ಕೊಪ್ಪಳ : ಅಕ್ರಮ ಗಣಿ ಪ್ರಕರಣದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಸಂದರ್ಭ ಬಂದರೆ ಬಂಧಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಗಣಿ ಹಗರಣದ ಆರೋಪ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಅವರಿಗೆ ಪಾಪ ಬಂಧನದ ಭೀತಿ ಕಾಡುತ್ತಿದೆ.
ಅವರು ಭಯಪಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ನನ್ನ ವಿರುದ್ಧ ಟಿ.ಜೆ.ಅಬ್ರಾಹಂ ದೂರು ನೀಡಿದ ತಕ್ಷಣವೇ ನನಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ ಬಳಿಕ ತರಾತುರಿಯಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ. ಆದರೆ ಕುಮಾರಸ್ವಾಮಿ ವಿಚಾರದಲ್ಲಿ ಯಾಕೆ ರಾಜ್ಯಪಾಲರು ಈ ಧೋರಣೆ ಅನುಸರಿಸುತ್ತಿಲ್ಲ. ಇದು ತಾರತಮ್ಯ ಅಲ್ಲವೇ ಎಂದು ಸಿಎಂ ಪ್ರಶ್ನಿಸಿದ್ದಾರೆ.
ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ದಾಖಲೆಗಳನ್ನು ಪ್ರದರ್ಶನ ಮಾಡುವ ಕುಮಾರಸ್ವಾಮಿ ಅವರು ಕೇವಲ ಹಿಟ್ ಅಂಡ್ ರನ್ ಮಾಡುತ್ತಾರೆ. ಅವರು ಯಾವುದಕ್ಕೂ ತಾರ್ಕಿಕ ಅಂತ್ಯ ನೀಡಲ್ಲ. ಪೆನ್ಡ್ರೈವ್ ಇದೆ. ರಿಲೀಸ್ ಮಾಡ್ತೀನಿ ಅಂದಿದ್ದರು… ಅದನ್ನು ಆಚೆ ಬಿಟ್ಟರಾ ಎಂದು ಸಿಎಂ ವ್ಯಂಗ್ಯವಾಗಿ ಕೇಳಿದ್ದಾರೆ.