
ಕಲಬುರಗಿ: ಆರ್ಟಿಕಲ್ 371 ಜೆ ಜಾರಿಯಾಗಿ ಹತ್ತು ವರ್ಷಗಳಾಗುತ್ತಿದ್ದು, ಇದರ ಸಂಭ್ರಮಾಚರಣೆಗೆ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸಂಭ್ರಮಾಚರಣೆ ನೆನಪಿಗೆ 371 ಹಾಸಿಗೆಗಳನ್ನು ಒಳಗೊಂಡ ಜಯದೇವ ಆಸ್ಪತ್ರೆಯನ್ನು ಮುಂದಿನ ತಿಂಗಳು ಲೋಕಾರ್ಪಣೆ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.

ಕಲಬುರಗಿಯಲ್ಲಿ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲಬುರಗಿಗೆ ಅಂತಾರಾಷ್ಟೀಯ ಗುಣಮಟ್ಟದ ಇಎಸ್‌ಐ ಆಸ್ಪತ್ರೆಯನ್ನು ಮಲ್ಲಿಕಾರ್ಜುನ ಖರ್ಗೆ ಅವರು ತಂದರು ಕಲಬುರಗಿ ರಾಜ್ಯದಲ್ಲಿ ಮೂರನೇ ಆರೋಗ್ಯ ಹಬ್ ಆಗಿ ರೂಪುಗೊಳ್ಳುತ್ತಿದೆ. ಇಂದಿರಾಗಾಂಧಿ ತಾಯಿ- ಮಕ್ಕಳ ಆಸ್ಪತ್ರೆ, ಕಿದ್ವಾಯಿ, ಜಯದೇವ ಆಸ್ಪತ್ರೆಗಳು ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿವೆ. ಇದರಿಂದ ಈ ಭಾಗದ ಜನರು ಬೆಂಗಳೂರು, ಹೈದರಾಬಾದ್‌ಗೆ ಹೋಗುವುದು ತಪ್ಪಲಿದೆ. ಸಂಭ್ರಮಾಚರಣೆ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷದ ಇಬ್ಬರು ನಾಯಕರ ಜತೆ ಚರ್ಚೆ ನಡೆಸಿ,ದಿನಾಂಕ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.
ಆರ್ಟಿಕಲ್ 371 ಜೆ ಯನ್ನು ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಮಲ್ಲಿಖಾರ್ಜುನ ಖರ್ಗೆ ಅವರು ಮುಂದಾಳತ್ವವಹಿಸಿ ಜಾರಿಗೆ ತಂದರು. ಈ ಭಾಗದಲ್ಲಿ ಶೈಕ್ಷಣಿಕ, ಔದ್ಯೋಗಿಕ ಮತ್ತು ಸಾಮಾಜಿಕ ಕ್ರಾಂತಿಗೆ ಮುನ್ನಡಿ ಬರೆದಿದೆ ಎಂದರು.









