ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ, ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯನ್ನು ಕಂಡ ಕಂಡವರು ದುರ್ಬಳಕೆ ಮಾಡುತ್ತಿದ್ದ, ಮುಂದಿನ ದಿನಗಳಲ್ಲಿ ಈ ರೀತಿಯ ವ್ಯವಸ್ಥೆಗಳು ನಡೆದರೆ ಇವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಖಿಲ ಕೊಡವ ಸಮಾಜ ನೇತೃತ್ವದಲ್ಲಿ ನಡೆದ ವಿವಿಧ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕೊಡವ ಜನಾಂಗದ ಹಿರಿಯಣ್ಣನಂತಿರುವ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ಸೇರಿದಂತೆ ವಿವಿಧ ಕೊಡವ ಸಂಘಟನೆಗಳ ಪ್ರಮುಖರು ಭಾಗಿಯಾಗಿ ಈ ಮಹತ್ವದ ನಿರ್ಣಯದೊಂದಿಗೆ ಇತರ ವಿಷಯ ಚರ್ಚಿಸಲಾಯಿತು. ಇತ್ತೀಚಿನ ದಿನಗಳಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಹಾಗೂ ಸಾಂಪ್ರದಾಯಿಕ ಆಭರಣಗಳು ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆಯಾಗುತ್ತಿದ್ದು ಕೊಡವೇತರರು ಕೂಡ ಇದರ ದುರ್ಬಳಕೆ ಮಾಡುತ್ತಿರುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಇತ್ತೀಚೆಗೆ ಬೆಂಗಳೂರಿನ ರೆಸಾರ್ಟ್’ವೊಂದರಲ್ಲಿ ನಡೆದ ಮುಸ್ಲಿಂ ಜನಾಂಗದ ವ್ಯಕ್ತಿಯೊಬ್ಬರ ಮದುವೆಯಲ್ಲಿ ಕೊಡವ ಸಾಂಪ್ರದಾಯಿಕ ಉಡುಗೆ ತೊಡುಗೆ ಸೇರಿದಂತೆ ಕೊಡವ ಸಂಸ್ಕೃತಿಯ ದುರ್ಬಳಕೆ ಆಗಿದ್ದನ್ನು ಖಂಡಿಸಲಾಯಿತು. ಪರಜಾತಿಯನ್ನು ಮದುವೆಯಾದ ಹೆಣ್ಣುಮಗಳೊಬ್ಬಳು ತನ್ನ ಮಗಳ ಮದುವೆಯನ್ನು ಮುಸ್ಲಿಂ ಜನಾಂಗದ ವ್ಯಕ್ತಿಯೊಬ್ಬರ ಜೊತೆ ಮಾಡಿದ್ದು ಇಲ್ಲಿ ವೆಂದು ವರರಿಗೆ ಸಾಂಪ್ರದಾಯಿಕ ಕೊಡವ ಉಡುಪು ಧರಿಸಿದಲ್ಲದೆ, ನಮ್ಮ ಪವಿತ್ರವಾದ ಪತ್ತಾಕ್ ನೀಡಲಾಗಿದೆ, ಇದರೊಂದಿಗೆ ಪಾದರಕ್ಷೆ ಹಾಕಿಕೊಂಡು ಗೊತ್ತುಗುರಿ ಇಲ್ಲದವರಿಂದ ಬಾಳೆ ಕಡಿಸಿ ಕೊಡವ ಪದ್ದತಿಗೆ ಅವಮಾನ ಮಾಡಿದ್ದಾರೆ. ಈ ಹಿಂದೆ ಕೂಡ ಹೊರದೇಶದಲ್ಲಿ ನಮ್ಮವರೆ ನಮ್ಮ ಪವಿತ್ರ ಆಭರಣವಾದ ಪತ್ತಾಕ್’ಗೆ ಅವಮಾನ ಮಾಡಿದ್ದಾರೆ, ಈ ಹಿಂದೆ ಕೂಡ ಹಲವಾರು ಮಂದಿ ಕೊಡವ ಸಂಸ್ಕೃತಿ ಸಾಂಪ್ರದಾಯಕ್ಕೆ ಅವಮಾನ ಮಾಡಿದ್ದಾರೆ. ಕೊಡವಾಮೆಯ ಹೆಸರಿನಲ್ಲಿ ಕಂಡ ಕಂಡ ಜಾತಿ ಜನಾಂಗಕ್ಕೆ ನಮ್ಮ ಪವಿತ್ರವಾದ ಪತ್ತಾಕ್ ನೀಡಲಾಗಿದನ್ನು ಸಭೆ ಖಂಡಿಸಿತು.
ಇತ್ತೀಚೆಗೆ ಕೊಡವ ಸಂಸ್ಕೃತಿ ಸಾಂಪ್ರದಾಯ ಹೈಜಾಕ್ ಆಗುತ್ತಿದ್ದು, ಆಯಾಯ ಜನಾಂಗಕ್ಕೆ ಅವರವರ ಪದ್ದತಿ ಸಂಸ್ಕೃತಿ ಶೋಭೆ ಹೊರತು ಅನ್ಯ ಸಂಸ್ಕೃತಿ ಶೊಭೆ ತರುವುದಿಲ್ಲ ಇದು ಘರ್ಷಣೆಗೆ ಎಡೆ ಮಾಡಿಕೊಡುತ್ತದೆ ಇದಕ್ಕೆ ಅವಕಾಶ ನೀಡದೆ ಅವರವರ ಪದ್ದತಿ ಸಂಸ್ಕೃತಿಯನ್ನು ಆಚರಿಸಿಕೊಂಡು ಹೋದರೆ ನಮಗೂ ಕೂಡ ಅವರ ಸಂಸ್ಕೃತಿ ಬಗ್ಗೆ ತಿಳಿದುಕೊಂಡಂತೆ ಆಗುತ್ತದೆ ಹಾಗೂ ಹೆಮ್ಮೆ ಬರುತ್ತದೆ, ಆದರೆ ಕೊಡವರಲ್ಲದವರು ಹಾಗೂ ಕೊಡವ ಸಂಸ್ಕೃತಿ, ಆಚಾರ ವಿಚಾರ ಹೊಂದಿರದ ಜನಾಂಗ ಕೊಡವ ಸಂಸ್ಕೃತಿಯನ್ನು ದುರ್ಬಳಕೆ ಮಾಡುತ್ತಿರುವುದು ವಿಷಾದನೀಯ ಎಂಬ ಮಾತು ಕೇಳಿಬಂತು. ಹಾಗೇ ಬೇರೆ ಜಾತಿಯನ್ನು ಮದುವೆಯಾಗುವ ಕೊಡವತಿ ಹೆಣ್ಣು ಮಕ್ಕಳು ನಮ್ಮ ಪವಿತ್ರವಾದ ಪತ್ತಾಕ್ ಅನ್ನು ಕೊಂಡೊಯ್ಯುತ್ತಿದ್ದು ಅವರ ಮರುದಿನಕ್ಕೆ ಈ ಪತ್ತಾಕ್ ಯಾವ ಜಾತಿ ಜನಾಂಗದ ಸೊತ್ತು ಎಂದು ಆಯಾಯ ಕುಟುಂಬ ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ಆಯಾಯ ಕೊಡವ ಕುಟುಂಬಗಳು ಗಮನ ಹರಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಂತಹಾ ಕುಟುಂಬಗಳ ಹೆಸರು ಹಾಳಾಗುತ್ತದೆ ಈ ನಿಟ್ಟಿನಲ್ಲಿ ಕುಟುಂಬ ಕ್ರಮ ಕೈಗೊಳ್ಳದಿದ್ದರೆ ವಿವಿಧ ಕೊಡವ ಸಮಾಜ ಹಾಗೂ ಸಂಘ ಸಂಸ್ಥೆಗಳ ಸಹಕಾರದಲ್ಲಿ ಅಖಿಲ ಕೊಡವ ಸಮಾಜ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ ಎಂಬ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು. ಹಾಗೇ ಕೊಡವರು ಕೊಡವರಲ್ಲದವರನ್ನು ಮದುವೆಯಾಗುವುದನ್ನು ನಿಲ್ಲಿಸಬೇಕು, ಒಂದು ಸಮಯ ಮದುವೆಯಾದರೆ ಕೊಡವಾಮೆಯನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕು, ಯಾವುದೇ ಹೆಣ್ಣು ಆಕೆ ಮದುವೆಯಾಗುವ ಸಂಸಾರದ ಸಂಸ್ಕೃತಿಯನ್ನು ಪಾಲನೆ ಮಾಡಬೇಕು ಹೊರತು ಆಕೆ ಬಿಟ್ಟುಹೋದ ಜನಾಂಗದ ಸಂಸ್ಕೃತಿಯನ್ನು ಅಲ್ಲಾ. ಕೊಡವರು ಬೇಡವೆಂದು ಬಿಟ್ಟುಹೋದಮೇಲೆ ಅವರ ಪದ್ದತಿ ಸಂಸ್ಕೃತಿಯನ್ನು ಪಾಲನೆ ಮಾಡಲಿ. ಇಲ್ಲಿಯತನಕ ನಮಗೂ ನೋಡಿ ಸಾಕಾಗಿದೆ ಇನ್ನು ಮುಂದೆ ನೋಡಿಕೊಂಡು ಇರಲು ಸಾಧ್ಯವಿಲ್ಲ. ಕೊಡವ ಸಾಂಪ್ರದಾಯವನ್ನು ಪಾಲಿಸದ ಜನಾಂಗ ಕೊಡವ ಉಡುಗೆ ತೊಡುಗೆ ಹಾಗೂ ಆಭರಣಗಳು ಮತ್ತು ಸಂಸ್ಕೃತಿಯನ್ನು ದುರ್ಬಳಕೆ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಹೊರಗಿನಿಂದ ಬರುವ ಕೊಡವರಲ್ಲದ ರಾಜಕೀಯ ವ್ಯಕ್ತಿಗಳಿಗೆ ಕೊಡವ ಉಡುಪನ್ನು ತೊಡಿಸಿ ನಮ್ಮ ಒಡಿಕತ್ತಿ ಪೀಚೆ ಕತ್ತಿ ಸೇರಿದಂತೆ ನಮ್ಮ ಸಾಂಪ್ರದಾಯಿಕ ಉಡುಗೆ ಅಥವಾ ಆಭರಣಗಳನ್ನು ನೀಡುವುದನ್ನು ಕೂಡ ನಿಲ್ಲಿಸಬೇಕು, ಅದರ ಬದಲು ಕಾವೇರಮ್ಮೆ ಇಗ್ಗುತಪ್ಪನ ಭಾವಚಿತ್ರ ಅಥವಾ ಚಿನ್ನದ, ಬೆಳ್ಳಿಯ ಮೂರ್ತಿ ನಿಮ್ಮ ಶಕ್ತಿಗೆ ಅನುಸಾರವಾಗಿ ನೀಡಿ ಅವರು ಅದನ್ನು ಕೊಂಡೊಯ್ದು ಪೂಜಿಸಲಿ ಎಂಬ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಕೊಡವರು ಪರರಿಗೆ ಆಸ್ತಿ ಮಾರಾಟ ಮಾಡದಂತೆ ಹಾಗೂ ಅನಿವಾರ್ಯವಾದರೆ ಕೊಡವರಿಗೆ ನೀಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಕೊಡವರ ಆಸ್ತಿ ಉಳಿದರೆ ಮಾತ್ರ ಕೊಡವಾಮೆ ಕೊಡವ ಸಂಸ್ಕೃತಿ ಉಳಿಯಲು ಸಾಧ್ಯ ಎಂಬ ಮಾತು ಕೇಳಿಬಂತು. ಇದರ ಜೊತೆಗೆ ನಾವು ಬ್ರೀಟಿಷ್ ಸಂಸ್ಕೃತಿಗೆ ಮಾರು ಹೋಗದೆ ನಮ್ಮ ತನವನ್ನು ಉಳಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ವಿರಾಜಪೇಟೆ ಕಾವೇರಿ ಆಶ್ರಮದ ವಿಷಯವಾಗಿ ಸುದೀರ್ಘ ಚರ್ಚೆ ನಡೆದು ಕೊಡವ ಜನಾಂಗದ ಹೆಮ್ಮೆಯ ಆಸ್ತಿಯಾಗಿರುವ ಕಾವೇರಿ ಆಶ್ರಮ ಯಾವುದೇ ಕಾರಣಕ್ಕೂ ಪರರ ಪಾಲಾಗದಂತೆ ಹಾಗೂ ಇದಕ್ಕೆ ಪೂರಕವಾದ ಹೋರಾಟಕ್ಕೆ ವಿವಿಧ ಕೊಡವ ಸಮಾಜಗಳು ಅಖಿಲ ಕೊಡವ ಸಮಾಜದೊಂದಿಗೆ ಕೈಜೊಡಿಸುವ ನಿರ್ಣಯವನ್ನು ಕೈಗೊಳ್ಳಲಾಯಿತು. ಮುಂದಿನ ದಿನಗಳಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿಯೇ ಕಾವೇರಿ ಆಶ್ರಮದ ವಿಷಯವಾಗಿ ಸಭೆ ನಡೆಯಬೇಕು ಎಂಬ ತಿರ್ಮಾನ ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ವಹಿಸಿ ಮಾತನಾಡಿದರೆ, ಉಪಾಧ್ಯಕ್ಷ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಖಜಾಂಚಿ ಮಂಡೇಪಂಡ ಸುಗುಣ ಮುತ್ತಣ, ಕಾರ್ಯದರ್ಶಿ ಕೀತಿಯಂಡ ವಿಜಯ್, ಸಹ ಕಾರ್ಯದರ್ಶಿ ಮೂವೇರ ರೇಖಾ ಪ್ರಕಾಶ್, ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ, ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸೇರಿದಂತೆ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರೆ. ಸಭೆಯಲ್ಲಿ ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ಸೇರಿದಂತೆ ವಿವಿಧ ಕೊಡವ ಸಮಾಜಗಳ ಹಾಗೂ ಕೊಡವ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಪ್ರಮುಖರಾದ ಕೊಲ್ಲೀರ ಉಮೇಶ್, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಕೊಡವಾಮೆ ಕೊಂಡಾಟ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಳಿಯಪ್ಪ, ವಿರಾಜಪೇಟೆ ಕೊಡವ ಸಮಾಜ ಅಧ್ಯಕ್ಷ ಕುಂಬೇರ ಮನು ಕುಮಾರ್, ಕಾರ್ಯದರ್ಶಿ ಮಾಳೇಟೀರ ಶ್ರೀನಿವಾಸ್, ಅಮ್ಮತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್, ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ, ಕೊಡಗು ಏಕೀಕರಣ ರಂಗದ ಪ್ರಮುಖರಾದ ತೇಲಪಂಡ ಸೋಮಯ್ಯ, ಪ್ರಮುಖರಾದ ಮಾಚಿಮಾಡ ರವೀಂದ್ರ, ಕರ್ನಲ್ ಚೆಪ್ಪುಡೀರ ಮುತ್ತಣ್ಣ, ಗರ್ವಾಲೆ ಕೊಡವ ಸಮಾಜದ ಅಧ್ಯಕ್ಷ ಶರ್ಕಂಡ ಸೋಮಯ್ಯ, ಪೊನ್ನಂಪೇಟೆ ಕೊಡವ ಸಮಾಜ ಉಪಾಧ್ಯಕ್ಷ ಚಿರಿಯಪಂಡ ಇಮ್ಮಿ ಉತ್ತಪ್ಪ, ಸದಸ್ಯೆ ಮೂಕಳೇರ ಕಾವ್ಯ ಮದು ಕುಮಾರ್ ಸೇರಿದಂತೆ ಇತರರು ಮಾತನಾಡಿದರು. ಸಭೆಯ ಮೊದಲಿಗೆ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ ಸ್ವಾಗತಿಸಿದರೆ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್ ಪ್ರಾರ್ಥಿಸಿ, ಚಮ್ಮಟೀರ ಪ್ರವೀಣ್ ಉತ್ತಪ್ಪ ವಂದಿಸಿದರು.