ಮೈಸೂರು ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, “ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತದವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ ಕುಮಾರಸ್ವಾಮಿ ಯೂಟರ್ನ್ ಮಾಡಿಕೊಂಡು ಈಗ ಬಿಜೆಪಿ ಮೊರೆ ಹೋಗಿದ್ದಾರೆ” ಎಂದು ಟೀಕಿಸಿದರು.
“ವಿಜಯೇಂದ್ರ ನಿಮ್ಮ ತಂದೆ ಎರಡು ಸಾರಿ ರಾಜೀನಾಮೆ ಕೊಟ್ಟಿದ್ದೇಕೆ? ಎಂದು ಲೆಕ್ಕ ಕೊಡು. ನಾಳೆ ನೀನು ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮಿ ವಿಲಾಸ್ ಬ್ಯಾಂಕ್ ನಿಂದ ವಿದೇಶಕ್ಕೆ ಆರ್‌ಟಿಜಿಎಸ್ ಮಾಡಿದ್ದೀಯಲ್ಲಾ, ಅದು ಯಾಕೆ? ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ? ಎಂದು ವಿವರಿಸು. ಇಲ್ಲಿ ಯಾರು ರಾಜೀನಾಮೆ ನೀಡಬೇಕು ಎಂದು ಕಾಲ ತೀರ್ಮಾನ ಮಾಡುತ್ತದೆ” ಎಂದು ತಿರುಗೇಟು ನೀಡಿದರು.ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು.
ನಂತರ ಪ್ರೀತಂ ಗೌಡನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೇ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿಯೇ ಹೊರತು ಕಾಂಗ್ರೆಸಿಗರಲ್ಲ” ಎಂದರು.“ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿ ಇಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ” ಎಂದು ಕುಟುಕಿದರು.
ಮಿಸ್ಟರ್ ಅಶೋಕ್, ಮಿಸ್ಟರ್ ವಿಜಯೇಂದ್ರ ನೀವು ಆಪರೇಶನ್ ಕಮಲದ ಮೂಲಕ ಈ ಹಿಂದೆ ಅನೇಕ ಸರ್ಕಾರ ತೆಗೆದಿದ್ದೀರಿ. ಮಿಸ್ಟರ್ ಕುಮಾರಸ್ವಾಮಿ, ನಿನ್ನ ಮುಖಂಡತ್ವದಲ್ಲಿ ಕೇವಲ 19 ಸೀಟುಗಳನ್ನು ಮಾತ್ರ ಗೆದ್ದಿದ್ದೀರಿ. ಈ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ 136 ಸೀಟು ಗೆದ್ದಿದೆ. ಬ್ರಿಟಿಷರು 200 ವರ್ಷ ಆಳಿದರೂ ಈ ಕಾಂಗ್ರೆಸ್ ಅಳಿಸಲು ಆಗಲಿಲ್ಲ. ಬಡವರ ಶಕ್ತಿಯಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷವನ್ನು ನೀನು ಎರಡು ಜನ್ಮ ಎತ್ತಿ ಬಂದರೂ ಅಳಿಸಲು ಸಾಧ್ಯವಿಲ್ಲ. ನೀನು ಏನೇ ಕುತಂತ್ರ ಮಾಡಿದರೂ ಕಾಂಗ್ರೆಸ್ ಅಳಿಸಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದರು.
“ವಿಜಯೇಂದ್ರ, ಅಶೋಕ, ಕುಮಾರಸ್ವಾಮಿ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ? ಮಾಧ್ಯಮಗಳು ನನ್ನನ್ನು ಬಂಡೆ ಎಂದರು. ಕಲ್ಲು ಪ್ರಕೃತಿ, ಕಡಿದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಬಂಡೆ ಸಿದ್ದರಾಮಯ್ಯನ ಜತೆ ಇದೆ. ಈ ಬಂಡೆ ಜತೆ 135 ಶಾಸಕರೂ ಇದ್ದಾರೆ. ಕೋಟ್ಯಂತರ ಜನ ಸಿದ್ದರಾಮಯ್ಯನವರ ಜತೆಗಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಳ್ಳಿ. ಹೀಗಾಗಿ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ” ಎಂದರು.2023ರಲ್ಲಿ ರಾಜ್ಯದ ಜನರು ನಮಗೆ ಶೇ. 43 ರಷ್ಟು ಮತ ನೀಡಿದ್ದಾರೆ, ಲೋಕಸಭೆಯಲ್ಲಿ ಶೇ. 45 ರಷ್ಟು ಮತ ನೀಡಿದ್ದಾರೆ. 1 ಸೀಟು ಹೊಂದಿದ್ದ ನಾವು 9 ಸೀಟು ಗೆದ್ದಿದ್ದೇವೆ. ಜನರ ತೀರ್ಪನ್ನು ನಾವು ಒಪ್ಪುತ್ತೇವೆ.
ಈ ಸರ್ಕಾರವನ್ನು ಮುಂದಿನ 10 ತಿಂಗಳಲ್ಲಿ ಅಲ್ಲಾಡಿಸಬಹುದು ಎಂಬುದು ನಿಮ್ಮ ಭ್ರಮೆ. ಯಾವುದೇ ಕಾರಣಕ್ಕೂ ಇದು ಸಾಧ್ಯವಿಲ್ಲ. ಮುಂದಿನ 10 ತಿಂಗಳಲ್ಲ, ಮುಂದಿನ 10 ವರ್ಷ ಈ ಸರ್ಕಾರವನ್ನು ಮುಟ್ಟಲು ಸಾಧ್ಯವಿಲ್ಲ. ಮುಡಾ ಹಗರಣ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಸಿಎಂ ರಾಜೀನಾಮೆ ಕೇಳುತ್ತರುವುದು ಅನೈತಿಕವಾದುದು” ಎಂದು ಹೇಳಿದರು.
“ಮೂಡಾ ಅಕ್ರಮದಲ್ಲಿ ಶ್ರೀಮತಿ ಪಾರ್ವತಿ ಹಾಗೂ ಸಿದ್ದರಾಮಯ್ಯ ಅವರ ತಪ್ಪೇನಿದೆ? ಇಲ್ಲಿ ಅಕ್ರಮ ಏನು ನಡೆದಿದೆ? ಸಿದ್ದರಾಮಯ್ಯ ಅವರ ಧರ್ಮಪತ್ನಿ ಪಾರ್ವತಿ ಅವರಿಗೆ ಅವರ ಸಹೋದರ ಖರೀದಿ ಮಾಡಿದ ಜಮೀನನ್ನು ಅರಿಶಿನ ಕುಂಕುಮಕ್ಕೆ ಉಡುಗೊರೆಯಾಗಿ ನೀಡಿದ್ದರು” ಎಂದರು.