
ಬೆಂಗಳೂರು: ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ಅನ್ನು ನೀಡಿದೆ.ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ನ್ಯಾಯಾಲಯದ ಈ ತೀರ್ಪು ಐತಿಹಾಸಿಕವಾಗಿದ್ದು, ಮುಕ್ತವಾಗಿ ನಾನು ಸ್ವಾಗತಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನದ ಹಾದಿಯಲ್ಲಿನ ಮುಖ್ಯ ಅಡ್ಡಿಯೊಂದು ನಿವಾರಣೆಯಾಗಿದೆ. ತೀರ್ಪಿನಲ್ಲಿರುವ ವಿವಾದಾತ್ಮಕ ಕೆನೆಪದರದ ಬಗೆಗಿನ ಅಂಶವೂ ಸೇರಿದಂತೆ ಇತರ ವಿಷಯಗಳ ಬಗ್ಗೆ ಪರಿಶಿಷ್ಟ ಜಾತಿಯ ನಾಯಕರು ಮತ್ತು ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದಿದ್ದಾರೆ.
ಪರಿಶಿಷ್ಟರಲ್ಲಿ ಅತಿಹಿಂದುಳಿದವರನ್ನು ಗುರುತಿಸಿ ಒಳಮೀಸಲಾತಿ ನೀಡುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದ್ದಾಗಿದೆ. ನ್ಯಾಯಾಲಯದ ಈ ತೀರ್ಪನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ.
— Siddaramaiah (@siddaramaiah) August 1, 2024
ಸುಪ್ರೀಂ ಕೋರ್ಟ್ ತೀರ್ಪಿನಿಂದಾಗಿ ಒಳಮೀಸಲಾತಿ ಅನುಷ್ಠಾನದ ಹಾದಿಯಲ್ಲಿನ ಮುಖ್ಯ ಅಡ್ಡಿಯೊಂದು…
ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲಾತಿ ಬಗ್ಗೆ ಅವಸರದಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ಪರಿಶಿಷ್ಟ ಜಾತಿಯೊಳಗಿನ ಮೀಸಲಾತಿಯನ್ನು ಸಂವಿಧಾನ ತಿದ್ದುಪಡಿಯ ಮೂಲಕ ಅನುಷ್ಠಾನಗೊಳಿಸಬಹುದು ಎಂದು ಕೇಂದ್ರ ಬಿಜೆಪಿ ಸರ್ಕಾರವೇ ರಚಿಸಿದ್ದ ಉಷಾ ಮೆಹ್ರಾ ಸಮಿತಿ ಸ್ಪಷ್ಟವಾಗಿ ತಿಳಿಸಿದ್ದರೂ ಕೇಂದ್ರ ಸರ್ಕಾರ ಇಲ್ಲಿಯ ವರೆಗೆ ತೀರ್ಮಾನ ಕೈಗೊಳ್ಳದೆ ಮೂಲೆಗೆ ಸರಿಸಿತ್ತು ಎಂದು ಸಿಎಂ ಟೀಕಿಸಿದ್ದಾರೆ.