಿ ಮೇಲೆ ಯಾವ ರೀತಿ ಮುಗಿ ಬೀಳಲಿದ್ದಾರೆ ಎಂಬುವುದೇ ದೊಡ್ಡ ಕೂತೂಹಲಕ್ಕೆ ಕಾರಣವಾಗಿದೆ.