
ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಿಯಮಗಳನ್ನು ಉಲ್ಲಂಘಿಸಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಡಾ ಮಾಜಿ ಅಧ್ಯಕ್ಷ ಬಾಬುವಾಲಿ, ಹಿಂದಿನ ಆಯುಕ್ತ ಅಭಯ್ ಕುಮಾರ್ ಹಾಗೂ ಇತರೆ ಮೂವರ ವಿರುದ್ಧ ನಗರದ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧನದ ಭೀತಿ ಎದುರಾಗಿದೆ.ಸರ್ಕಾರದ ಸೂಚನೆ ಅನ್ವಯ, ಬುಡಾ ಹಾಲಿ ಆಯುಕ್ತ ಶ್ರೀಕಾಂತ ಚಿಮಕೋಡೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜುಲೈ 11ರಂದೇ ಆಯುಕ್ತರು ಎಸ್ಪಿಗೆ ಪತ್ರ ಬರೆದಿದ್ದಾರೆ. ಆದರೆ, ಜುಲೈ 24ರಂದು ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ಹಸ್ತಕ್ಷೇಪದಿಂದ ಪೊಲೀಸರು ವಿಳಂಬ ಮಾಡಿದ್ದಾರೆ. ಬಂಧನಕ್ಕೂ ಮುಂದಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.ಬುಡಾದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಎರಡೂ ತನಿಖಾ ತಂಡಗಳು ವರದಿ ಸಲ್ಲಿಸಿ ಹಲವು ತಿಂಗಳಾಗಿವೆ.
ಆದರೆ, ತ್ವರಿತ ಗತಿಯಲ್ಲಿ ಕ್ರಮಗಳಾಗುತ್ತಿಲ್ಲ. ಈ ಸಂಬಂಧ ದೂರುದಾರ, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ತಮ್ಮದೇ ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೂ ಮನವಿ ಸಲ್ಲಿಸಿದ್ದರು.ಮುಖ್ಯಮಂತ್ರಿಯವರಿಗೂ ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು.
ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.2020ರ ನವೆಂಬರ್ 27ರಿಂದ 2023ರ ಮೇ 23ರ ಅವಧಿಯಲ್ಲಿ ನಿವೇಶನಗಳ ಹಂಚಿಕೆಯಲ್ಲಿ ‘ಬುಡಾ’ದಲ್ಲಿ ನಿಯಮಗಳನ್ನು ಅನುಸರಿಸಿಲ್ಲ. ಇದರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅರವಿಂದಕುಮಾರ ಅರಳಿ ಅವರು ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು. ಅವರ ದೂರು ಆಧರಿಸಿ ಇಲಾಖೆಯು ಕಲಬುರಗಿ ವಿಭಾಗೀಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕ ಎ.ಎಸ್. ಕಾಂಬಳೆ, ಜಂಟಿ ನಿರ್ದೇಶಕಿ ಶಾಂತಲಾ ಎಂ.ಎಸ್. ಹಾಗೂ ಧಾರವಾಡ ವಲಯ ಕಚೇರಿಯ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕ ವಿವೇಕ ಎನ್. ಕಾರೇಕರ್ ಅವರನ್ನು ಒಳಗೊಂಡ ಜಂಟಿ ಪರಿವೀಕ್ಷಣಾ ತಂಡ ರಚಿಸಿತ್ತು.
ಜಂಟಿ ಪರಿವೀಕ್ಷಣಾ ತಂಡದ ಮೂವರು ಅಧಿಕಾರಿಗಳ ತಂಡವು 2023ರ ಸೆಪ್ಟೆಂಬರ್ 13ರಿಂದ ಸೆಪ್ಟೆಂಬರ್ 15ರ ವರೆಗೆ ಬುಡಾದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿ, ಲೇಔಟ್‌ಗಳಿಗೆ ಭೇಟಿ ನೀಡಿ ನಿವೇಶನಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿತ್ತು.
ನಿಯಮಗಳನ್ನು ಪಾಲಿಸದೆ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಿತ್ತು. ಅದರ ಪ್ರಕಾರ ಅಂದಿನ ಬುಡಾ ಆಯುಕ್ತ ಅಭಯ್ ಕುಮಾರ್ ಅವರನ್ನು ನಗರಾಭಿವೃದ್ಧಿ ಇಲಾಖೆಯು 2023ರ ಫೆ. 14ರಂದು ಸೇವೆಯಿಂದ ಅಮಾನತುಗೊಳಿಸಿತ್ತು. ಆದರೆ, ಅಧ್ಯಕ್ಷರ ವಿರುದ್ಧ ಕ್ರಮ ಕೈಗೊಳ್ಳಲು ಏಕೆ ಹಿಂದೇಟು ಹಾಕಲಾಗುತ್ತಿದೆ ಎಂದು ದೂರುದಾರರು ಆಕ್ಷೇಪ ಎತ್ತಿದ್ದರು. ಪ್ರಕರಣ ಸಂಬಂಧ ಬಾಬುವಾಲಿ ಅವರನ್ನು




