ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ವೈದ್ಯಕೀಯ ಸಂಘ ಶನಿವಾರ ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆ ತನಕ ಮುಷ್ಕರ ನಡೆಸಲು ಮುಂದಾಗಿದೆ. ಇಂದು ದೇಶಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಸರ್ಕಾರಿ ಮತ್ತು ಖಾಸಗಿ ಆಸ್ಫತ್ರೆಗಳ ಓಪಿಡಿ ಬಂದ್ ಇರಲಿದ್ದು, ಎಮರ್ಜೆನ್ಸಿ ಪೇಷೆಂಟ್‌ಗೆ ಮಾತ್ರ ಟ್ರೀಟ್‌ಮೆಂಟ್ ಸಿಗಲಿದೆ. ಎಲ್ಲಾ ವೈದ್ಯರು ಓಪಿಡಿ ಸೇವೆಗಳಿಗೆ ಹಾಜರಾಗದೆ, ಐಎಂಎ, ಫ್ರೀಡಂ ಪಾರ್ಕ್‌ಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಇನ್ನೂ ಸರ್ಕಾರಿ ವೈದ್ಯರು ಕೈಗೆ ಕಪ್ಪು ಪಟ್ಟಿ ಧರಿಸಿ ಎಮರ್ಜೆನ್ಸಿ ಸೇವೆಯನ್ನ ಮಾತ್ರ ನೀಡಲಿದ್ದಾರೆ.
ಖಾಸಗಿ ಆಸ್ಪತ್ರೆಯ ವೈದ್ಯರು ಹೊರ ರೋಗಿಗಳ ಸೇವೆ (OPD) ಬಂದ್ ಮಾಡಿ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ರಾಜ್ಯಾಧ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಆರೋಗ್ಯ ಇಲಾಖೆ ಆದೇಶ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಕೋಲ್ಕತಾದ ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ಯುವ ವೈದ್ಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ ಮಾಡುತ್ತಿದ್ದು, ಖಾಸಗಿ ಕ್ಲಿನಿಕ್‌ಗಳೂ ಕೂಡ ಕಾರ್ಯ ನಿರ್ವಹಣೆ ಮಾಡದಿರಲು ನಿರ್ಧಾರ ಮಾಡಿವೆ. ಹೀಗಾಗಿ ಇಂದು ಆಸ್ಪತ್ರೆಗಳಲ್ಲಿ ರೋಗಿಗಳ ಪರದಾಟ ಫಿಕ್ಸ್ ಎನ್ನಲಾಗ್ತಿದೆ.
ಇದೇ ಕಾರಣಕ್ಕೆ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಲು ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿದೆ. ಎಲ್ಲಾ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಎಲ್ಲಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು, ಅಗತ್ಯ ಮುನ್ನೆಚ್ಚರಿಕಾ ಕ್ರಮವಹಿಸಲು ರಾಜ್ಯ ಸರ್ಕಾರ ಸೂಚನೆ ಕೊಟ್ಟಿದೆ. ಸಾರ್ವಜನಿಕ ತುರ್ತು ವೈದ್ಯಕೀಯ ಸೇವೆಗೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲು ಆದೇಶ ಮಾಡಲಾಗಿದೆ. ಶನಿವಾರ ಯಾವುದೇ ವೈದ್ಯರಿಗೆ ರಜೆ ಮಂಜೂರು ಮಾಡದಂತೆ ಆದೇಶದಲ್ಲಿ ತಿಳಿಸಲಾಗಿದೆ.
ಕೃಷ್ಣಮಣಿ