ಗಯಾ (ಬಿಹಾರ): ಬಿಹಾರದ ಗಯಾ ಜಿಲ್ಲೆಯಲ್ಲಿ 12 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಸಂಚಲನ ಪ್ರಕರಣ ಬೆಳಕಿಗೆ ಬಂದಿದೆ. ಪೋಲೀಸರ ಪ್ರಕಾರ, ಮೂವರು ಯುವಕರು ಅಪ್ರಾಪ್ತ ವಯಸ್ಕಳನ್ನು ಪ್ರಜ್ಞೆ ತಪ್ಪಿಸಿ ನಿದ್ರಾಜನಕ ಬೆರೆಸಿದ ಆಹಾರವನ್ನು ತಿನ್ನುವಂತೆ ಒತ್ತಾಯಿಸಿ ನಂತರ ಅತ್ಯಾಚಾರ ಮಾಡಿದರು.
ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.ಗಯಾ ಜಿಲ್ಲೆಯ ಮಗಧ್ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆಗಸ್ಟ್ 17 ರಂದು ಮಧ್ಯಾಹ್ನ 12 ವರ್ಷದ ಅಪ್ರಾಪ್ತ ಬಾಲಕಿ ಉರುವಲು ಸಂಗ್ರಹಿಸಲು ತನ್ನ ಜಮೀನಿಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಇದೇ ವೇಳೆ ಅವಕಾಶಕ್ಕಾಗಿ ಕಾಯುತ್ತಿದ್ದ ಮೂವರು ಯುವಕರು ಆಕೆಯನ್ನು ಬಲವಂತವಾಗಿ ಎತ್ತಿಕೊಂಡು ತೋಟದ ಆವರಣದಲ್ಲಿರುವ ಕೊಠಡಿಗೆ ಕರೆದೊಯ್ದಿದ್ದಾರೆ.
ಇದಾದ ನಂತರ, ಯುವಕರು ಬಲವಂತವಾಗಿ ಆಕೆಗೆ ನಿದ್ರಾಜನಕ ಬೆರೆಸಿದ ಆಹಾರವನ್ನು ಸೇವಿಸುವಂತೆ ಮಾಡಿದರು ಮತ್ತು ಸ್ವಲ್ಪ ಸಮಯದ ನಂತರ ಆಕೆ ಪ್ರಜ್ಞೆ ಕಳೆದುಕೊಂಡಳು ನಂತರ ಮೂವರು ಯುವಕರು ಸೇರಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಪ್ರಾಪ್ತ ಬಾಲಕಿಯನ್ನು ರೂಮಿನಲ್ಲಿ ಬಿಟ್ಟು ಮೂವರೂ ಹೊರಗಿನಿಂದ ಬೀಗ ಹಾಕಿ ಓಡಿ ಹೋಗಿದ್ದಾರೆ.
ಉರುವಲು ತರಲು ಹೋದ ಅಪ್ರಾಪ್ತೆ ಮನೆಗೆ ಬಾರದೇ ಇದ್ದಾಗ ಮನೆಯವರು ಆತಂಕಗೊಂಡಿದ್ದರು. ಅವರು ತಕ್ಷಣ ಅವಳನ್ನು ಹುಡುಕಲು ಪ್ರಾರಂಭಿಸಿದರು. ಅಷ್ಟರಲ್ಲಿ ಹುಡುಗಿ ರೂಮಿನಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಊರಿನವರೊಬ್ಬರು ಹೇಳಿದರು. ಕುಟುಂಬಸ್ಥರು ಸ್ಥಳಕ್ಕೆ ಬಂದ ನಂತರ ಕೊಠಡಿಯನ್ನು ಮುಚ್ಚಿ ಹೊರಗಿನಿಂದ ಬೀಗ ಹಾಕಲಾಗಿತ್ತು. ಕುಟುಂಬದ ಸದಸ್ಯರು ಕಿಟಕಿಯ ಮೂಲಕ ಕೊಠಡಿಯೊಳಗೆ ಇಣುಕಿ ನೋಡಿದರು ಮತ್ತು ನಂತರ ಬಾಗಿಲು ಒಡೆದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಹೊರತೆಗೆದರು.
ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ 112 ತಂಡವು ಸಂತ್ರಸ್ತೆ ಮತ್ತು ಕುಟುಂಬ ಸದಸ್ಯರನ್ನು ಮಗಧ್ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ಕರೆತಂದಿದೆ. ಅವರ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಬಳಿಕ ಕಾರ್ಯಾಚರಣೆಗಿಳಿದ ಪೊಲೀಸರು ಮೂವರು ಆರೋಪಿಗಳ ಪತ್ತೆಗಾಗಿ ಹಲವೆಡೆ ದಾಳಿ ನಡೆಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾಮೂಹಿಕ ಅತ್ಯಾಚಾರ ಎಸಗಿದ ಮೂವರೂ ಯುವಕರು ಅದೇ ಗ್ರಾಮದವರು.
“ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮೂರನೇ ಆರೋಪಿಯನ್ನು ಸಹ ಹುಡುಕಲಾಗುತ್ತಿದೆ ಪೊಲೀಸರು ಮುಂದಿನ ಕ್ರಮದಲ್ಲಿ ತೊಡಗಿದ್ದಾರೆ” ಎಂದು ಗಯಾ ಎಸ್ಎಸ್ಪಿ ಆಶಿಶ್ ಭಾರ್ತಿ ತಿಳಿಸಿದ್ದಾರೆ.