ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣ ಹಾಗು ವಾಲ್ಮೀಕಿ ನಿಗಮ ಹಗರಣಗಳ ಬಗ್ಗೆ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗು ಬಿಜೆಪಿ ಆರೋಪ ಮಾಡುತ್ತಿವೆ. ಈ ನಡುವೆ ಬೆಂಗಳೂರಿನಿಂದ ಮೈಸೂರು ಹಾಗು ಮೈಸೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆ ಬಳಿಕ ಮಾಜಿ ಶಾಸಕ ಪ್ರೀತಂಗೌಡ ಮುಂದಾಳತ್ವದಲ್ಲಿ ಪಾದಯಾತ್ರೆಗೆ ನಿರ್ಧಾರ ಮಾಡಿದ್ದಕ್ಕೆ ಕುಮಾರಸ್ವಾಮಿ ಕೆಂಡ ಕಾರಿದ್ದರು. ದೇವೇಗೌಡರ ಕುಟುಂಬದ ಮಾನ ಹರಾಜು ಹಾಕಿದವನ ಜೊತೆಯಲ್ಲಿ ನಾವು ಬೆಂಬಲ ಕೊಡಬೇಕಾ.? ಹಾಸನದ ಬೀದಿ ಬೀದಿಯಲ್ಲಿ ಪೆನ್‌ಡ್ರೈವ್ ಹಂಚಿದವರು..? ಬಿಜೆಪಿ ನಾಯಕರಿಗೆ ಗೊತ್ತಿಲ್ವಾ..? ಆತನ ಪಕ್ಕದಲ್ಲಿ ಕುಳಿತು ನಾನು ಚರ್ಚೆ ಮಾಡ್ಬೇಕಾ..? ಎಂದು ಬಹಿರಂಗ ವಾಗ್ದಾಳಿ ಮಾಡಿದ್ರು. ಇದ್ರ ಬೆನ್ನಲ್ಲೇ ಸಂಧಾನ ಸಭೆ ನಡೆದಿದೆ. ಕುಮಾರಸ್ವಾಮಿ ಮನವೊಲಿಕೆ ಮಾಡುವ ಕೆಲಸ ಆಗಿದೆ.
ಬಿಜೆಪಿ ಹೈಕಮಾಂಡ್ ನಾಯಕರು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮನವೊಲಿಕೆ ಮಾಡುವ ಕೆಲಸ ಮಾಡಿದ್ದಾರೆ. ಸಂಸತ್ ಭವನದ H.D ಕುಮಾರಸ್ವಾಮಿ ಅವರ ಕಚೇರಿಯಲ್ಲಿ ಭೇಟಿ ಮಾಡಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ರಾಧಮೋಹನ್ ದಾಸ್, ರಾಜ್ಯ ಬಿಜೆಪಿ ಅಧ್ಯಕ್ಷ B.Y ವಿಜಯೇಂದ್ರ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ಸಂಸದ ಮಲ್ಲೇಶ್ ಬಾಬು ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಜೆಡಿಎಸ್ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸ ಮಾಡಿದ್ದು, ಪ್ರೀತಂಗೌಡರನ್ನು ಜವಾಬ್ದಾರಿಯಿಂದ ಬಿಡುಗಡೆ ಮಾಡುವ ಬಗ್ಗೆಯೂ ಬಿಜೆಪಿ ನಾಯಕರು ಕುಮಾರಸ್ವಾಮಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಪಾದಯಾತ್ರೆ ಸ್ಥಗಿತ ಆದರೆ ಮೈತ್ರಿ ಪಕ್ಷದ ನಡುವೆ ಕೆಟ್ಟ ಅಭಿಪ್ರಾಯ ಹೋಗಲಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಮಳೆ ಇರಬಹುದು ಆದರೆ ಈಗ ಪಾದಯಾತ್ರೆಗೆ ಸಕಾಲ ಆಗಿದೆ. ಯಾಕೆಂದರೆ ರಾಜ್ಯದಲ್ಲಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅವಕಾಶ ನೀಡುವ ಬಗ್ಗೆ ಬೆಳವಣಿಗೆಗಳು ನಡೀಯುತ್ತಿವೆ. ಸ್ವತಃ ಗವರ್ನರ್ ಮುಖ್ಯಮಂತ್ರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಅತ್ತ ಗವರ್ನರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಈ ಹಿಂದೆ ಸಿದ್ದರಾಮಯ್ಯ ವಿರುದ್ಧ ಈ ರೀತಿಯಲ್ಲಿ ಯಾವುದು ನಡೆದಿರಲಿಲ್ಲ. ಈಗ ಅವರ ಮೇಲೆ ಹಗರಣಗಳು ಸುತ್ತಿಕೊಂಡಿವೆ. ನಾವು ಇದನ್ನು ಮುಂದಿಟ್ಟು ಜನರ ಮುಂದೆ ಹೋದರೆ, ಸಿದ್ದರಾಮಯ್ಯನ ಶಕ್ತಿ ಕುಗ್ಗಿಸಿ, ಭ್ರಷ್ಟ ಕಾಂಗ್ರೆಸ್ ಎಂದು ಜನರಿಗೆ ತಮನವರಿಕೆ ಮಾಡಿಕೊಡಬಹುದು ಎಂದು ಮನವೊಲಿಸಿದ್ದಾರೆ.
ಬಿಜೆಪಿ ಹಾಗು ಜೆಡಿಎಸ್ ನಡುವೆಯೇ ಗೊಂದಲಗಳು ಆದರೆ ಪ್ರಯೋಜನ ಆಗಲ್ಲ. ರಾಜ್ಯ ಕಾಂಗ್ರೆಸ್ ವಿರುದ್ಧ ನಾವು ಒಗ್ಗಟ್ಟಿನ ಹೋರಾಟ ಮಾಡಬೇಕು. ಇದೇ ಬಿಸಿಯಲ್ಲಿ ನಾವು ಪಾದಯಾತ್ರೆ ಮಾಡೋಣ. ಪಾದಯಾತ್ರೆಗೆ ನಿಮ್ಮ ಸಹಕಾರ ಅತ್ಯಗತ್ಯ ಎಂದು ಮನವೊಲಿಕೆ ಮಾಡಿದ್ದು, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ, ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ ಕುಮಾರಸ್ವಾಮಿ ಎನ್ನಲಾಗಿದೆ. ಆಗಸ್ಟ್ 3ರಂದು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪಾದಯಾತ್ರೆ ಉದ್ಘಾಟಿಸಲಿದ್ದಾರೆ ಎನ್ನಲಾಗಿದೆ. ಇನ್ನು ಪ್ರೀತಂಗೌಡ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸುತ್ತಲೇ ನಿನ್ನೆ ರಾಜ್ಯ ಬಿಜೆಪಿ ಕಚೇರಿಗೆ ಬಂದಿದ್ದ ಪ್ರೀತಂ ಗೌಡ, ರಾಜ್ಯ ಕಚೇರಿಯಿಂದ ಹೋಗುವಾಗ ಮಾಧ್ಯಮಗಳ ಕಣ್ಣು ತಪ್ಪಿಸಿ ಪರಾರಿಯಾಗಿದ್ದರು.
ಕೃಷ್ಣಮಣಿ