ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯ ಪಲ್ಲೆಕೆಲೆಯ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. ಈ ಸರಣಿಯನ್ನು ಈಗಾಗಲೇ ಟೀಂ ಇಂಡಿಯಾ 2-0 ಅಂತರದಿಂದ ಗೆದ್ದುಕೊಂಡಿದ್ದರಿಂದ ಭಾರತ ತಂಡದಲ್ಲಿ ಬೆಂಚ್ ಕಾದಿದ್ದ ಆಟಗಾರರಿಗೆ ಅವಕಾಶ ನೀಡಲಾಗಿತ್ತು. ನಿರೀಕ್ಷೆಯಂತೆ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದ ಶ್ರೀಲಂಕಾ ತಂಡ ಪಂದ್ಯ ಮುಗಿಯುವ ಕೊನೆಯ ಅರ್ಧಗಂಟೆಯವರೆಗೂ ವಿಜಯಲಕ್ಷ್ಮೀಯನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. ಆದರೆ ಭಾರತ ತಂಡದ ನೂತನ ನಾಯಕನಾಗಿ ಆಯ್ಕೆಯಾಗಿರುವ ಸೂರ್ಯಕುಮಾರ್ ಯಾದವ್ ಅವರ ಚಾಣಾಕ್ಷ ನಿರ್ಧಾರಗಳ ಎದುರು ಆತಿಥೇಯ ಲಂಕಾ ತಂಡ ಗೆಲ್ಲುವ ಪಂದ್ಯವನ್ನು ಸೋಲಬೇಕಾಯಿತು. ಇಡೀ ಸರಣಿಯಲ್ಲಿ ಲಂಕಾ ತಂಡದ ಸೋಲಿಗೆ ಕಾರಣವಾಗಿದ್ದ ಮಧ್ಯಮ ಕ್ರಮಾಂಕ ಹಾಗೂ ಕೆಳಕ್ರಮಾಂಕ ಈ ಪಂದ್ಯದ ಸೋಲಿಗೂ ಕಾರಣವಾಯಿತು.
ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ಬ್ಯಾಟಿಂಗ್ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಬ್ಯಾಟಿಂಗ್ ಮೂಲಕ ಇವರಿಬ್ಬರೂ ಹಲವು ಸೋಲುವ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಆದರೆ ಇಬರಿಬ್ಬರು ಬೌಲಿಂಗ್ ಮಾಡಬಲ್ಲರು ಎನ್ನುವುದು ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿರಲಿಲ್ಲ. ಬರಿ ಬೌಲಿಂಗ್ ಮಾಡುವುದಷ್ಟೇ ಅಲ್ಲ ಸೋಲುವ ಪಂದ್ಯವನ್ನು ಟೈ ಮಾಡುವ ಮೂಲಕ ಕ್ರಿಕೆಟ್ ಲೋಕವನ್ನೇ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಕಳೆದೆರಡು ಪಂದ್ಯಗಳಲ್ಲಿ ಕೊಂಚ ದುರ್ಬಲವಾಗಿ ಕಾಣುತ್ತಿದ್ದ ಲಂಕಾ ಬೌಲಿಂಗ್ ವಿಭಾಗ ಈ ಪಂದ್ಯದಲ್ಲಿ ಅದ್ಭುತ ಆರಂಭ ನೀಡಿತು. ಚೊಚ್ಚಲ ಪಂದ್ಯವನ್ನಾಡಿದ ಚಾಮಿಂದು ವಿಕ್ರಮಸಿಂಘೆ ರನ್ಗಳಿಗೆ ಕಡಿವಾಣ ಹಾಕಿ ಭಾರತದ ಆರಂಭಿಕರನ್ನು ಒತ್ತಡಕ್ಕೆ ಸಿಲುಕಿಸಿದರು. ಅದರ ಪರಿಣಾಮವಾಗಿ ಯಶಸ್ವಿ ಜೈಸ್ವಾಲ್ 10 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸಂಜು ಸ್ಯಾಮನ್ಸ್ ಈ ಪಂದ್ಯದಲ್ಲೂ ಖಾತೆ ತೆರೆಯದೆ ನಿರ್ಗಮಿಸಿದರು. ರಿಂಕು ಸಿಂಗ್ ಕೂಡ 1 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.
ಹೀಗಾಗಿ ತಂಡ ಕೇವಲ 14 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಆ ನಂತರವೂ ತಂಡ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ ಸಾಗಿತು. ಮೊದಲೆರಡು ಪಂದ್ಯಗಳಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ನಾಯಕ ಸೂರ್ಯ ಕೂಡ ಈ ಪಂದ್ಯದಲ್ಲಿ ಒಂದಂಕಿಗೆ ಸುಸ್ತಾದರು. ಶಿವಂ ದುಬೆ ಕೂಡ 13 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಹೀಗಾಗಿ ಭಾರತ 48 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿತು ಆದರೆ ಆ ಬಳಿಕ ಜೊತೆಯಾದ ರಿಯಾನ್ ಪರಾಗ್ ಹಾಗೂ ಶುಭ್ಮನ್ ಗಿಲ್ ತಂಡವನ್ನು 100 ರನ್ಗಳ ಗಡಿ ದಾಟಿಸಿದರು. ಈ ಇಬ್ಬರು ಅರ್ಧಶತಕದ ಜೊತೆಯಾಟ ಕೂಡ ಹಂಚಿಕೊಂಡರು. ಈ ವೇಳೆ ಪರಾಗ್ 26 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರೆ, ಶುಭ್ಮನ್ ಗಿಲ್ ಇನ್ನಿಂಗ್ಸ್ 39 ರನ್ಗಳ ಅಂತ್ಯವಾಯಿತು. ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ 25 ರನ್ಗಳ ಉಪಯುಕ್ತ ಕೊಡುಗೆ ನೀಡಿದರು. ಹೀಗಾಗಿ ತಂಡ 9 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು.
ಈ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ಆರಂಭಿರಿಬ್ಬರು ಉತ್ತಮ ಆರಂಭ ಒದಗಿಸಿಕೊಟ್ಟರು. ಇಬ್ಬರ ನಡುವೆ ಮೊದಲ ವಿಕೆಟ್ಗೆ 58 ರನ್ಗಳ ಜೊತೆಯಾಟ ಕೂಡ ಇತ್ತು. ಈ ವೇಳೆ ಪಾತುಮ್ ನಿಸ್ಸಾಂಕ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಕುಸಾಲ್ ಪೆರೇರಾ, ಮೆಂಡಿಸ್ ಜೊತೆಗೂಡಿ ತಂಡವನ್ನು ಸುಲಭವಾಗಿ ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಮೆಂಡಿಸ್ ವಿಕೆಟ್ ಪತನವಾದ ಬಳಿಕ ಇಡೀ ಪಂದ್ಯದ ಚಿತ್ರಣವೇ ಬದಲಾಯಿತು. ಮೆಂಡಿಸ್ 46 ರನ್ಗಳ ಇನ್ನಿಂಗ್ಸ್ ಆಡುವಲ್ಲಿ ಭಾರತದ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೊಡುಗೆಯೂ ಇತ್ತು. ಮೆಂಡಿಸ್ ನೀಡಿದ ಸುಲಭ ಕ್ಯಾಚ್ ಅನ್ನು ಸಂಜು ಕೈಚೆಲ್ಲಿದರು.
ಅದಾಗ್ಯೂ ಈ ಜೋಡಿ 110 ರನ್ಗಳಿಗೆ ತಂಡದ ಸ್ಕೋರನ್ನು ಕೊಂಡೊಯ್ದಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಲಂಕಾ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಗಳಾಯಿತು. ಈ ವೇಳೆ ನಾಯಕತ್ವದಲ್ಲಿ ಬುದ್ದಿವಂತಿಕೆ ತೋರಿದ ಸೂರ್ಯ, ಸೂಕ್ತ ಬೌಲರ್ಗಳನ್ನು ಬಳಸಿದರು. ಇದರಿಂದ ಲಂಕಾ ತಂಡ ರನ್ಗಳಿಸಲು ಸಾಧ್ಯವಾಗದೆ ಒತ್ತಡಕ್ಕೆ ಸಿಲುಕಿತು. ಜೊತೆಗೆ ವಿಕೆಟ್ಗಳನ್ನು ಕಳೆದುಕೊಂಡಿತು. ಈ ವೇಳೆ 18ನೇ ಓವರ್ನಲ್ಲಿ ಖಲೀಲ್ ಅಹ್ಮದ್ 5 ವೈಡ್ ಎಸೆದು ತಂಡವನ್ನು ಸೋಲಿನ ದವಡೆಗೆ ತಳ್ಳಿದ್ದರು. ಆದರೆ ಮತ್ತೊಮ್ಮೆ ಸೂರ್ಯ ತಮ್ಮ ನಾಯಕತ್ವದ ನಿರ್ಧಾರದಿಂದ ಪಂದ್ಯವನ್ನು ಭಾರತದ ವಾಲಿಸಿದರು.
19ನೇ ಓವರ್ ಬೌಲಿಂಗ್ ಮಾಡಲು ರಿಂಕು ಸಿಂಗ್ ಬಂದಾಗ ಎಲ್ಲರೂ ಅಚ್ಚರಿಗೊಂಡರು. ರಿಂಕು ಸಿಂಗ್ ತಮ್ಮ ಓವರ್ ನ ಎರಡನೇ ಎಸೆತದಲ್ಲೇ ವಿಕೆಟ್ ಪಡೆದರು. ಕೊನೆಯ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದು ಶ್ರೀಲಂಕಾ ತಂಡಕ್ಕೆ ಶಾಕ್ ಕೊಟ್ಟರು. 19ನೇ ಓವರ್ ನಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು.
ಕೊನೆಯ ಓವರ್ ಮಾಡಲು ಮೊಹಮ್ಮದ್ ಸಿರಾಜ್ ಬಂದರು, ಆದರೆ ಮನಸ್ಸು ಬದಲಾಯಿಸಿದ ನಾಯಕ ಸೂರ್ಯಕುಮಾರ್ ಯಾದವ್ ತಾವೇ ಬೌಲಿಂಗ್ ಮಾಡಲು ನಿರ್ಧರಿಸಿದರು. ಬರೀ ಬ್ಯಾಟರ್ ಆಗಿ ನೋಡಿದ್ದ ಅಭಿಮಾನಿಗಳಿಗೆ ಸೂರ್ಯಕುಮಾರ್ ಯಾದವ್ ಇಂತಹ ಸಮಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಬಂದಿದ್ದು ಅಚ್ಚರಿ ಉಂಟು ಮಾಡಿತ್ತು. ಆದರೆ ತಮ್ಮ ಓವರ್ ನ ಎರಡನೇ ಎಸೆತದಲ್ಲೇ ಕಮಿಂದು ಮೆಂಡಿಸ್ ಅವರನ್ನು ಔಟ್ ಮಾಡಿದರು. ಮೂರನೇ ಎಸೆತದಲ್ಲಿ ಮಹೀಶ್ ತೀಕ್ಷಣ ಕೂಡ ಔಟಾದರು. ಕೊನೆಯ ಮೂರು ಎಸೆತಗಳಲ್ಲಿ ಶ್ರೀಲಂಕಾ ಗೆಲುವಿಗೆ ಆರು ರನ್ ಬೇಕಿತ್ತು, ಆದರೆ ಕೇವಲ ಐದು ರನ್ ಗಳಿಸಿದ ಶ್ರೀಲಂಕಾ ಪಂದ್ಯವನ್ನು ಟೈ ಮಾಡಿಕೊಂಡಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಕೇವಲ 2 ರನ್ ಕಲೆಹಾಕಿತು. ಸುಂದರ್ ಎಸೆದ ಈ ಓವರ್ನಲ್ಲಿ 1 ರನ್ ವೈಡ್ನಿಂದ ಬಂತು. ಉಳಿದಂತೆ ಮುಂದಿನ ಎರಡು ಎಸೆತಗಳಲ್ಲಿ ಲಂಕಾ ಸತತ 2 ವಿಕೆಟ್ ಕಳೆದುಕೊಂಡಿತು. ಈ ಗುರಿ ಬೆನ್ನಟ್ಟಿದ ಭಾರತದ ಪರ ನಾಯಕ ಸೂರ್ಯ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.